ಬಿಲ್ ಪಡೆದು ಅಪ್​ಲೋಡ್ ಮಾಡಿ, ಬಹುಮಾನ ಗೆಲ್ಲಿ; ಮೇರಾ ಬಿಲ್ ಮೇರಾ ಅಧಿಕಾರ್ ಸ್ಕೀಮ್ ಇವತ್ತಿನಿಂದ

|

Updated on: Sep 01, 2023 | 2:51 PM

Mera Bill Mera Adhikaar: ಇನ್ವಾಯ್ಸ್ ಇನ್ಸೆಂಟಿವ್ ಸ್ಕೀಮ್ ಎನಿಸಿದ ಮೇರಾ ಬಿಲ್ ಮೇರಾ ಅಧಿಕಾರ್ ಇಂದು (2023 ಸೆಪ್ಟೆಂಬರ್ 1) ಆರಂಭವಾಗಿದ್ದು ಒಂದು ವರ್ಷ ಪ್ರಾಯೋಗಿಕವಾಗಿ ದೇಶಾದ್ಯಂತ ಚಾಲನೆಯಲ್ಲಿರುತ್ತದೆ. ಗ್ರಾಹಕರು ತಾವು ಖರೀದಿಸುವ ವಸ್ತುವಿಗೆ ಜಿಎಸ್​ಟಿ ಬಿಲ್ ಪಡೆದು ಅದನ್ನು ನಿಗದಿತ ಆ್ಯಪ್ ಮತ್ತು ಪೋರ್ಟಲ್​ಗೆ ಅಪ್​ಲೋಡ್ ಮಾಡಿದರೆ, ಲಕ್ಕಿ ಡ್ರಾ ಮೂಲಕ ಹಲವು ಮಂದಿಗೆ ಬಹುಮಾನ ಕೊಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ...

ಬಿಲ್ ಪಡೆದು ಅಪ್​ಲೋಡ್ ಮಾಡಿ, ಬಹುಮಾನ ಗೆಲ್ಲಿ; ಮೇರಾ ಬಿಲ್ ಮೇರಾ ಅಧಿಕಾರ್ ಸ್ಕೀಮ್ ಇವತ್ತಿನಿಂದ
ಮೇರಾ ಬಿಲ್ ಮೇರಾ ಅಧಿಕಾರ್
Follow us on

ನವದೆಹಲಿ, ಸೆಪ್ಟೆಂಬರ್ 1: ತೆರಿಗೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು (Tax Awareness) ಮತ್ತು ಜಿಎಸ್​ಟಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ತಡೆಯಲು ಕೇಂದ್ರ ಸರ್ಕಾರ ಮೇರಾ ಬಿಲ್ ಮೇರಾ ಅಧಿಕಾರ್ ಯೋಜನೆಯನ್ನು (Mera bill Mera Adhikaar Scheme) ರೂಪಿಸಿದೆ. ಇನ್ವಾಯ್ಸ್ ಇನ್ಸೆಂಟಿವ್ ಸ್ಕೀಮ್ ಆಗಿರುವ ಇದು ಇಂದಿನಿಂದಲೇ ಚಾಲನೆಗೆ ಬರುತ್ತಿದೆ. ಗುಜರಾತ್, ಹರ್ಯಾಣ, ಪುದುಚೇರಿ, ಅಸ್ಸಾಮ್, ದಾದ್ರ ನಗರ್ ಹವೇಲಿ, ದಮನ್ ಮತ್ತು ದಿಯು ಪ್ರದೇಶಗಳಲ್ಲಿ ಈ ಯೋಜನೆಯ ಪ್ರಯೋಗ ನಡೆಸಲಾಗಿತ್ತು. ಈಗ ಎಲ್ಲಾ ರಾಜ್ಯಗಳಿಗೂ ಇದನ್ನು ಜಾರಿಗೆ ತರಲಾಗಿದೆ. ಗ್ರಾಹಕರು ತಾವು ಖರೀದಿಸುವ ವಸ್ತುವಿಗೆ ಜಿಎಸ್​ಟಿ ಬಿಲ್ ಕೇಳಿ ಪಡೆಯುವುದನ್ನು ಉತ್ತೇಜಿಸಲು ಈ ಪ್ರೋತ್ಸಾಹಕ ಯೋಜನೆ ಆರಂಭಿಸಲಾಗಿದೆ. ಬಿಲ್ ಪಡೆದು ಒಂದು ಕೋಟಿ ರೂವರೆಗೆ ಬಹುಮಾನ ಗೆಲ್ಲುವ ಅವಕಾಶವೂ ಜನರಿಗೆ ಸಿಗುತ್ತದೆ.

ಜಿಎಸ್​ಟಿ ನೊಂದಾಯಿತ ವ್ಯಾಪಾರಿಗಳಿಂದ ಸರಕುಗಳನ್ನು ಪಡೆಯುವ ಗ್ರಾಹಕರು ಮೇರಾ ಬಿಲ್ ಮೇರಾ ಅಧಿಕಾರ್ ಯೋಜನೆಗೆ ಅರ್ಹರಾಗಿರುತ್ತಾರೆ. ಜಿಎಸ್​ಟಿ ಬಿಲ್ ಅನ್ನು ವೆಬ್ ಪೋರ್ಟಲ್​ನಲ್ಲಿ ಅಪ್​ಲೋಡ್ ಮಾಡಿದವರನ್ನು ಲಕಿ ಡ್ರಾ ಮೂಲಕ ಆಯ್ಕೆ ಮಾಡಿ ಒಂದು ಕೋಟಿ ರೂ ಬಂಪರ್ ಬಹುಮಾನ ನೀಡಲಾಗುತ್ತದೆ. ಲಕ್ಕಿ ಡ್ರಾಗೆ ಪರಿಗಣಿತವಾಗಬೇಕಾದರೆ ಇನ್ವಾಯ್ಸ್ ಅಥವಾ ಜಿಎಸ್​ಟಿ ಬಿಲ್​ನ ಪ್ರಮಾಣ 200 ರೂ ಮೇಲ್ಪಟ್ಟಾಗಿದ್ದಿರಬೇಕು.

ಇದನ್ನೂ ಓದಿ: ಕೇಂದ್ರದ ಪಿಎಲ್​ಐ ಸ್ಕೀಮ್​ನಲ್ಲಿ ತಮಿಳುನಾಡು, ಗುಜರಾತ್ ಮತ್ತು ಕರ್ನಾಟಕಕ್ಕೆ ಸಿಂಹಪಾಲು; ಕ್ರಿಸಿಲ್ ರಿಸರ್ಚ್ ವರದಿ

ಭಾರತದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ನಿವಾಸಿಗಳು ಈ ಸ್ಕೀಮ್​ನಲ್ಲಿ ಭಾಗವಹಿಸಬಹುದು. ಒಬ್ಬ ವ್ಯಕ್ತಿ ಒಂದು ತಿಂಗಳಲ್ಲಿ ಗರಿಷ್ಠ 25 ಇನ್ವಾಯ್ಸ್​ಗಳನ್ನು ಅಪ್​ಲೋಡ್ ಮಾಡಬಹುದು.

ಮೇರಾ ಬಿಲ್ ಮೇರಾ ಅಧಿಕಾರ್​ಗೆಂದು ಪ್ರತ್ಯೇಕವಾಗಿ ಆ್ಯಪ್ ರೂಪಿಸಲಾಗಿದೆ. ಈ ಆ್ಯಪ್​ನಲ್ಲಿ ಬಿಲ್​ಗಳನ್ನು ಅಪ್​ಲೋಡ್ ಮಾಡಲು ಅವಕಾಶ ಕೊಡಲಾಗಿದೆ. ಆ್ಯಪ್ ಅಲ್ಲದಿದ್ದರೆ ವೆಬ್ ಪೊರ್ಟಲ್​ನಲ್ಲಾದರೂ ಬಿಲ್ ಹಾಕಬಹುದು. ಈ ವೆಬ್ ಪೋರ್ಟಲ್​ನ ವಿಳಾಸ ಇಂತಿದೆ: web.merabill.gst.gov.in

ಇದನ್ನೂ ಓದಿ: Rule Changes From September 2023: ಸೆಪ್ಟೆಂಬರ್​ನಲ್ಲಿ 10 ಪ್ರಮುಖ ಬದಲಾವಣೆಗಳನ್ನು ತಿಳಿದಿರಿ

ಒಂದು ಲಕ್ಕಿ ಡ್ರಾನಲ್ಲಿ 800 ಮಂದಿ ವಿಜೇತರ ಆಯ್ಕೆ

ಇನ್ವಾಯ್ಸ್ ಇನ್ಸೆಂಟಿವ್ ಸ್ಕೀಮ್​ನಲ್ಲಿ ಜನರು ಅಪ್​ಲೋಡ್ ಮಾಡುವ ಅರ್ಹ ಬಿಲ್​ಗಳನ್ನು ಲಕಿ ಡ್ರಾಗೆ ಒಳಪಡಿಸಲಾಗುತ್ತದೆ. ಪ್ರತೀ ತಿಂಗಳು ಸರ್ಕಾರ ಲಕಿ ಡ್ರಾ ನಡೆಸಿ ದೇಶಾದ್ಯಂತದಿಂದ 800 ಮಂದಿಯನ್ನು ಆಯ್ಕೆ ಮಾಡುತ್ತದೆ. ಈ ಪ್ರತಿಯೊಬ್ಬರಿಗೂ 10,000 ರೂ ಬಹುಮಾನ ಕೊಡಲಾಗುತ್ತದೆ. ಅಂದರೆ ಒಂದು ತಿಂಗಳಲ್ಲಿ 800 ಜನರು ತಲಾ 10,000 ರೂ ಪಡೆಯುವ ಅವಕಾಶ ಇರುತ್ತದೆ.

ಇನ್ನು, ಮೂರು ತಿಂಗಳಿಗೊಮ್ಮೆ ಬಂಪರ್ ಡ್ರಾ ನಡೆಸಲಾಗುತ್ತದೆ. ಇದರಲ್ಲಿ ಇಬ್ಬರು ವ್ಯಕ್ತಿಗಳನ್ನು ಆಯ್ಕೆ ಮಾಡಲಾಗುವುದು. ಇಬ್ಬರಿಗೂ ತಲಾ ಒಂದು ಕೋಟಿ ರೂ ಬಹುಮಾನ ಸಿಗುತ್ತದೆ. ಇವತ್ತಿನಿಂದ (ಸೆಪ್ಟೆಂಬರ್ 1) ದೇಶವ್ಯಾಪಿ ಆರಂಭವಾಗಿರುವ ಮೇರಾ ಬಿಲ್ ಮೇರಾ ಅಧಿಕಾರ್ ಯೋಜನೆ ಒಂದು ವರ್ಷದವರೆಗೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ