ನವದೆಹಲಿ: 10,000 ಮಂದಿ ಲೇ ಆಫ್ ಮಾಡುವುದಾಗಿ ಘೋಷಿಸಿದ್ದ ಮೆಟಾ ಪ್ಲಾಟ್ಫಾರ್ಮ್ಸ್ (Meta Platforms Inc) ಈ ಸಂಬಂಧ ಅಂತಿಮ ಹಂತದ ಉದ್ಯೋಗಕಡಿತ ನಡೆಸಿದೆ. ಅದರ ಭಾರತ ವಿಭಾಗದ ಹಲವು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿರುವುದು ತಿಳಿದುಬಂದಿದೆ. ಮೂರು ಹಂತಗಳಲ್ಲಿ 10,000 ಮಂದಿಯನ್ನು ಕೆಲಸದಿಂದ ಬಿಡಿಸಲು ಕಂಪನಿ ಯೋಜಿಸಿತ್ತು. ಅದರಂತೆ ಈ ಹಿಂದೆ ಎರಡು ಬ್ಯಾಚ್ಗಳಲ್ಲಿ ಜನರನ್ನು ಮನೆಗೆ ಕಳುಹಿಸಲಾಗಿತ್ತು. ಈಗ ನಡೆದಿರುವುದು ಮೂರನೇ ಹಾಗೂ ಕೊನೆಯ ಬ್ಯಾಚ್ನ ಸ್ಯಾಕಿಂಗ್. ಈ 10,000 ಮಂದಿಯ ಲೇ ಆಫ್ ಪ್ಲಾನ್ಗೂ ಮುನ್ನ ಮೆಟಾ ಕಳೆದ ವರ್ಷ 11,000 ಮಂದಿಯನ್ನು ಕೆಲಸದಿಂದ ಕಿತ್ತುಹಾಕಿತ್ತು. ಒಟ್ಟು ಒಂದು ವರ್ಷದ ಅಂತರದಲ್ಲಿ 21,000 ಮೆಟಾ ಉದ್ಯೋಗಿಗಳು ಕೆಲಸ ಕಳೆದುಕೊಂಡಂತಾಗಿದೆ.
ಈಗ ಕೊನೆಯ ಬ್ಯಾಚ್ನಲ್ಲಿ ಭಾರತದ ಎಷ್ಟು ಮಂದಿ ಮೆಟಾ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯ ಇಲ್ಲ. ಆದರೆ, ಉನ್ನತ ಹಂತದ ಅಧಿಕಾರಿಗಳಿಂದ ಹಿಡಿದು, ಮಾರ್ಕೆಟಿಂಗ್, ಸೈಟ್ ಸೆಕ್ಯೂರಿಟಿ, ಎಂಟರ್ಪ್ರೈಸ್ ಎಂಜಿನಿಯರಿಂಗ್, ಪ್ರೋಗ್ರಾಂ ಮ್ಯಾನೇಜ್ಮೆಂಟ್, ಕಂಟೆಂಟ್ ಸ್ಟ್ರಾಟಿಜಿ ಇತ್ಯಾದಿ ಬಹುತೇಕ ಎಲ್ಲಾ ವಿಭಾಗಗಳವರೆಗೆ ಉದ್ಯೋಗಿಗಳನ್ನು ಲೇ ಆಫ್ ಮಾಡಿರುವುದು ತಿಳಿದುಬಂದಿದೆ. ಇವರಲ್ಲಿ ಹತ್ತಾರು ಉದ್ಯೋಗಿಗಳು ಲಿಂಕ್ಡ್ಇನ್ನಲ್ಲಿ ಈ ವಿಚಾರ ತಿಳಿಸಿದ್ದು, ಬೇರೆ ಕೆಲಸಕ್ಕೆ ಅರ್ಜಿ ಗುಜರಾಯಿಸುತ್ತಿದ್ದಾರೆ.
ಮಾಧ್ಯಮಗಳಿಗೆ ಬಂದ ಮಾಹಿತಿ ಪ್ರಕಾರ ಮೆಟಾದ ಭಾರತ ವಿಭಾಗದ ಉನ್ನತ ಹಂತದ ಇಬ್ಬರು ಅಧಿಕಾರಿಗಳನ್ನು ಸೇವೆಯಿಂದ ತೆಗೆಯಲಾಗಿದೆ. ಮೆಟಾದ ಇಂಡಿಯಾ ಮಾರ್ಕೆಟಿಂಗ್ ಡೈರೆಕ್ಟರ್ ಅವಿನಾಶ್ ಪಂತ್, ಹಾಗೂ ಮೀಡಿಯಾ ಪಾರ್ಟ್ನರ್ಶಿಪ್ ವಿಭಾಗದ ಮುಖ್ಯಸ್ಥ ಸಾಕೇಜ್ ಝಾ ಸೌರಭ್ ಅವರಿಬ್ಬರು ವಜಾಗೊಂಡ ಪ್ರಮುಖರು.
ಮೆಟಾ ಪ್ಲಾಟ್ಫಾರ್ಮ್ಸ್ ಅಡಿಯಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್ಗಳು ಕಾರ್ಯನಿರ್ವಹಿಸುತ್ತವೆ. ಮಾರ್ಕ್ ಜುಕರ್ಬರ್ಗ್ ಅವರು ಮೆಟಾದ ಸಿಇಒ ಆಗಿದ್ದಾರೆ. 11,000 ಉದ್ಯೋಗಿಗಳನ್ನು ವಜಾಗೊಳಿಸಿದ ಬಳಿಕ 10,000 ಮಂದಿಯನ್ನು 3 ಬ್ಯಾಚ್ಗಳಲ್ಲಿ ಮನೆಗೆ ಕಳುಹಿಸಲಾಗುವುದು ಎಂದು ಮಾರ್ಕ್ ಜುಕರ್ಬರ್ಗ್ ಮಾರ್ಚ್ ತಿಂಗಳಲ್ಲಿ ಪ್ರಕಟಿಸಿದ್ದರು. ಈ 3 ಬ್ಯಾಂಚ್ ಲೇ ಆಫ್ ಮೇ ತಿಂಗಳೊಳಗೆ ಆಗುತ್ತದೆ. ಅದಾದ ಬಳಿಕ ಸಣ್ಣ ಸಣ್ಣದಾಗಿ ಲೇ ಆಫ್ಗಳು ಮುಂದುವರಿಯುತ್ತವೆ ಎಂದೂ ಅವರು ಹೇಳಿದ್ದರು. ಅಂದರೆ, ಮುಂಬರುವ ದಿನಗಳಲ್ಲೂ ಮೆಟಾ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲೇ ಕೆಲಸ ಮಾಡುವ ಪರಿಸ್ಥಿತಿ ಬಂದಿದೆ.
ಇದನ್ನೂ ಓದಿ: Meta Layoffs: ಅವರ ಬಗ್ಗೆ ಅಭಿಮಾನ ಹೆಚ್ಚಾಯ್ತು; ಕೆಲಸ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳ ಬಗ್ಗೆ ಮೆಟಾ ಅಧಿಕಾರಿ ಹೇಳಿದ್ದಿದು
ಈಗ ಎರಡು ಸುತ್ತುಗಳಲ್ಲಿ ಕೆಲಸ ಕಳೆದುಕೊಂಡಿರುವ 21,000 ಉದ್ಯೋಗಿಗಳಲ್ಲಿ ಹೆಚ್ಚಿನವರದ್ದು ನಾನ್–ಎಂಜಿನಿಯರಿಂಗ್ ಕೆಲಸಗಳಾಗಿದ್ದವು. ಮಾರ್ಕೆಟಿಂಗ್, ಸೇಲ್ಸ್, ಕಂಟೆಂಟ್ ಡಿಸೈನ್, ರಿಸರ್ಚ್, ಯೂಸರ್ ಎಕ್ಸ್ಪೀರಿಯನ್ಸ್ ಇತ್ಯಾದಿ ಕೆಲಸಗಳು ಹೆಚ್ಚಾಗಿ ಬಾಧಿತವಾಗಿವೆ. ಕೋಡಿಂಗ್ ಇತ್ಯಾದಿ ಮಾಡುವ ಸಾಫ್ಟ್ವೇರ್ ಎಂಜಿನಿಯರುಗಳಿಗೆ ಲೇ ಆಫ್ ಬಿಸಿ ತಾಕಿರುವುದು ಕಡಿಮೆ. ಅಂದರೆ, ಮೆಟಾ ನಿರ್ದಿಷ್ಟ ತಂತ್ರಗಳನ್ನು ಇಟ್ಟುಕೊಂಡು ಲೇ ಆಫ್ ಹೆಜ್ಜೆ ಇರಿಸಿರುವುದು ಸ್ಪಷ್ಟವಾಗಿದೆ.