Meta Layoffs: ಅವರ ಬಗ್ಗೆ ಅಭಿಮಾನ ಹೆಚ್ಚಾಯ್ತು; ಕೆಲಸ ಕಳೆದುಕೊಳ್ಳುತ್ತಿರುವ ಉದ್ಯೋಗಿಗಳ ಬಗ್ಗೆ ಮೆಟಾ ಅಧಿಕಾರಿ ಹೇಳಿದ್ದಿದು
Facebook, Insta Parent Company Meta: ಕಳೆದ ವರ್ಷ 11,000 ಮಂದಿಯನ್ನು ಕೆಲಸದಿಂದ ತೆಗೆದಿದ್ದ ಮೆಟಾ ಪ್ಲಾಟ್ಫಾರ್ಮ್ಸ್ ಇದೀಗ 3ನೇ ಸುತ್ತಿನ ಲೇ ಆಫ್ಗೆ ಕೈಹಾಕುತ್ತಿದೆ. ಮುಂದಿನ ವಾರವೇ 6,000 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.
ನವದೆಹಲಿ: ಫೇಸ್ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಮ್ ಮೊದಲಾದವುಗಳ ಮಾತೃ ಸಂಸ್ಥೆಯಾದ ಮೆಟಾ ಪ್ಲಾಟ್ಫಾರ್ಮ್ಸ್ (Meta Platforms) ಈಗ ಮತ್ತೊಂದು ಸುತ್ತಿನ ಜಾಬ್ ಕಟ್ಗೆ (Layoffs) ಕೈಹಾಕುತ್ತಿದೆ. ಕಳೆದ ವರ್ಷದ ನವೆಂಬರ್ನಲ್ಲಿ 11,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದ್ದ ಮೆಟಾ ಈಗ 10,000 ಮಂದಿಯನ್ನು ಮನೆಗೆ ಕಳುಹಿಸುತ್ತಿದೆ. ಈ ಪೈಕಿ ಈಗಾಗಲೇ 4,000 ಮಂದಿಯನ್ನು ತೆಗೆಯಲಾಗಿದೆ. ಇನ್ನುಳಿದ 6,000 ಮಂದಿ ಕೆಲ ವಾರಗಳಲ್ಲಿ ಕೆಲಸ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಕೆಲಸ ಕಳೆದುಕೊಳ್ಳಲಿರುವ ಮೆಟಾ ಉದ್ಯೋಗಿಗಳಿಗೆ ಈಗಾಗಲೇ ಮೀಟಿಂಗ್ ಮುಖಾಂತರ ಮಾಹಿತಿ ಕೊಡಲಾಗಿದೆಯಂತೆ.
ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಅವರು ಮೇ ತಿಂಗಳಲ್ಲಿ ಇನ್ನಷ್ಟು ಲೇ ಆಫ್ ಆಗಲಿದೆ ಎಂದು ಇತ್ತೀಚೆಗೆ ಘೋಷಿಸಿದ್ದರು. 2022ರ ನವೆಂಬರ್ನಲ್ಲಿ 11,000 ಮೆಟಾ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದರು. ಅದರ ಜೊತೆಗೆ ಇನ್ನೂ 10,000 ಉದ್ಯೋಗಿಗಳ ಲೇ ಆಫ್ ಆಗಲಿದೆ ಎಂದು 2023ರ ಮಾರ್ಚ್ ತಿಂಗಳಲ್ಲಿ ಪ್ರಕಟಿಸಲಾಗಿತ್ತು. ಅದಾದ ಬಳಿಕ4,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಈ ಮೂರನೇ ಸುತ್ತಿನ ಲೇ ಆಫ್ ನಡೆಯಲಿರುವುದು ಬಹುತೇಕ ಖಚಿತವಾಗಿದೆ. ಕೆಲಸದಿಂದ ತೆಗೆಯಬಹುದಾ ಉದ್ಯೋಗಿಗಳ ಪಟ್ಟಿಯನ್ನು ಮಾಡಲಾಗಿದ್ದು, ಮೆಟಾದ ಗ್ಲೋಬಲ್ ಅಫೆರ್ಸ್ ವಿಭಾಗದ ಪ್ರೆಸಿಡೆಂಟ್ ನಿಕ್ ಕ್ಲೆಗ್ ಈ ಉದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಅಧಿಕೃತವಾಗಿ ಇಮೇಲ್ ಕಳುಹಿಸುವ ಪ್ರಕ್ರಿಯೆ ಮುಂದಿನ ವಾರದಿಂದಲೇ ನಡೆಯಬಹುದು.
ಗದ್ಗದಿತರಾದ ಮೆಟಾ ಹಿರಿಯ ನಿಕ್ ಕ್ಲೆಗ್
‘ಮೂರನೇ ಸುತ್ತಿನ ಪ್ರಕ್ರಿಯೆ ಮುಂದಿನ ವಾರದಲ್ಲೇ ಆಗುತ್ತದೆ. ನನ್ನ ವಿಭಾಗವೂ ಸೇರಿದಂತೆ ಬ್ಯುಸಿನೆಸ್ ಟೀಮ್ಗಳಲ್ಲಿ ಜನರು ಕೆಲಸ ಕಳೆದುಕೊಳ್ಳಲಿದ್ದಾರೆ ಇದು ಅನಿಶ್ಚಿತತೆಯ ಮತ್ತು ಆತಂಕದ ಸಮಯವಾಗಿದೆ. ಕೆಲಸ ಕಳೆದುಕೊಳ್ಳುವ ಉದ್ಯೋಗಿಗಳಿಗೆ ಸಮಾಧಾನ ಮಾಡುವ ಸುಲಭ ವಿಧಾನ ನನಗೆ ತಿಳಿದಿದ್ದಿರೆ ಉತ್ತಮವಾಗಿರುತ್ತಿತ್ತು. ಆದರೆ, ಆ ಪ್ರತಿಯೊಬ್ಬರು ತೋರುತ್ತಿರುವ ಧೋರಣೆ ಮತ್ತು ವೃತ್ತಿಪರತೆ ನಿಜಕ್ಕೂ ನನಗೆ ಅಭಿಮಾನ ಉಕ್ಕೇರುವಂತೆ ಮಾಡಿದೆ,’ ಎಂದು ಮೆಟಾ ಗ್ಲೋಬಲ್ ಅಫೇರ್ಸ್ ಅಧ್ಯಕ್ಷ ನಿಕ್ ಕ್ಲೆಗ್ ಹೇಳಿದ್ದಾರೆ.