ನವದೆಹಲಿ: ಮೈಕ್ರೋಸಾಫ್ಟ್, ಮೆಟಾ, ಗೂಗಲ್ ಹಾದಿ ತುಳಿದಿರುವ ಐಬಿಎಂ (IBM Corp) 3,900 ಉದ್ಯೋಗಿಗಳನ್ನು (Layoff) ವಜಾಗೊಳಿಸಿದೆ. ಸಿಬ್ಬಂದಿ ಕಡಿಮೆ ಮಾಡುವ ಪ್ರಕ್ರಿಯೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಈ ಮಧ್ಯೆ, ಕಂಪನಿಯು ಉದ್ದೇಶಿತ ಗುರಿಯಷ್ಟು ನಗದು ಗಳಿಕೆ ಮಾಡಿಲ್ಲ. ನಾಲ್ಕನೇ ತ್ರೈಮಾಸಿಕದಲ್ಲಿಯೂ ಆದಾಯ ಕುಸಿತದ ಸಾಧ್ಯತೆಯ ಆತಂಕ ಎದುರಿಸುತ್ತಿದೆ. ಹೀಗಾಗಿ ಉದ್ಯೋಗ ಕಡಿತ ಮಾಡಿದೆ ಎಂದು ಮೂಲಗಳು ಹೇಳಿವೆ. ಆದಾಗ್ಯೂ, ಗ್ರಾಹಕ ಆಧಾರಿತ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ನೇಮಕಾತಿ ಮಾಡಿಕೊಳ್ಳಲು ಕಂಪನಿಯು ಈಗಲೂ ಬದ್ಧವಾಗಿದೆ ಎಂದು ಐಬಿಎಂ ಮುಖ್ಯ ಹಣಕಾಸು ಅಧಿಕಾರಿ ಜೇಮ್ಸ್ ಕವನಾಫ್ ‘ರಾಯಿಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಉದ್ಯೋಗ ಕಡಿತವು ಕೈಂಡ್ರಲ್ ಉದ್ದಿಮೆಗೆ ಮತ್ತು ಕೃತಕ ಬುದ್ಧಿಮತ್ತೆ ಘಟಕ ವಾಸ್ಟನ್ ಹೆಲ್ತ್ಗೆ ಸಂಬಂಧಿಸಿದ್ದಾಗಿದೆ ಎಂದು ಐಬಿಎಂ ಅಧಿಕೃತ ಹೇಳಿಕೆ ಉಲ್ಲೇಖಿಸಿದೆ. ವಜಾ ಪ್ರಕ್ರಿಯೆಯು ಜನವರಿ – ಮಾರ್ಚ್ ಅವಧಿಯಲ್ಲಿ 300 ದಶಲಕ್ಷ ಡಾಲರ್ ನಷ್ಟಕ್ಕೆ ಕಾರಣವಾಗಲಿದೆ. ಕಂಪನಿಯ ಷೇರು ಮೌಲ್ಯದಲ್ಲಿ ಶೇ 2ರಷ್ಟು ಕುಸಿತವಾಗಿದೆ ಎಂದು ಐಬಿಎಂ ಹೇಳಿದೆ.
ಕಂಪನಿಯು ತನ್ನ ಒಟ್ಟಾರೆ ಉದ್ಯೋಗಿಗಳ ಪ್ರಮಾಣದ ಶೇ 1.5ರಷ್ಟನ್ನು ಮಾತ್ರ ವಜಾಗೊಳಿಸಿದೆ. ಇದು ಮಾರುಕಟ್ಟೆಯಲ್ಲಿ ಹೂಡಿಕೆದಾರರ ನಿರಾಶೆಗೆ ಕಾರಣವಾಗಿರಬಹುದು. ವೆಚ್ಚ ಕಡಿತಕ್ಕೆ ಸಂಬಂಧಿಸಿದ ಇನ್ನಷ್ಟು ಕ್ರಮಗಳನ್ನು ಕಂಪನಿ ಕೈಗೊಳ್ಳಬಹುದು ಎಂಬ ನಿರೀಕ್ಷೆಯಲ್ಲಿ ಹೂಡಿಕೆದಾರರು ಇದ್ದಾರೆ ಎಂದು ಹಿರಿಯ ವಿಶ್ಲೇಷಕ ಜೆಸ್ಸಿ ಕೊಹೆನ್ ತಿಳಿಸಿದ್ದಾರೆ.
ಇದನ್ನೂ ಓದಿ: Google Layoff: ಗೂಗಲ್ನಲ್ಲಿ ಉನ್ನತ ಹುದ್ದೆಯವರಿಗೂ ಕುತ್ತು; 8 ಕೋಟಿ ವೇತನದವರೂ ಕಂಪನಿಯಿಂದ ಔಟ್
2022ರಲ್ಲಿ ಐಬಿಎಂನ ನಗದು ಚಲಾವಣೆ 9.3 ಶತಕೋಟಿ ಡಾಲರ್ ಇತ್ತು. ಇದು ಕಂಪನಿಯ ನಿರೀಕ್ಷೆಗಿಂತ ಕಡಿಮೆಯಾಗಿದೆ. ಕಂಪನಿಯು 10 ಶತಕೋಟಿ ಡಾಲರ್ಗಿಂತ ಹೆಚ್ಚಿನ ನಗದು ಚಲಾವಣೆಯನ್ನು ನಿರೀಕ್ಷಿಸಿತ್ತು.
ಐಬಿಎಂನ ಸಾಫ್ಟ್ವೇರ್ ಮತ್ತು ಕನ್ಸಲ್ಟಿಂಗ್ ಉದ್ಯಮ ಬೆಳವಣಿಗೆ ಕೂಡಾ ನಿರಂತರವಾಗಿ ಕಡಿಮೆಯಾಗುತ್ತಾ ಬಂದಿದ್ದು, ನಾಲ್ಕನೇ ತ್ರೈಮಾಸಿಕ ಅವಧಿಯಲ್ಲೂ ಕುಸಿಯುವ ಲಕ್ಷಣ ಕಂಡುಬಂದಿದೆ. ಆದರೆ ಕ್ಲೌಡ್ ಸ್ಪೆಂಡಿಂಗ್ ಉತ್ತಮ ಬೆಳವಣಿಗೆ ದಾಖಲಿಸುತ್ತಿದೆ. ಅಮೆಜಾನ್. ಎಡಬ್ಲ್ಯುಎಸ್ ಹಾಗೂ ಮೈಕ್ರೋಸಾಫ್ಟ್ನ ಅಜೂರ್ ಜತೆಗಿನ ಒಪ್ಪಂದದ ಬಳಿಕ ಕ್ಲೌಡ್ ಸ್ಪೆಂಡಿಂಗ್ ಉತ್ತಮ ಬೆಳವಣಿಗೆ ದಾಖಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
2022ರಲ್ಲಿ ಒಟ್ಟಾರೆಯಾಗಿ ಐಬಿಎಂ ಶೇ 5.5ರ ಆದಾಯ ವೃದ್ಧಿ ದಾಖಲಿಸಿದೆ. ಇದು ದಶಕಗಳಲ್ಲೇ ಅತಿಹೆಚ್ಚು ಎನ್ನಲಾಗಿದೆ. ಆದಾಗ್ಯೂ ಐಬಿಎಂ ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಮೂಲಕ ಟೆಕ್ ದೈತ್ಯ ಕಂಪನಿಗಳಾದ ಗೂಗಲ್, ಮೈಕ್ರೋಸಾಫ್ಟ್, ಮೆಟಾ ಇತ್ಯಾದಿಗಳ ಸಾಲಿಗೆ ಸೇರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ