ನವದೆಹಲಿ, ಆಗಸ್ಟ್ 30: ಜಾಗತಿಕ ರೇಟಿಂಗ್ ಏಜೆನ್ಸಿಯಾದ ಮೂಡೀಸ್ ಇದೀಗ ಭಾರತದ ಆರ್ಥಿಕತೆ ಬಗ್ಗೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದೆ. ಭಾರತ ಎಷ್ಟು ವೇಗದಲ್ಲಿ ಬೆಳೆಯಬಹುದು ಎಂದು ಈ ಹಿಂದೆ ಅಂದಾಜು ಮಾಡಿದುದಕ್ಕಿಂತ ಹೆಚ್ಚಿನ ನಿರೀಕ್ಷೆಯಲ್ಲಿ ಮೂಡೀಸ್ ಇದೆ. ಅದರ ಪ್ರಕಾರ 2024ರ ಕ್ಯಾಲಂಡರ್ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.2ರಷ್ಟು ಬೆಳೆಯಬಹುದು ಎಂದಿದೆ. ಈ ಹಿಂದೆ ಅದು ಶೇ. 6.8ರಷ್ಟು ಆರ್ಥಿಕ ವೃದ್ಧಿ ಕಾಣಬಹುದು ಎಂದು ಅಂದಾಜು ಮಾಡಿತ್ತು. 2025ರಲ್ಲಿ ಶೇ. 6.4ರಷ್ಟು ಬೆಳೆಯಬಹುದು ಎಂದಿದ್ದ ಅದು ಈಗ ಶೇ. 6.6ಕ್ಕೆ ಹೆಚ್ಚಿಸಿದೆ.
ಭಾರತದ ಕೈಗಾರಿಕೆ ಮತ್ತು ಸರ್ವಿಸ್ ವಲಯಗಳು ಈ ವರ್ಷದ ಆರಂಭದಿಂದಲೂ ಉತ್ತಮವಾಗಿ ಸಾಧನೆ ಮಾಡುತ್ತಿವೆ. ಸರ್ವಿಸಸ್ ಕ್ಷೇತ್ರದ ಪಿಎಂಐ ಸೂಚಿ 60ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ ಎಂಬ ಅಂಶವನ್ನು ಮೂಡೀಸ್ ಸಂಸ್ಥೆ ತನ್ನ ವರದಿಯಲ್ಲಿ ಪ್ರಸ್ತಾಪಿಸಿದೆ.
ಇದನ್ನೂ ಓದಿ: ರಿಲಾಯನ್ಸ್ ಹೂಡಿಕೆದಾರರಿಗೆ ಖುಷಿ ಸುದ್ದಿ; 1:1 ಬೋನಸ್ ಷೇರು ನೀಡಲು ಯೋಜನೆ
ರೀಟೇಲ್ ಹಣದುಬ್ಬರ ಕಡಿಮೆ ಆಗತೊಡಗಿರುವುದರಿಂದ ಗೃಹ ವೆಚ್ಚ ಹೆಚ್ಚಾಗಬಹುದು. ಗ್ರಾಮೀಣ ಭಾಗದಲ್ಲಿ ಬೇಡಿಕೆ ಮತ್ತೆ ಹೆಚ್ಚತೊಡಗಿರುವ ಸೂಚನೆ ಕಾಣುತ್ತಿದೆ. ಉತ್ತಮ ಮಳೆ, ಬೆಳೆಗಳಾಗುತ್ತಿರುವುದು ಗ್ರಾಮೀಣ ಆರ್ಥಿಕತೆಗೆ ಪುಷ್ಟಿ ಸಿಕ್ಕಂತಾಗಿದೆ ಎಂದು ಈ ಏಜೆನ್ಸಿ ಹೇಳಿದೆ.
ಭಾರತದಲ್ಲಿರುವ ಸಾಕಷ್ಟು ಕಾರ್ಮಿಕ ಶಕ್ತಿಯನ್ನು ಹೇಗೆ ಸದ್ವಿನಿಯೋಗ ಮಾಡಿಕೊಳ್ಳಲಾಗುತ್ತದೆ ಎಂಬುದರ ಮೇಲೆ ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ಭಾರತ ಹೇಗೆ ಬೆಳೆಯಬಲ್ಲುದು ಎಂಬುದು ಅವಲಂಬಿತವಾಗಿರುತ್ತದೆ ಎಂದು ಹೇಳಿರುವ ಮೂಡೀಸ್, ಈಗಿನ ಪ್ರಸಕ್ತ ಸಂಗತಿಗಳನ್ನು ಮಾತ್ರವೇ ಪರಿಗಣನೆಗೆ ತೆಗೆದುಕೊಂಡು ಭಾರತದ ಆರ್ಥಿಕ ಬೆಳವಣಿಗೆ ಶೇ. 6ರಿಂದ 7ರಷ್ಟು ಆಗಬಹುದು ಎಂದು ಅಂದಾಜಿಸಿದೆ.
ಮೂಡೀಸ್ ಪ್ರಕಾರ ಭಾರತದ ಆರ್ಥಿಕ ಬೆಳವಣಿಗೆಯ ಶಕ್ತಿ ಇನ್ನೂ ಹೆಚ್ಚಿರುತ್ತದೆ. ಅದೆಲ್ಲವೂ ಕಾರ್ಮಿಕ ಶಕ್ತಿಯನ್ನು ಹೇಗೆ ಉಪಯೋಗಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಇದನ್ನೂ ಓದಿ: ಶ್ರೀಮಂತಿಕೆಯಲ್ಲಿ ಅಂಬಾನಿಯನ್ನು ಹಿಂದಿಕ್ಕಿದ ಅದಾನಿ; ಬಿಲಿಯನೇರ್ಸ್ ಪಟ್ಟಿಗೆ ಶಾರುಖ್ ಸೇರ್ಪಡೆ
2024ರ ಏಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್, ಅಂದರೆ ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯ ಜಿಡಿಪಿ ದತ್ತಾಂಶವನ್ನು ಸರ್ಕಾರ ಇಂದು ಬಿಡುಗಡೆ ಮಾಡಲಿದೆ. ಚುನಾವಣೆಯ ಸಂದರ್ಭವಾದ್ದರಿಂದ ನೀತಿ ಸಂಹಿತೆ ಕಾರಣಕ್ಕೆ ಸರ್ಕಾರ ವಿವಿಧ ಯೋಜನೆಗಳಿಗೆ ಬಂಡವಾಳ ವೆಚ್ಚ ಸರಿಯಾಗಿ ಮಾಡಲು ಆಗಿರಲಿಲ್ಲ. ಹೀಗಾಗಿ, ತಜ್ಞರು ಜಿಡಿಪಿ ದರ ಈ ಕ್ವಾರ್ಟರ್ನಲ್ಲಿ ಕಡಿಮೆ ಇರಬಹುದು ಎಂದಿದ್ದಾರೆ. ಶೇ. 6ರಿಂದ 7ರಷ್ಟು ಜಿಡಿಪಿ ದರ ನಿರೀಕ್ಷಿಸಲಾಗಿದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್ನಲ್ಲಿ ಶೇ. 7.8ರಷ್ಟು ಬೆಳವಣಿಗೆ ಕಂಡಿತ್ತು. ಅಷ್ಟು ಮಟ್ಟದ ದರ ನಿರೀಕ್ಷೆ ಅಸಾಧ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ