ನವದೆಹಲಿ: ಭಾರತದ ನಂಬರ್ ಒನ್ ಟಯರ್ ಕಂಪನಿ ಮದ್ರಾಸ್ ರಬ್ಬರ್ ಫ್ಯಾಕ್ಟರಿ ಅಥವಾ ಎಂಆರ್ಎಫ್ (MRF) ಹೊಸ ಮೈಲಿಗಲ್ಲು ಮುಟ್ಟಿದೆ. ಅದರ ಒಂದು ಷೇರುಬೆಲೆ (Share Price) ಜೂನ್ 13ರ ವಹಿವಾಟಿನ ವೇಳೆ 1,00,000 ರೂ ಮುಟ್ಟಿದೆ. ಷೇರುಬೆಲೆ ಈ ಮಟ್ಟ ತಲುಪಿದ ಮೊದಲ ಭಾರತೀಯ ಕಂಪನಿ ಎಂಆರ್ಎಫ್ ಆಗಿದೆ. ಜೂನ್ 13, ಮಂಗಳವಾರದ ವಹಿವಾಟಿನ ವೇಳೆ ಎಂಆರ್ಎಫ್ ಷೇರು ಬೆಲೆ 1,00,439 ರೂವರೆಗೂ ಏರಿತ್ತು. ಸಂಜೆಯ ವೇಳೆ ಬೆಲೆ 99,900 ರೂಗೆ ಇಳಿದಿತ್ತು. ಆದರೂ 1 ಲಕ್ಷ ರೂ ಮಟ್ಟಿದ ಮೈಲಿಗಲ್ಲು ಮುಟ್ಟಿದ ದಾಖಲೆ ಎಂಆರ್ಎಫ್ನದ್ದಾಗಿರುವುದು ಹೌದು.
ಎಂಆರ್ಎಫ್ ಸಂಸ್ಥೆ ಕಳೆದ 10-12 ವರ್ಷದಲ್ಲಿ ಅಕ್ಷರಶಃ ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಬೆಳೆದಿದೆ. 2012 ಫೆಬ್ರುವರಿ 21ರಂದು ಎಂಆರ್ಎಫ್ನ ಷೇರುಬೆಲೆ ಮೊದಲ ಬಾರಿಗೆ 10,000 ರೂ ದಾಟಿತ್ತು. 2021 ಜನವರಿ 20ರಂದು 90,000 ರೂ ಮೈಲಿಗಲ್ಲು ಮುಟ್ಟಿತ್ತು. 9 ವರ್ಷದಲ್ಲಿ ಅದರ ಷೇರುಬೆಲೆ 9 ಪಟ್ಟು ಹೆಚ್ಚಾಗಿತ್ತು. ಅಲ್ಲಿಂದೀಚೆ ಎರಡು ವರ್ಷದಲ್ಲಿ ಇನ್ನಷ್ಟು 10,000 ರೂ ಹೆಚ್ಚಾಗಿ 1,00,000 ರೂ ಬೆಲೆ ಮುಟ್ಟಿದೆ.
ಇದನ್ನೂ ಓದಿ: Inspiring Mappillai: ಬಲೂನು ಮಾರುತ್ತಿದ್ದ ವ್ಯಕ್ತಿ ವಿಶ್ವಪ್ರಸಿದ್ಧ ಎಂಆರ್ಎಫ್ ಒಡೆಯರಾದ ರೋಚಕ ಮತ್ತು ಹೃದಯಸ್ಪರ್ಶಿ ಕಥೆ
ಒಂದು ವೇಳೆ ನೀವು 2012ರ ಫೆಬ್ರುವರಿ ತಿಂಗಳಲ್ಲಿ ಅದರ ಷೇರುಬೆಲೆ 10,000 ರೂ ಇದ್ದಾಗ ಒಂದು ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ನಿಮ್ಮ ಷೇರುಸಂಪತ್ತು 10 ಲಕ್ಷ ರೂ ಆಗುತ್ತಿತ್ತು.
ಎಂಆರ್ಎಫ್ ಷೇರು ಬೆಲೆ ಇಷ್ಟು ದೊಡ್ಡದಾಗಲು ಕಾರಣವಿದೆ. ಎಂಆರ್ಎಫ್ ಯಾವತ್ತೂ ಕೂಡ ತನ್ನ ಷೇರುವಿಭಜನೆ ಮಾಡಿಲ್ಲ, ಅಥವಾ ಬೋನಸ್ ಷೇರುಗಳನ್ನು ವಿತರಿಸಿಲ್ಲ. ಹೀಗಾಗಿ, ಅದರ ಷೇರುಬೆಲೆ ಅಗಾಧ ಎನಿಸಿದೆ. ಸಾಮಾನ್ಯವಾಗಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಸಂಸ್ಥೆಗಳು ತಮ್ಮ ಷೇರುಬೆಲೆ ಒಂದು ಹಂತಕ್ಕೆ ಹೋದ ಬಳಿಕ ಸ್ಪ್ಲಿಟ್ ಮಾಡುತ್ತವೆ. 10,000 ರೂ ಬೆಲೆ ಇರುವ ಷೇರನ್ನು ಎರಡಾಗಿ ವಿಭಜಿಸಿದರೆ ತಲಾ 5,000 ರೂಗಳ ಎರಡು ಷೇರುಗಳು ಬರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ