ಗಾಂಧಿನಗರ್, ಜನವರಿ 10: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತದ ಅತ್ಯುತ್ತಮ ಪ್ರಧಾನಿ ಎಂದು ಉದ್ಯಮಿ ಮುಕೇಶ್ ಅಂಬಾನಿ ಬಣ್ಣಿಸಿದ್ದಾರೆ. ವೈಬ್ರೆಂಟ್ ಗುಜರಾತ್ ಜಾಗತಿಕ ಶೃಂಗಸಭೆಯಲ್ಲಿ (Vibrant Gujarat Global Summit 2024) ಪಾಲ್ಗೊಂಡು ಮಾತನಾಡುತ್ತಿದ್ದ ಅಂಬಾನಿ, ಈ ಕಾಲದ ಶ್ರೇಷ್ಠ ಜಾಗತಿಕ ನಾಯಕರಾಗಿ ನರೇಂದ್ರ ಮೋದಿ ಅವರು ಹೊರಹೊಮ್ಮಿದ್ದಾರೆ ಎಂದೂ ಅಭಿಪ್ರಾಯಪಟ್ಟಿದ್ದಾರೆ. ವೈಬ್ರೆಂಟ್ ಗುಜರಾತ್ ಸಮಿಟ್ 20 ವರ್ಷ ಕಾಲ ಮುಂದುವರಿಯುತ್ತಿರುವುದಕ್ಕೆ ನರೇಂದ್ರ ಮೋದಿ ಅವರೇ ಕಾರಣ. ಗುಜರಾತ್ ಪರಿವರ್ತೆನೆಯಲ್ಲಿ ಅವರ ಪಾತ್ರ ಬಹಳ ಇದೆ ಎಂದು ಅಂಬಾನಿ ಹೇಳಿದ್ದಾರೆ.
‘ಈ ರೀತಿಯ ಬೇರೆ ಯಾವುದೇ ಸಮಿಟ್ ಕೂಡ ಸುದೀರ್ಘ 20 ವರ್ಷ ಕಾಲ ಬಲವೃದ್ಧಿ ಕಾಣುತ್ತಾ ಮುಂದುವರಿಯುತ್ತಿರುವ ಉದಾಹರಣೆಯೇ ಇಲ್ಲ. ನಮ್ಮ ಪ್ರಧಾನಿ ಶ್ರೀ ನರೇಂದ್ರಭಾಯ್ ಮೋದಿ ಅವರ ದೃಷ್ಟಿ ಮತ್ತು ಸ್ಥಿರತೆಗೆ ಇದು ನಿದರ್ಶನವಾಗಿದೆ’ ಎಂದು ಮುಕೇಶ್ ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ 2047ರೊಳಗೆ 35 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗುವ ಹಾದಿಯಲ್ಲಿದೆ. ಜಗತ್ತಿನ ಯಾವ ಶಕ್ತಿಯೂ ಇದನ್ನು ನಿಲ್ಲಿಸಲು ಆಗುವುದಿಲ್ಲ. ಗುಜರಾತ್ ರಾಜ್ಯವೊಂದರ ಆರ್ಥಿಕತೆಯೇ 3 ಟ್ರಿಲಿಯನ್ ಡಾಲರ್ನಷ್ಟು ಆಗುತ್ತದೆ’ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ.
‘ಇವತ್ತು ಭಾರತದಲ್ಲಿ ಯುವಪೀಳಿಗೆಯು ಆರ್ಥಿಕತೆ ಪ್ರವೇಶಿಸಿ ನಾವೀನ್ಯತೆ ತೋರಲು ಇದು ಸುಸಮಯ. ಕೋಟ್ಯಂತರ ಜನರ ಬದುಕನ್ನು ಹಸನಾಗಿಸುವ ರೀತಿಯಲ್ಲಿ ಯುವ ಪೀಳಿಗೆ ಆರ್ಥಿಕತೆಯ ನೊಗ ಹೊರಬೇಕು. ಮುಂಬರುವ ಪೀಳಿಗೆಗಳು ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರೀಯತೆ ಮತ್ತು ಅಂತಾರಾಷ್ಟ್ರೀಯತೆಯ ಧೋರಣೆಗೆ ಧನ್ಯವಾದ ಹೇಳುತ್ತಾರೆ,’ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ತಿಳಿಸಿದ್ದಾರೆ.
ಅಮೃತ ಕಾಲದಲ್ಲಿ ಪೂರ್ಣ ಅಭಿವೃದ್ಧಿ ಹೊಂದಿದ ವಿಕಸಿತ ಭಾರತ ನಿರ್ಮಾಣಕ್ಕೆ ನೀವು ಗಟ್ಟಿ ಅಡಿಪಾಯ ಹಾಕಿದ್ದೀರಿ. 2047ರೊಳಗೆ ಭಾರತ 35 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶವಾಗುವುದನ್ನು ಈ ಭೂಮಿಯ ಯಾವ ಶಕ್ತಿಯೂ ತಡೆಯಲಾಗದು,’ ಎಂದಿದ್ದಾರೆ.
ಗುಜರಾತ್ ರಾಜ್ಯವನ್ನು ಪರಿವರ್ತಿಸಿದ ರೀತಿಗೆ ಅಂಬಾನಿ ಅವರು ಮೋದಿಗೆ ಕ್ರೆಡಿಟ್ ಕೊಟ್ಟಿದ್ದಾರೆ.
‘ನಾವು ಗೇಟ್ವೇ ಆಫ್ ಇಂಡಿಯಾ ಸಿಟಿಯಿಂದ (ಮುಂಬೈ) ಆಧುನಿಕ ಭಾರತದ ಪ್ರಗತಿಯ ಗೇಟ್ವೇ ಆದ ಗುಜರಾತ್ಗೆ ಬಂದಿದ್ದೇನೆ. ನಾನೊಬ್ಬ ಹೆಮ್ಮೆಯ ಗುಜರಾತಿ. ವಿದೇಶಿಗರಿಗೆ ನವ ಭಾರತ ಎಂದರೆ ಮೊದಲು ಕಣ್ಮುಂದೆ ಬರುವುದು ನವ ಗುಜರಾತ್. ಈ ಪರಿವರ್ತನೆ ಹೇಗಾಯಿತು? ನಮ್ಮ ಕಾಲದಲ್ಲಿ ಒಬ್ಬ ನಾಯಕ ಜಾಗತಿಕ ನಾಯಕರಾಗಿದ್ದಾರೆ. ಭಾರತದ ಇತಿಹಾಸದಲ್ಲೇ ಪಿಎಂ ಮೋದಿ ಅತ್ಯಂತ ಯಶಸ್ವಿ ಪ್ರಧಾನಿ ಆಗಿದ್ದಾರೆ’ ಎಂದು ಅಂಬಾನಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ