World Leaders: ಮೊರಾಕ್ಕೋ, ಟಿಮಾರ್ ಲೆಸ್ಟೇ ಸೇರಿದಂತೆ ವಿವಿಧ ದೇಶಗಳ ನಾಯಕರು ಗುಜರಾತ್ನಲ್ಲಿ ನಿಂತು ಭಾರತದ ಬಗ್ಗೆ ಹೇಳಿದ್ದಿದು…
Vibrant Gujarat global summit 2024: ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ವಿಶ್ವದ ಹಲವು ನಾಯಕರು ಮತ್ತು ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಸಿಗಬೇಕೆಂದು ನಾನು ಸದಾ ಹೇಳುತ್ತಲೇ ಇದ್ದೇನೆ ಎಂದು ಟಿಮಾರ್ ಲೆಸ್ಟೇ ಅಧ್ಯಕ್ಷರು ಹೇಳಿದ್ದಾರೆ. ಪ್ರಜಾತಂತ್ರ ಮೊದಲಾದ ಮೌಲ್ಯಗಳು ಜಾಗತಿಕವಾಗಿ ಉಳಿಯಲು ಭಾರತದ ಪಾತ್ರ ಮಹತ್ವದ್ದಾಗಿರುತ್ತದೆ ಎಂದು ಎಸ್ಟೋನಿಯಾದ ಸಚಿವರೊಬ್ಬರು ತಿಳಿಸಿದ್ದಾರೆ.
ಗಾಂಧಿನಗರ್, ಜನವರಿ 10: ಗುಜರಾತ್ನ ರಾಜಧಾನಿಯಲ್ಲಿ ಇಂದು ನಡೆದ 10ನೇ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ (Vibrant Gujarat global summit 2024) ಹಲವು ದೇಶಗಳ ನಾಯಕರು ಮತ್ತು ಪ್ರತಿನಿಧಿಗಳು ಹಾಗೂ ವಿವಿಧ ಉದ್ಯಮ ನಾಯಕರುಗಳು ಭಾಗಿಯಾಗಿದ್ದರು. ಯುಎಇ ಅಧ್ಯಕ್ಷರೂ ಕೂಡ ಕಾರ್ಯಕ್ರಮಕ್ಕೆ ಬಂದು ಹೋದರು. ಟಿಮಾರ್ ಲೆಸ್ಟೇ, ಬ್ರಿಟನ್, ಮೊರಾಕ್ಕೋ ಮೊದಲಾದ ದೇಶಗಳ ನಾಯಕರುಗಳು ಭಾರತವನ್ನು ಪ್ರಶಂಸಿಸಿದ್ದಾರೆ. ಕೆಲ ನಾಯಕರ ಅನಿಸಿಕೆಗಳೇನು, ವಿವರ ಇಲ್ಲಿದೆ…
ಜೋಸ್ ರೇಮೋಸ್ ಹೋರ್ಟಾ, ಟಿಮಾರ್ ಲೆಸ್ಟೇ ದೇಶದ ಅಧ್ಯಕ್ಷರು
‘ನಾನು ಹಿಂದೆ ವಿದೇಶಾಂಗ ಸಚಿವನಾಗಿದ್ದಾಗ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ಸಿಗಬೇಕೆನ್ನುವ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದೆ. ಭಾರತ ಹಾಗು ಇಂಡೋನೇಷ್ಯಾ ದೇಶಗಳಿಗೆ ಖಾಯಂ ಸದಸ್ಯತ್ವ ಸಿಗಬೇಕೆಂದು ಈಗಲೂ ಅಭಿಪ್ರಾಯಪಡುತ್ತೇನೆ’ ಎಂದು ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿಟ್ ಕಾರ್ಯಕ್ರಮದಲ್ಲಿ ಟಿಮಾರ್ ಲೆಸ್ಟೇ ದೇಶದ ಅಧ್ಯಕ್ಷರಾದ ಜೋಸ್ ರೇಮೋಸ್ ಹೋರ್ಟಾ ಹೇಳಿದ್ದಾರೆ.
ಇದನ್ನೂ ಓದಿ: Mukesh Ambani: ಭಾರತದ ಇತಿಹಾಸದಲ್ಲೇ ನರೇಂದ್ರ ಮೋದಿ ಅತ್ಯಂತ ಯಶಸ್ವಿ ಪ್ರಧಾನಿ: ಮುಕೇಶ್ ಅಂಬಾನಿ ಬಣ್ಣನೆ
ಟಿಮಾರ್ ಲೆಸ್ಟೇ ಸೌತ್ ಈಸ್ಟ್ ಏಷ್ಯನ್ ಪ್ರದೇಶದ ಒಂದು ಪುಟ್ಟ ದ್ವೀಪ ರಾಷ್ಟ್ರವಾಗಿದೆ. ಇಂಡೋನೇಷ್ಯಾದಿಂದ ತುಸು ದೂರುದಲ್ಲಿ ಈ ದೇಶ ಇರುವುದು.
ರಯಾದ್ ಮೆಜೂರ್, ಮೊರಾಕ್ಕೋ ದೇಶದ ಸಚಿವರು
ಕಾರು ತಯಾರಿಸುವ ಅತ್ಯುತ್ತಮ ದೇಶ ಭಾರತವಾಗಿದೆ. ಮೊರಾಕ್ಕೋ ಮತ್ತು ಭಾರತ ತ್ರಿಕೋನ ಸಹಕಾರದಲ್ಲಿ ನಿಕಟವಾಗಿ ಕೆಲಸ ಮಾಡುತ್ತಾ ಆಫ್ರಿಕಾ, ಭಾರತ ಹಾಗೂ ವಿಶ್ವದ ಪ್ರಗತಿಗೆ ಕಾರಣವಾಗಬಹುದು. ಭಾರತ ಮತ್ತು ಮೊರಾಕ್ಕೋ ಮಧ್ಯೆ ಇನ್ನೂ ಹೆಚ್ಚಿನ ಬಾಂಧವ್ಯ ಮತ್ತು ಸಹಭಾಗಿತ್ವ ಬೆಳೆಸಲು ಇದು ಸರಿಯಾದ ಸಮಯ ಆಗಿದೆ ಎಂದು ಮೊರಾಕ್ಕೋದ ಉದ್ಯಮ ಮತ್ತು ವಾಣಿಜ್ಯ ಸಚಿವ ರಯಾದ್ ಮೆಜ್ಜೋರ್ ಹೇಳಿದ್ದಾರೆ.
ಟೀಟ್ ರಿಸಾಲೋ, ಎಸ್ಟೋನಿಯಾ ಸಚಿವ
ಪ್ರಜಾಪ್ರಭುತ್ವ, ಕಾನೂನು ಪಾಲನೆ, ಮಾರುಕಟ್ಟೆ ಆರ್ಥಿಕತೆ ಸೇರಿದಂತೆ ಏಕ ರೀತಿಯ ಮೌಲ್ಯಗಳನ್ನು ಹೊಂದಿರುವ ದೇಶ ಮತ್ತು ಪ್ರದೇಶಗಳ ಜೊತೆ ಕೆಲಸ ಮಾಡಲು ನಾವು ಇಲ್ಲಿ ಇದ್ದೇವೆ. ಜಾಗತಿಕವಾಗಿ ಈ ಮೌಲ್ಯ ಉಳಿಯುವಂತಾಗಲು ಭಾರತದ ಪಾತ್ರ ಮಹತ್ವ ಇರುತ್ತದೆ. ಇತ್ತೀಚಿನ ಜಿ20 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಶಸ್ವಿಯಾಗಿ ನಿಭಾಯಿಸಿರುವುದೂ ಸೇರಿದಂತೆ ಭಾರತದ ಸಾಮರ್ಥ್ಯ ಬಾರಿ ಬಾರಿ ಸಾಬೀತಾಗಿದೆ ಎಂದು ಎಸ್ಟೋನಿಯಾ ದೇಶದ ಆರ್ಥಿಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಟಿಟ್ ರಿಸಾಲೋ ಅಭಿಪ್ರಾಯಪಟ್ಟಿದ್ದಾರೆ.
ಎಸ್ಟೋನಿಯಾ ಉತ್ತರ ಯೂರೋಪ್ನಲ್ಲಿ 1,500ಕ್ಕೂ ಹೆಚ್ಚು ದ್ವೀಪಗಳ ಸಮೂಹ ಹೊಂದಿರುವ ಒಂದು ದೇಶ.
ಇದನ್ನೂ ಓದಿ: Narendra Modi: ಸ್ವಾತಂತ್ರ್ಯ ಶತಮಾನೋತ್ಸವದ ವೇಳೆ ಮುಂದುವರಿದ ದೇಶವನ್ನಾಗಿಸುವ ಗುರಿ: ನರೇಂದ್ರ ಮೋದಿ
ಲಾರ್ಡ್ ತಾರಿಖ್ ಅಹ್ಮದ್, ಬ್ರಿಟನ್ ಸಚಿವರು
‘ಪ್ರಧಾನಿ ಮೋದಿ ಅವರೆ, ಭಾರತದ ಅಳಿಯರಾದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ನಿಮಗೆ ಶುಭಾಶಯ ಹೇಳಿ ಕಳುಹಿಸಿದ್ದಾರೆ. ಜಾಗತಿಕ ಹೂಡಿಕೆದಾರರನ್ನು ಹೇಗೆ ಆಕರ್ಷಿಸಬೇಕು ಎಂಬುದಕ್ಕೆ ಈ ಶೃಂಗಸಭೆಯು ಮಾಸ್ಟರ್ ಕ್ಲಾಸ್ ಎನಿಸಿದೆ. ನಮ್ಮ ದೇಶಗಳು ಭೌಗೋಳಿಕವಾಗಿ ಸಾವಿರಾರು ಕಿಮೀ ದೂರದಲ್ಲಿ ಇರಬಹುದು. ಆದರೆ, ಜನರ ಜನರ ನಡುವಿನ ಬಾಂಧವ್ಯವು ಈ ಅಂತರವನ್ನು ಕಡಿಮೆ ಮಾಡುತ್ತದೆ’ ಎಂದು ಬ್ರಿಟನ್ನ ಗೃಹ ಸಚಿವರಾದ ಲಾರ್ಡ್ ತಾರಿಖ್ ಅಹ್ಮದ್ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ