ನವದೆಹಲಿ, ಡಿಸೆಂಬರ್ 27: ಮ್ಯೂಚುವಲ್ ಫಂಡ್ ಖಾತೆ ಹೊಂದಿರುವವರು ನಾಮಿನಿ ಹೆಸರಿಸಲು (Mutual Fund account nominee) ಡಿಸೆಂಬರ್ 31ಕ್ಕೆ ಇದ್ದ ಡೆಡ್ಲೈನ್ ಅನ್ನು ಸೆಬಿ ವಿಸ್ತರಣೆ ಮಾಡಿದೆ. ಇದೀಗ 2024ರ ಜೂನ್ 30ರವರೆಗೂ ನಾಮಿನಿ ಹೆಸರಿಸಲು ಕಾಲಾವಕಾಶ ಕೊಡಲಾಗಿದೆ. ಮ್ಯುಚುವಲ್ ಫಂಡ್ ಖಾತೆದಾರರು ತಮ್ಮ ಖಾತೆಗೆ ನಾಮಿನಿ ಹೆಸರು ಖಾತ್ರಿಪಡಿಸಬೇಕು. ನಾಮಿನಿ ಸೇರಿಸುವುದು ಬೇಡ ಎಂದರೆ, ನಾಮಿನಿ ಬೇಡ ಎಂದು ಘೋಷಣೆ ಸಲ್ಲಿಸಬೇಕು. ಇಲ್ಲದಿದ್ದರೆ ಫಂಡ್ನ ಫೋಲಿಯೋಗಳನ್ನು ಫ್ರೀಜ್ ಮಾಡಲಾಗುತ್ತದೆ.
ಮ್ಯುಚುವಲ್ ಫಂಡ್ನ ಹೂಡಿಕೆದಾರರು ಅಕಸ್ಮಾತ್ ಅಕಾಲಿಕ ಮರಣಕ್ಕೆ ಈಡಾದರೆ ತಮ್ಮ ಆಸ್ತಿ ಸರಿಯಾದ ವಾರಸುದಾರರಿಗೆ ತಲುಪಲು ಸುಲಭವಾಗಿಸಲು ನಾಮಿನಿ ಹೆಸರಿಸುವುದು ಮುಖ್ಯ. ಇನ್ನೂ ಬಹಳಷ್ಟು ಖಾತೆದಾರರು ನಾಮಿನಿ ಹೆಸರಿಸಿಲ್ಲದಿರುವ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಿಸಿರಬಹುದು.
‘ಮಾರುಕಟ್ಟೆ ಭಾಗಿದಾರರ ಅಭಿಪ್ರಾಯಕ್ಕೆ ಆಧಾರವಾಗಿ ಡೀಮ್ಯಾಟ್ ಖಾತೆಗಳು ಮತ್ತು ಮ್ಯುಚುವಲ್ ಫಂಡ್ ಫೋಲಿಯೋಗಳಿಗೆ ನಾಮಿನೇಶನ್ ಆಯ್ಕೆ ಸಲ್ಲಿಸಲು ಕೊನೆಯ ದಿನಾಂಕವನ್ನು 2024ರ ಜೂನ್ 30ಕ್ಕೆ ವಿಸ್ತರಿಸಲಾಗಿದೆ,’ ಎಂದು ಸೆಬಿ ಹೇಳಿಕೆ ನೀಡಿದೆ.
ಡೀಮ್ಯಾಟ್ ಖಾತೆ ಮತ್ತು ಮ್ಯುಚುವಲ್ ಫಂಡ್ ಖಾತೆಗಳಿಗೆ ನಾಮಿನಿ ಹೆಸರಿಸಬೇಕು ಅಥವಾ ನಾಮಿನೇಶನ್ ಬೇಡ ಎಂದು ಘೋಷಿಸಬೇಕು. ಇಲ್ಲವಾದರೆ ಅಂಥ ಖಾತೆ ಮತ್ತು ಫೋಲಿಯೋಗಳನ್ನು ಫ್ರೀಜ್ ಮಾಡಲಾಗುತ್ತದೆ. ಅದರಿಂದ ಹಣ ಹಿಂಪಡೆಯಲು ಸಾಧ್ಯವಾಗದೇ ಹೋಗಬಹುದು.
ಇದನ್ನೂ ಓದಿ: Systematic Deposit Plan: ಎಫ್ಡಿ ಅಲ್ಲ, ಎಸ್ಐಪಿ ಅಲ್ಲ, ಇದು ಎಸ್ಡಿಪಿ, ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್
ಮ್ಯುಚುವಲ್ ಫಂಡ್ ನಿರ್ವಹಿಸುವ ಸಂಸ್ಥೆಯ ಅಧಿಕೃತ ಪೋರ್ಟಲ್ ಅಥವಾ ಆ್ಯಪ್ನಲ್ಲಿ ಈ ಅವಕಾಶ ಇದೆ. ಅಥವಾ ಎನ್ಎಸ್ಡಿಎಲ್ ವೆಬ್ಸೈಟ್ನಲ್ಲೂ ಹೋಗಿ ಮಾಡಬಹುದು.
ಮ್ಯುಚುವಲ್ ಫಂಡ್ ಅಕೌಂಟ್ಗೆ ಗರಿಷ್ಠ 3 ಮಂದಿಯನ್ನು ನಾಮಿನಿಯಾಗಿ ಸೇರಿಸಬಹುದು. ಒಬ್ಬರಿಗಿಂತ ಹೆಚ್ಚು ನಾಮಿನಿಗಳಿದ್ದರೆ ಯಾರು ಯಾರಿಗೆ ಎಷ್ಟೆಷ್ಟು ಪಾಲು ಎಂಬುದನ್ನು ನಮೂದಿಸಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ