Systematic Deposit Plan: ಎಫ್​ಡಿ ಅಲ್ಲ, ಎಸ್​ಐಪಿ ಅಲ್ಲ, ಇದು ಎಸ್​ಡಿಪಿ, ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್

Investing in SDP: ಬ್ಯಾಂಕುಗಳಲ್ಲಿ ಹಣ ಇರಿಸಲು ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್ ಅಥವಾ ಎಸ್​ಡಿಪಿಯನ್ನು ಪ್ರಯತ್ನಿಸಬಹುದು. ಎಸ್​ಡಿಪಿ ಎಂಬುದು ಆರ್​ಡಿ, ಎಫ್​ಡಿ ಮತ್ತು ಎಸ್​ಐಪಿಯ ಗುಣಗಳನ್ನು ಮೇಳೈಸಿದ ಒಂದು ಸ್ಕೀಮ್. ಎಸ್​ಡಿಪಿಯಲ್ಲಿ ತಿಂಗಳಿಗೆ 500 ರೂನಂತೆ ಹೂಡಿಕೆ ಆರಂಭಿಸಬಹುದು. ಪ್ರತೀ ಹೂಡಿಕೆಯನ್ನು ಪ್ರತ್ಯೇಕ ಎಫ್​ಡಿ ಎಂದು ಪರಿಗಣಿಸಲಾಗುತ್ತದೆ.

Systematic Deposit Plan: ಎಫ್​ಡಿ ಅಲ್ಲ, ಎಸ್​ಐಪಿ ಅಲ್ಲ, ಇದು ಎಸ್​ಡಿಪಿ, ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್
ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್
Follow us
|

Updated on: Dec 27, 2023 | 4:38 PM

ಉಳಿಸಿದ ಹಣವನ್ನು ಹೂಡಿಕೆ ಮಾಡಲು ಹೆಚ್ಚಿನ ಮಂದಿಯ ಸಾಂಪ್ರದಾಯಿಕ ಆಯ್ಕೆ ಎಂದರೆ ಫಿಕ್ಸೆಡ್ ಡೆಪಾಸಿಟ್. ಮಾರುಕಟ್ಟೆ ವಿಚಲನೆಯ (Market uncertainty) ಅಪಾಯ ಇಲ್ಲದೇ ನಿಶ್ಚಿತ ದರದಲ್ಲಿ ಇದು ಹೂಡಿಕೆಯನ್ನು ಬೆಳೆಸಬಲ್ಲುದು. ಆದರೆ, ನಿಶ್ಚಿತ ಠೇವಣಿಯ ಒಂದು ಪ್ರಮುಖ ತೊಡಕೆಂದರೆ ಒಮ್ಮೆಗೇ ಹಣವನ್ನು ಠೇವಣಿ ಇಡಬೇಕು. ನಿಯಮಿತವಾಗಿ ಡೆಪಾಸಿಟ್ ಇಡಲು ಆರ್​ಡಿ ಪ್ಲಾನ್​ಗಳಿವೆ. ಆದರೆ, ರೆಕರಿಂಗ್ ಡೆಪಾಸಿಟ್​ನಲ್ಲಿ ಎಫ್​ಡಿಯಷ್ಟು ಬಡ್ಡಿ ಸಿಗುವುದಿಲ್ಲ. ಈ ಸಮಸ್ಯೆಗೆ ಪರಿಹಾರ ಕೊಡುತ್ತದೆ ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್. ಎಫ್​ಡಿ, ಆರ್​ಡಿ ಮತ್ತು ಎಸ್​ಐಪಿ ಯೋಜನೆಗಳನ್ನು ಮೇಳೈಸಿದ ಪ್ಲಾನ್ ಇದು.

ಹೇಗಿದು ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್?

ಎಸ್​ಡಿಪಿಯಲ್ಲಿ ಆರ್​ಡಿಯಂತೆ ನಿಯಮಿತವಾಗಿ ಹಣವನ್ನು ಠೇವಣಿ ಇಡುತ್ತಾ ಹೋಗಬಹುದು. ತಿಂಗಳಿಗೆ ಠೇವಣಿ ಹಣ 500 ರೂನಿಂದ ಆರಂಭವಾಗುತ್ತದೆ. ಒಂದೊಂದು ಕಂತನ್ನೂ ಪ್ರತ್ಯೇಕ ಠೇವಣಿ ಎಂದು ಪರಿಗಣಿಸಲಾಗುತ್ತದೆ. ಠೇವಣಿ ಇಡುವಾಗ ಹಾಲಿ ಎಫ್​ಡಿ ದರ ಅನ್ವಯ ಆಗುತ್ತದೆ. ಒಂದೊಂದು ಠೇವಣಿಗೂ ಮೆಚ್ಯೂರಿಟಿ ಅವಧಿ ಬೇರೆಯೇ ಇರುತ್ತದೆ. ಎಫ್​​ಡಿ ದರದಲ್ಲಿ ಬದಲಾವಣೆ ಆದಾಗ ನೀವು ಎಸ್​ಡಿಪಿಯಲ್ಲಿ ಠೇವಣಿ ಇಟ್ಟರೆ ಆ ಬದಲಾದ ದರ ಅನ್ವಯ ಆಗುತ್ತದೆ.

ಇದನ್ನೂ ಓದಿ: FD Rates: ಎಸ್​ಬಿಐ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆ; ವಿವಿಧ ಎಫ್​ಡಿ ದರಗಳ ಹೆಚ್ಚಳ

ಎಫ್​ಡಿ, ಆರ್​ಡಿಗಿಂತ ಎಸ್​ಡಿಪಿ ಅನುಕೂಲವಾ?

ಫಿಕ್ಸೆಡ್ ಡೆಪಾಸಿಟ್​ನಲ್ಲಿ ಇಡೀ ಲಂಪ್ಸಮ್ ಹಣಕ್ಕೆ ಪೂರ್ವನಿಗದಿತವಾದ ಬಡ್ಡಿದರ ಅನ್ವಯ ಆಗುತ್ತದೆ. ಆರ್​ಡಿಯಲ್ಲೂ ಹೀಗೇ ಇರುತ್ತದೆ. ಆದರೆ, ಎಸ್​ಡಿಪಿ ಅಥವಾ ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್​ನಲ್ಲಿ ಬಡ್ಡಿದರ ಬದಲಾಗಬಹುದು. ಡೆಪಾಸಿಟ್ ಇಡುವಾಗ ಎಫ್​ಡಿ ದರ ಹೆಚ್ಚಾದರೆ ನಿಮಗೆ ಹೆಚ್ಚು ಲಾಭ, ದರ ಕಡಿಮೆ ಆದರೆ ಕಡಿಮೆ ಭಾಗ್ಯ.

ಇನ್ನು, ಮ್ಯುಚುವಲ್ ಫಂಡ್ ಹೂಡಿಕೆಯಲ್ಲಿ ಇರುವ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲಾನ್​ನಲ್ಲಿ ಹೂಡಿಕೆಯೊಳಗೆ ಹೂಡಿಕೆಗಳು ಸೇರುತ್ತಾ ಹೋಗಿ ಸಂಯುಕ್ತಗೊಂಡು (power of compounding) ಫಂಡ್ ರಿಟರ್ನ್ ಹೆಚ್ಚಾಗುತ್ತದೆ. ಎಸ್​ಡಿಪಿಯಲ್ಲೂ ಕೂಡ ಠೇವಣಿ ಇಡುವ ಹಣಕ್ಕೆ ಬಡ್ಡಿ ಸೇರುತ್ತಾ ಹೋಗಿ ಆ ಬಡ್ಡಿಹಣಕ್ಕೆ ಚಕ್ರಬಡ್ಡಿ ಸೇರ್ಪಡೆಯಾಗುತ್ತದೆ. ಈ ಕಾಂಪೌಂಡಿಂಗ್ ಗುಣವು ಎಸ್​ಡಿಪಿಯನ್ನು ಆಕರ್ಷಕವನ್ನಾಗಿ ಮಾಡುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ