2024ರಲ್ಲಿ ಮ್ಯೂಚುವಲ್ ಫಂಡ್​ಗಳಿಗೆ ಹರಿದುಬಂತು 17 ಲಕ್ಷ ಕೋಟಿ ರೂ ಹೂಡಿಕೆ; ಒಟ್ಟಾರೆ ನಿರ್ವಹಿತ ಆಸ್ತಿ 68 ಲಕ್ಷ ಕೋಟಿ ರೂ

|

Updated on: Dec 24, 2024 | 8:16 PM

2024ರ ನವೆಂಬರ್ ತಿಂಗಳವರೆಗೂ ಮ್ಯುಚುವಲ್ ಫಂಡ್​ಗಳಿಗೆ ಹರಿದುಬಂದ ಹೂಡಿಕೆಯ ಮೊತ್ತ 17 ಲಕ್ಷ ಕೋಟಿ ರೂ ಇದೆ. ನಿವ್ವಳ ಒಳಹರಿವು 9.14 ಲಕ್ಷ ಕೋಟಿ ರೂ. ಎಸ್​ಐಪಿಗಳ ಮೂಲಕ ಎರಡು ಲಕ್ಷ ಕೋಟಿ ರೂಗೂ ಅಧಿಕ ಹೂಡಿಕೆಗಳು ಮ್ಯೂಚುವಲ್ ಫಂಡ್​ಗೆ ಸಿಕ್ಕಿದೆ. ಮಾಸಿಕ ಎಸ್​ಐಪಿಗಳ ಮೊತ್ತ ಇಪ್ಪತ್ತೈದು ಸಾವಿರ ಕೋಟಿ ರೂ ದಾಟಿದೆ. ಅಂದರೆ ತಿಂಗಳಿಗೆ ಎಸ್​ಐಪಿಗಳ ಮೂಲಕ 25,000 ಕೋಟಿ ರೂಗೂ ಅಧಿಕ ಹೂಡಿಕೆಯು ಮ್ಯೂಚುವಲ್ ಫಂಡ್​ಗಳಿಗೆ ಹೋಗುತ್ತಿದೆ.

2024ರಲ್ಲಿ ಮ್ಯೂಚುವಲ್ ಫಂಡ್​ಗಳಿಗೆ ಹರಿದುಬಂತು 17 ಲಕ್ಷ ಕೋಟಿ ರೂ ಹೂಡಿಕೆ; ಒಟ್ಟಾರೆ ನಿರ್ವಹಿತ ಆಸ್ತಿ 68 ಲಕ್ಷ ಕೋಟಿ ರೂ
ಮ್ಯೂಚುವಲ್ ಫಂಡ್​
Follow us on

ನವದೆಹಲಿ, ಡಿಸೆಂಬರ್ 24: ಈ ವರ್ಷ ಒಟ್ಟಾರೆಯಾಗಿ ಷೇರು ಮಾರುಕಟ್ಟೆ ಭರ್ಜರಿಯಾಗಿ ಹಿಗ್ಗಿರುವುದು ಹೌದು. ಮ್ಯೂಚುವಲ್ ಫಂಡ್​ಗಳ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಮ್ಯೂಚುವಲ್ ಫಂಡ್ ಉತ್ತಮ ಮಾರ್ಗಗಳಲ್ಲಿ ಒಂದೆನಿಸಿದೆ. ಅಂತೆಯೇ, 2024ರಲ್ಲಿ ಮ್ಯುಚುವಲ್ ಫಂಡ್​ಗಳಿಗೆ ಹರಿದುಬಂದಿರುವ ಬಂಡವಾಳ 17 ಲಕ್ಷ ಕೋಟಿ ರೂ ಎನ್ನಲಾಗಿದೆ. ಹೂಡಿಕೆಗಳು ಹೆಚ್ಚಿರುವುದು ಮಾತ್ರವಲ್ಲ, ಹೂಡಿಕೆದಾರರ ಸಂಖ್ಯೆಯೂ ಸಖತ್ತಾಗಿ ಹೆಚ್ಚಿದೆ. 2023ರಲ್ಲೂ ಮ್ಯೂಚುವಲ್ ಫಂಡ್​ಗಳು ದಾಖಲೆಯ ಮೊತ್ತದ ಹೂಡಿಕೆಗಳನ್ನು ಪಡೆದಿದ್ದವು. ಅದು ಈ ವರ್ಷವೂ ಮುಂದುವರಿದಿದೆ. 2025ರ ಹೊಸ ವರ್ಷದಲ್ಲೂ ಇದೇ ಟ್ರೆಂಡ್ ಮುಂದುವರಿಯುವ ನಿರೀಕ್ಷೆ ಇದೆ.

2024ರಲ್ಲಿ ಮ್ಯೂಚುವಲ್ ಫಂಡ್​ಗೆ ಬಂದಿರುವ ನಿವ್ವಳ ಒಳಹರಿವು 9.14 ಲಕ್ಷ ಕೋಟಿ ರೂ ಎನ್ನಲಾಗಿದೆ. ಅಂದರೆ, ಮ್ಯುಚುವಲ್ ಫಂಡ್​ನಿಂದ ಹೂಡಿಕೆ ಹಿಂಪಡೆದಿರುವುದನ್ನು ಕಳೆದು ಬಂದ ಹೊಸ ಹೂಡಿಕೆಗಳ ಪ್ರಮಾಣ ಅದು. ಎಸ್​ಐಪಿಗಳ ಮೂಲಕವೇ ಮ್ಯೂಚುವಲ್ ಫಂಡ್​ಗಳಿಗೆ 2.4 ಲಕ್ಷ ಕೋಟಿ ರೂ ಹೂಡಿಕೆ ಸಂದಾಯವಾಗಿದೆ. ಈ ಮಾಹಿತಿಯನ್ನು ಮ್ಯುಚುವಲ್ ಫಂಡ್ ಉದ್ಯಮ ಸಂಸ್ಥೆ (ಎಎಂಎಫ್​ಐ) ನೀಡಿದೆ.

ಇದನ್ನೂ ಓದಿ: 2025ರಲ್ಲಿ ಷೇರು ಮಾರುಕಟ್ಟೆಗೆ 14 ದಿನ ರಜೆ; ಅ. 21ರಂದು ಮುಹೂರ್ತ ಟ್ರೇಡಿಂಗ್; ಇಲ್ಲಿದೆ ರಜಾದಿನಗಳ ಪಟ್ಟಿ

2024ರಲ್ಲಿ 17 ಲಕ್ಷ ಕೋಟಿ ರೂ ಒಳಹರಿವು ಸೇರಿದಂತೆ ಮ್ಯೂಚುವಲ್ ಫಂಡ್​ಗಳು ನಿರ್ವಹಿಸುತ್ತಿರುವ ಒಟ್ಟಾರೆ ಹೂಡಿಕೆಗಳು (ಎಯುಎಂ) 68 ಲಕ್ಷ ಕೋಟಿ ರೂ ಆಗಿದೆ. ಇದು ಹೊಸ ದಾಖಲೆ ಎನಿಸಿದೆ. 2023ರಲ್ಲಿ ಫಂಡ್​ಗಳ ಎಯುಎಂ 50.78 ಲಕ್ಷ ಕೋಟಿ ರೂ ಇತ್ತು. ಈ ವರ್ಷ ನವೆಂಬರ್ ಅಂತ್ಯದವರೆಗಿನ ದತ್ತಾಂಶ ಇದಾಗಿದೆ. ಡಿಸೆಂಬರ್ ಮುಗಿಯುವಷ್ಟರಲ್ಲಿ ಮ್ಯೂಚುವಲ್ ಫಂಡ್​ಗಳಿಗೆ ಇನ್ನಷ್ಟು ಹೂಡಿಕೆಗಳು ಹರಿದುಬರುವುದು ನಿಶ್ಚಿತವಾಗಿದ್ದು ಒಟ್ಟಾರೆ ಎಯುಎಂ 70 ಲಕ್ಷ ಕೋಟಿ ರೂ ದಾಟುವ ಎಲ್ಲಾ ಸಾಧ್ಯತೆಯೂ ಇದೆ.

2023ರಲ್ಲಿ ಮ್ಯೂಚುವಲ್ ಫಂಡ್​ಗಳ ನಿರ್ವಹಿತ ಆಸ್ತಿ 11 ಲಕ್ಷ ಕೋಟಿ ರೂನಷ್ಟು ಸೇರ್ಪಡೆಯಾಗಿತ್ತು. ಹಿಂದಿನ ವರ್ಷಕ್ಕಿಂತ ಶೇ. 27ರಷ್ಟು ಹೆಚ್ಚಾಗಿತ್ತು. ಈ ವರ್ಷ ಈ ಎರಡೂ ಅಂಶಗಳಲ್ಲಿ ಹೊಸ ದಾಖಲೆ ಬರೆಯಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಉದ್ಯಮಕ್ಕೆ ಬಂದ ಹೂಡಿಕೆ ಬರೋಬ್ಬರಿ 30 ಲಕ್ಷ ಕೋಟಿ ರೂ.

ಇದನ್ನೂ ಓದಿ: ಬಂಡವಾಳ ಮಾರುಕಟ್ಟೆಯಿಂದ ಕಂಪನಿಗಳು ಪಡೆದ ಫಂಡಿಂಗ್ 10 ವರ್ಷದಲ್ಲಿ 10 ಪಟ್ಟು ಹೆಚ್ಚಳ: ವರದಿ

ಈಕ್ವಿಟಿ ಮ್ಯೂಚುವಲ್ ಫಂಡ್​ಗಳಿಗೆ ಸಿಂಹಪಾಲು

ಮ್ಯೂಚುವಲ್ ಫಂಡ್ ಉದ್ಯಮದಲ್ಲಿ 45 ಅಸೆಟ್ ಮ್ಯಾನೇಜ್ಮೆಂಟ್ ಕಂಪನಿಗಳಿವೆ. 2024ರಲ್ಲಿ ಒಟ್ಟಾರೆ ಈ ಉದ್ಯಮಕ್ಕೆ ಬಂದ ನಿವ್ವಳ ಹೂಡಿಕೆ ಒಳಹರಿವು 9.14 ಲಕ್ಷ ಕೋಟಿ ರೂ. ಈ ಪೈಕಿ ಈಕ್ವಿಟಿ ಸ್ಕೀಮ್​ಗಳಿಗೆ 3.54 ಲಕ್ಷ ಕೋಟಿ ರೂ ಸಿಕ್ಕಿದೆ. ಹೈಬ್ರಿಡ್ ಸ್ಕೀಮ್​ಗಳಿಗೆ 1.44 ಲಕ್ಷ ಕೋಟಿ ರೂ, ಡೆಟ್ ಸ್ಕೀಮ್​ಗಳಿಗೆ 2.88 ಲಕ್ಷ ಕೋಟಿ ರೂ ಹೂಡಿಕೆ ಸಿಕ್ಕಿದೆ.

ಎಸ್​ಐಪಿಗಳ ಜನಪ್ರಿಯತೆಯೂ ಹೆಚ್ಚುತ್ತಿದೆ. ಮಾಸಿಕ ಎಸ್​ಐಪಿಗಳು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ 25,000 ಕೋಟಿ ರೂ ಗಡಿದಾಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:14 pm, Tue, 24 December 24