ನವದೆಹಲಿ, ಸೆಪ್ಟೆಂಬರ್ 18: ಅಮೆರಿಕದ ಖ್ಯಾತ ಹೂಡಿಕೆದಾರ ರೇ ಡೇಲಿಯೋ (Ray Dalio) ಅವರು ಭಾರತದ ಆರ್ಥಿಕ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶ್ವದ ಪ್ರಮುಖ ದೇಶಗಳ ಪೈಕಿ ಭಾರತ ಅತಿವೇಗದ ಪ್ರಗತಿ ಸಾಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ ಅವರು, ಎಂಬತ್ತರ ದಶಕದಲ್ಲಿ ಇದ್ದ ಚೀನಾಗೆ ಭಾರತವನ್ನು ಹೋಲಿಕೆ ಮಾಡಿದ್ದಾರೆ.
‘ಮುಂದಿನ 10 ವರ್ಷದಲ್ಲಿ ಭಾರತ ಯಾವ ವೇಗದಲ್ಲಿ ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ನಮ್ಮ ಬಳಿ ಅಂದಾಜು ಇದೆ. 22 ಅಗ್ರಗಣ್ಯ ದೇಶಗಳ ಬೆಳವಣಿಗೆ ಹೇಗೆ ಆಗಬಹುದು ಎಂಬುದನ್ನು ಗ್ರಹಿಸಿದ್ದೇವೆ. ಅತಿಹೆಚ್ಚು ಬೆಳವಣಿಗೆ ಕಾಣುವ ಸಾಮರ್ಥ್ಯ ಭಾರತಕ್ಕೆ ಹೆಚ್ಚಿದೆ…’ ಎಂದು ರೇ ಡೇಲಿಯೋ ಹೇಳಿದ್ದಾರೆ.
ರೇ ಡೇಲಿಯೋ ಅವರು ಅಮೆರಿಕದ ಹೂಡಿಕೆ ನಿರ್ವಹಣೆ ಸಂಸ್ಥೆ ಬ್ರಿಡ್ಜ್ವಾಟರ್ ಅಸೋಸಿಯೇಟ್ಸ್ನ ಸಂಸ್ಥಾಪಕರೂ ಹೌದು. ಅಮೆರಿಕದ ಲಾಸ್ ಏಂಜಲಿಸ್ನ ಯುಸಿಎಲ್ಎ ಕ್ಯಾಂಪಸ್ನಲ್ಲಿ ಆಲ್ ಇನ್ ಸಮಿಟ್ 2023 ಕಾರ್ಯಕ್ರಮದಲ್ಲಿ ಪೋಡ್ಕ್ಯಾಸ್ಟ್ ಮೂಲಕ ಮಾತನಾಡುತ್ತಿದ್ದ ರೇ ಡೇಲಿಯೋ ಅವರು ನರೇಂದ್ರ ಮೋದಿಯನ್ನು ಆಧುನಿಕ ಚೀನಾದ ನಿರ್ಮಾತೃ ಡೆಂಗ್ ಶಿಯೋಪಿಂಗ್ (Deng Xiaoping) ಅವರಿಗೆ ಹೋಲಿಕೆ ಮಾಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಯವರ ಮುಂದಿನ ಜನ್ಮದಿನಕ್ಕೆ ಇನ್ನೂ ದೊಡ್ಡ ಕೊಡುಗೆ ನೀಡುತ್ತೇವೆ: ಫಾಕ್ಸ್ಕಾನ್ ಭರವಸೆ
‘ನಾನು ಆರಂಭಿಸಿದಾಗ (ಹೂಡಿಕೆ) ಚೀನಾ ಹೇಗಿತ್ತೋ ಆ ದಾರಿಯಲ್ಲಿ ಭಾರತ ಇದೆ… ತಲಾದಾಯ, ಛಾಯೆ (complexion) ಇವೆಲ್ಲವನ್ನೂ ಗಮನಿಸಿ ನೋಡಿ, ಮೋದಿ ನಿಗೆ ಡೆಂಗ್ರಂತೆ ಕಾಣುತ್ತಾರೆ. ಭಾರೀ ಮಟ್ಟದಲ್ಲಿ ಸುಧಾರಣೆ, ಕ್ರಿಯಾಶೀಲತೆ (creativity) ಈ ಎಲ್ಲಾ ಅಂಶಗಳು ಕಾಣುತ್ತವೆ. ಜೊತೆಗೆ ಸಮಸ್ಯೆಗಳು, ಅಪಾಯಗಳೂ ಇವೆ. ಆದರೆ, ಭಾರತ ಬಹಳ ಬಹಳ ಮುಖ್ಯ,’ ಎಂದು ರೇ ಡೇಲಿಯೋ ವಿವರಣೆ ನೀಡಿದ್ದಾರೆ.
‘ನಾನೂ ಇತಿಹಾಸ ಬಲ್ಲೆ. ತಟಸ್ತವಾಗಿರುವ ದೇಶಗಳು ಚೆನ್ನಾಗಿ ಸಾಧಿಸಿವೆ. ಯುದ್ಧಗಳಲ್ಲಿ ಗೆದ್ದಿರುವ ದೇಶಗಳಿಗಿಂತ ಇವು ಉತ್ತಮ ಎನಿಸಿವೆ. ಈಗ ಅಮೆರಿಕ ಮತ್ತು ಚೀನಾ ಹಾಗೂ ರಷ್ಯಾ ಮತ್ತಿತರ ಮೈತ್ರಿ ದೇಶಗಳ ನಡುವೆ ಸಂಘರ್ಷ ಇದೆ. ಇವ್ಯಾವುಗಳ ಜೊತೆ ಹೋಗದೇ ಮಧ್ಯ ಮಾರ್ಗದಲ್ಲಿರುವ ಭಾರತದಂತಹ ದೇಶಗಳಿಗೆ ಅನುಕೂಲವಾಗಲಿದೆ,’ ಎಂದು ಅಮೆರಿಕದ ಈ ಖ್ಯಾತ ಹೂಡಿಕೆದಾರ ಹೇಳಿದ್ದಾರೆ.
ಭಾರತದಲ್ಲಿ ಧಾರ್ಮಿಕ ವಿಚಾರ ಮತ್ತು ಅಸಮಾಧಾನಗಳು ಇರುವ ಬಗ್ಗೆ ಮಾತನಾಡಿದ ಅವರು, ‘ಭಾರತದಲ್ಲಿ 24 ಕೋಟಿ ಮುಸ್ಲಿಮರಿದ್ದು, ಆಂತರಿಕ ಧಾರ್ಮಿಕ ಸಮಸ್ಯೆ ಇದೆ. ಆದರೆ ಇವ್ಯಾವುವೂ ಕೂಡ ಭಾರತದ ಬೆಳವಣಿಗೆಯನ್ನು ತಡೆಯಲು ಆಗುವುದಿಲ್ಲ,’ ಎಂದು ರೇ ಡೇಲಿಯಾ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ ತಿಂಗಳಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದಾಗ ರೇ ಡೇಲಿಯೋ ಅವರನ್ನು ಭೇಟಿ ಮಾಡಿದ್ದರು. ತಮ್ಮ ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳನ್ನು ವಿವರಿಸಿ, ಭಾರತದಲ್ಲಿ ಇನ್ನಷ್ಟು ಹೂಡಿಕೆಗಳನ್ನು ಮಾಡುವಂತೆ ಮನವಿ ಮಾಡಿದ್ದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ