AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗತಿಕವಾಗಿ ವ್ಯಾಪಾರ ಅಡೆತಡೆಗಳು ಹೆಚ್ಚುತ್ತಿರುವ ಹೊತ್ತಲ್ಲಿ ಭಾರತದಿಂದ ಆರ್ಥಿಕ ಬೆಸುಗೆ: ಬ್ರಿಕ್ಸ್ ಬ್ಯುಸಿನೆಸ್ ಫೋರಂನಲ್ಲಿ ಮೋದಿ ಹೇಳಿಕೆ

ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 11ರಂದು ಬ್ರಿಕ್ಸ್ ಬ್ಯುಸಿನೆಸ್ ಫೋರಂ ಉದ್ದೇಶಿಸಿ ಮಾತನಾಡಿದರು. ಬ್ರಿಕ್ಸ್ ರಾಷ್ಟ್ರಗಳ ಆರ್ಥಿಕ ಬೆಳವಣಿಗೆಯು ಹೇಗೆ ಜಾಗತಿಕ ಸರಾಸರಿಗಿಂತ ಬಹಳ ಹೆಚ್ಚಿದೆ ಎನ್ನುವುದನ್ನು ತಿಳಿಸಿದರು. ಜಾಗತಿಕ ಪ್ರಕ್ಷುಬ್ದ ಪರಿಸ್ಥಿತಿಯಲ್ಲಿ ಭಾರತ ನಿರ್ವಹಿಸುತ್ತಿರುವ ಪಾತ್ರದ ಮಹತ್ವವನ್ನು ಅವರು ಸಾರಿದರು.

ಜಾಗತಿಕವಾಗಿ ವ್ಯಾಪಾರ ಅಡೆತಡೆಗಳು ಹೆಚ್ಚುತ್ತಿರುವ ಹೊತ್ತಲ್ಲಿ ಭಾರತದಿಂದ ಆರ್ಥಿಕ ಬೆಸುಗೆ: ಬ್ರಿಕ್ಸ್ ಬ್ಯುಸಿನೆಸ್ ಫೋರಂನಲ್ಲಿ ಮೋದಿ ಹೇಳಿಕೆ
ನರೇಂದ್ರ ಮೋದಿImage Credit source: X @narendramodi
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 11, 2026 | 7:07 PM

Share

ನವದೆಹಲಿ, ಸೆಪ್ಟೆಂಬರ್ 11: ಬ್ರಿಕ್ಸ್ ಶೃಂಗಸಭೆಯ ಪೂರ್ವಭಾವಿಯಾಗಿ ದೆಹಲಿಯಲ್ಲಿ ಇಂದು ಶುಕ್ರವಾರ ಬ್ಯುಸಿನೆಸ್ ಫೋರಂ ಕಾರ್ಯಕ್ರಮ ನಡೆಯಿತು. ಇದನ್ನು (BRICS Business Forum) ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಜಾಗತಿಕವಾಗಿ ವ್ಯಾಪಾರ ನಿರ್ಬಂಧಗಳು ಮತ್ತು ಅಡೆತಡೆಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಭಾರತವು ವಿಶ್ವದ ದೇಶಗಳೊಂದಿಗೆ ಬಲವಾದ ಆರ್ಥಿಕ ಸೇತುವೆಗಳನ್ನು ನಿರ್ಮಿಸುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಜಾಗತಿಕ ಮಂದಗತಿಯ ನಡುವೆಯೂ ಬ್ರಿಕ್ಸ್ ರಾಷ್ಟ್ರಗಳು ಮತ್ತು ಭಾರತವು ವೇಗದ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಿದ್ದು, ಲಕ್ಷಾಂತರ ಜನರನ್ನು ಬಡತನದಿಂದ ಹೊರತಂದಿವೆ. ಭಾರತವು ರಾಜಕೀಯ ಸ್ಥಿರತೆ ಮತ್ತು ವ್ಯಾಪಾರ ಸ್ನೇಹಿ ಸುಧಾರಣೆಗಳಿಂದಾಗಿ ಹೂಡಿಕೆಗೆ ವಿಶ್ವದಲ್ಲೇ ಅತ್ಯಂತ ಮುಕ್ತ ದೇಶವಾಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ವ್ಯಾಪಾರ ಅಡೆತಡೆಗಳ ನಿವಾರಣೆ: ಬ್ರಿಕ್ಸ್ ಒಕ್ಕೂಟದ ಸದಸ್ಯ ರಾಷ್ಟ್ರಗಳ ನಡುವೆ ಸುಂಕ ಮತ್ತು ಸುಂಕೇತರ ವ್ಯಾಪಾರ ಅಡೆತಡೆಗಳನ್ನು ತೆಗೆದುಹಾಕುವುದು ಹಾಗೂ ವ್ಯಾಪಾರ ವೆಚ್ಚವನ್ನು ಕಡಿಮೆ ಮಾಡುವುದು ಅತ್ಯಗತ್ಯವಾಗಿದೆ. ಸದಸ್ಯ ದೇಶಗಳು ತಮ್ಮ ನಡುವಿನ ವ್ಯಾಪಾರ ವ್ಯವಹಾರಗಳಲ್ಲಿ ಅಮೆರಿಕನ್ ಡಾಲರ್ ಮೇಲಿನ ಅವಲಂಬನೆ ತಗ್ಗಿಸಿ, ಸ್ಥಳೀಯ ಕರೆನ್ಸಿಗಳನ್ನು ಬಳಸುವುದಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕೆಂದು ವಾಣಿಜ್ಯ ಮಂಡಳಿ ಮತ್ತು ನಾಯಕರು ಕರೆ ನೀಡಿದ್ದಾರೆ ಎಂದು ಪ್ರಧಾನಿಗಳು ತಿಳಿಸಿದ್ದಾರೆ.

ನರೇಂದ್ರ ಮೋದಿ ಈ ಫೋರಂನಲ್ಲಿ ಮಾತನಾಡುತ್ತಿರುವ ವಿಡಿಯೋ

ಇದನ್ನೂ ಓದಿ: ಬ್ರಿಕ್ಸ್ ಶೃಂಗಸಭೆ 2026: ನರೇಂದ್ರ ಮೋದಿ, ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆಯಲ್ಲಿ ಚರ್ಚೆಯಾಗುವ ವಿಷಯಗಳು

ಡಿಜಿಟಲ್ ಮತ್ತು ತಂತ್ರಜ್ಞಾನ ಸಹಕಾರ: ಭಾರತದ ‘ಡಿಜಿಟಲ್ ಇಂಡಿಯಾ’ ಮಾದರಿ ಮತ್ತು ಸ್ಟಾರ್ಟ್‌ಅಪ್ ವ್ಯವಸ್ಥೆಯು ಬೆಳೆಯುತ್ತಿರುವ ಆರ್ಥಿಕತೆಗಳಿಗೆ ಮಾದರಿಯಾಗಿದ್ದು, ಬ್ರಿಕ್ಸ್ ರಾಷ್ಟ್ರಗಳ ನಡುವೆ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಹಂಚಿಕೆಗೆ ಮೋದಿ ಒತ್ತು ನೀಡಿದ್ದಾರೆ.

ಬ್ರಿಕ್ಸ್ ಒಕ್ಕೂಟವು ಜಾಗತಿಕ ಆರ್ಥಿಕತೆಗೆ ಸಮತೋಲನ ತರಲು ಮತ್ತು ಬಹುಧ್ರುವೀಯ ವಿಶ್ವ ಆರ್ಥಿಕತೆಯನ್ನು ಬಲಪಡಿಸಲು ಪ್ರಮುಖ ಪಾತ್ರ ವಹಿಸುತ್ತಿದೆ. ಜಾಗತಿಕವಾಗಿ ವ್ಯಾಪಾರ ತಡೆಗಳು ಹೆಚ್ಚುತ್ತಿದ್ದರೆ ಭಾರತವು ಆರ್ಥಿಕ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಸ್ಪಷ್ಟಪಡಿಸಿದ್ದಾರೆ.

ಸಮುದ್ರ ವ್ಯಾಪಾರ ಮಾರ್ಗದ ಭದ್ರತೆ: ಜಾಗತಿಕ ವ್ಯಾಪಾರ ವಹಿವಾಟು ಸರಾಗವಾಗಿ ಸಾಗಬೇಕಾದರೆ ಜಾಗತಿಕ ವ್ಯಾಪಾರ ಮಾರ್ಗಗಳು ಅಬಾಧಿತವಾಗಿರಬೇಕು. ಸಮುದ್ರ ಮಾರ್ಗಗಳು ಸುರಕ್ಷಿತವಾಗಿರಬೇಕು. ಸರಬರಾಜು ಮಾರ್ಗಗಳು ಮುಕ್ತವಾಗಿರಬೇಕು. ನಾವಿಕರು ಸುರಕ್ಷಿತವಾಗಿರಬೇಕು. ಹೀಗಾಗಿ, ಹಡಗು ಮಾರ್ಗಗಳ ಸುರಕ್ಷತೆಯನ್ನು ಭಾರತ ಬೆಂಬಲಿಸುತ್ತದೆ ಎಂದು ಬ್ರಿಕ್ಸ್ ಬ್ಯುಸಿನೆಸ್ ಫೋರಂ ಸಭೆಯಲ್ಲಿ ಪ್ರಧಾನಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಬ್ರಿಕ್ಸ್ ಹಣಕಾಸು ಸಚಿವರ ಜಂಟಿ ಹೇಳಿಕೆ; ಪರಸ್ಪರ ಹಣಕಾಸು ಮತ್ತು ಆರ್ಥಿಕ ಸಹಕಾರಕ್ಕೆ ಕರೆ

ಬ್ರಿಕ್ಸ್ ರಾಷ್ಟ್ರಗಳಲ್ಲಿ ವಿಶ್ವದ ಶೇ. 50ರಷ್ಟು ಜನಸಂಖ್ಯೆ ಇದೆ. ಜಾಗತಿಕ ಆರ್ಥಿಕತೆಯಲ್ಲಿ ಶೇ. 40 ಪಾಲು ಹೊಂದಿದೆ. ಜಾಗತಿಕ ವ್ಯಾಪಾರದಲ್ಲಿ ಶೇ. 25ಕ್ಕಿಂತ ಹೆಚ್ಚಿನ ಪಾಲು ಇದೆ. ಜಾಗತಿಕ ಜಿಡಿಪಿ ಎರಡೂವರೆ ಪಟ್ಟು ಬೆಳೆದರೆ, ಬ್ರಿಕ್ಸ್ ರಾಷ್ಟ್ರಗಳ ಒಟ್ಟೂ ಜಿಡಿಪಿ ನಾಲ್ಕೂವರೆ ಪಟ್ಟು ಬೆಳೆದಿದೆ. ಅಂದರೆ, ಬ್ರಿಕ್ಸ್​ನ ಆರ್ಥಿಕ ಸಾಮರ್ಥ್ಯವು ಜಾಗತಿಕ ಸರಾಸರಿಗಿಂತ ಎರಡು ಪಟ್ಟು ಹೆಚ್ಚಿದೆ ಎಂದು ಮೋದಿ ವಿವರಿಸಿದ್ದಾರೆ.

ಈ ಬ್ರಿಕ್ಸ್ ಬ್ಯುಸಿನೆಸ್ ಫೋರಂನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಹಲವು ನಾಯಕರು ಮತ್ತು ಉದ್ಯಮಿಗಳು ಉಪಸ್ಥಿತರಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us