ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿದ್ದೀರಿ: ಸೆಮಿಕಂಡಕ್ಟರ್ ದಿಗ್ಗಜರಿಗೆ ಹೇಳಿದ ನರೇಂದ್ರ ಮೋದಿ
Semicon India 2024 conference: ಗ್ರೇಟರ್ ನೋಯ್ಡಾದಲ್ಲಿ ಸೆಪ್ಟೆಂಬರ್ 11, ಬುಧವಾರ ಬೆಳಗ್ಗೆ ಭಾರತದ ಮೊತ್ತಮೊದಲ ಸೆಮಿಕಾನ್ ಇಂಡಿಯಾ 2024 ಸಮಾವೇಶ ಚಾಲನೆಗೆ ಬಂದಿದೆ. ಮೂರು ದಿನಗಳ ಈ ಸಮಾವೇಶವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಸೆಮಿಕಂಡಕ್ಟರ್ ಕ್ಷೇತ್ರದ ಉದ್ಯಮಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ನವದೆಹಲಿ, ಸೆಪ್ಟೆಂಬರ್ 11: ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ನೀವಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸೆಮಿಕಾನ್ ಇಂಡಿಯಾ 2024 ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜಾಗತಿಕ ಸೆಮಿಕಂಡಕ್ಟರ್ ದಿಗ್ಗಜರಿಗೆ ಮೋದಿ ನೀಡಿದ ಸಂದೇಶ ಇದು. ಇಂದು ಬೆಳಗ್ಗೆ ಗ್ರೇಟರ್ ನೋಯ್ಡಾದಲ್ಲಿ ಚೊಚ್ಚಲ ಸೆಮಿಕಾನ್ ಇಂಡಿಯಾ ಸಮಾವೇಶ ಉದ್ಘಾಟನೆ ಮಾಡಿ, ನಂತರ ಮಾತನಾಡಿದ ನರೇಂದ್ರ ಮೋದಿ, ಭಾರತ ಸರ್ಕಾರದಿಂದ ಸ್ಥಿರ ನೀತಿಗಳು ಜಾರಿಯಲ್ಲಿವೆ. ಈಸ್ ಆಫ್ ಡೂಯಿಂಗ್ ಬಿಸಿನೆಸ್ ಉತ್ತಮಗೊಂಡಿದೆ. ಭಾರತದಲ್ಲಿ ಹೂಡಿಕೆ ಮಾಡಲು ಸರಿಯಾದ ಸಮಯ ಇದು ಎಂದು ಹೇಳಿದರು.
ಭಾರತ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪ್ರತಿಯೊಂದು ಸೆಕ್ಟರ್ನಲ್ಲೂ ಮ್ಯಾನುಫ್ಯಾಕ್ಚರಿಂಗ್ಗೆ ಗಮನ ಕೊಡುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಗ್ಲೋಬಲ್ ಡಿಸೈನಿಂಗ್ನಲ್ಲಿ ಶೇ. 20ರಷ್ಟು ಪ್ರತಿಭೆಗಳ ಕೊಡುಗೆ ಭಾರತದ್ದು. ಈ ಸಂಖ್ಯೆ ಹೆಚ್ಚುತ್ತಿದೆ…. ಭಾರತಕ್ಕೆ ಚಿಪ್ ಎಂಬುದು ತಂತ್ರಜ್ಞಾನ ಮಾತ್ರವೇ ಅಲ್ಲ, ಅದು ಗ್ರಾಹಕರ ಭರವಸೆ ಪಡೆಯುವ ಮಾಧ್ಯಮ. ಭಾರತವು ಚಿಪ್ಗಳ ಬಹಳ ದೊಡ್ಡ ಗ್ರಾಹಕವಾಗಿದೆ ಎಂದು ಮೋದಿ ವಿವರಿಸಿದರು.
‘ನಾವು ಮೊಬೈಲ್ ಹ್ಯಾಂಡ್ಸೆಟ್ಗಳ ತಯಾರಿಕೆ ಮತ್ತು ರಫ್ತಿನಲ್ಲಿ ವಿಶ್ವದಲ್ಲೇ ಎರಡನೇ ಅತಿದೊಡ್ಡ ದೇಶವಾಗಿದ್ದೇವೆ. 5ಜಿ ಸ್ಮಾರ್ಟ್ಫೋನ್ಗೆ ಭಾರತ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಸೆಮಿಕಂಡಕ್ಟರ್ನಿಂದ ಹಿಡಿದು ಪೂರ್ಣ ಸರಕುಗಳವರೆಗೆ ನೂರು ಪ್ರತಿಶತದಷ್ಟು ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಅನ್ನು ಭಾರತದಲ್ಲೇ ಮಾಡಬೇಕು ಎನ್ನುವುದು ನಮ್ಮ ಗುರಿ’ ಎಂದರು.
‘ಸಪ್ಲೈ ಚೈನ್ ಕ್ಷಮತೆ ಬಹಳ ಮುಖ್ಯ ವಿವಿಧ ಸೆಕ್ಟರ್ಗಳ ಸಪ್ಲೈ ಚೈನ್ನಲ್ಲಿ ಈ ಕ್ಷಮತೆ ತರಲು ಸಕಲ ಪ್ರಯತ್ನ ಮಾಡಲಾಗುತ್ತಿದೆ. ಸಮಸ್ಯೆಗಳು ಎದ್ದಾಗ ಸುಮ್ಮನೆ ಕೂರದಂತಹ ಪ್ರಪಂಚವನ್ನು ನಾವು ನಿರ್ಮಿಸಲು ಬಯಸುತ್ತೇವೆ,’ ಎಂದು ಸೆಮಿಕಾನ್ ಇಂಡಿಯಾ ಸಮಾವೇಶದಲ್ಲಿ ಮೋದಿ ತಿಳಿಸಿದರು.
ಮೋದೀಸ್ ಲಾ ತಿಳಿಸಿದ ಸೆಮಿ ಸಿಇಒ
ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೂ ಮುನ್ನ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಆಶ್ವನಿ ವೈಷ್ಣವ್, ವಿವಿಧ ಕಂಪನಿಗಳ ಮುಖ್ಯಸ್ಥರು ಭಾಷಣ ಮಾಡಿದರು.
ಇದನ್ನೂ ಓದಿ: ದೇಶ ವಿದೇಶಗಳ ಸೆಮಿಕಂಡಕ್ಟರ್ ಉದ್ಯಮ ದಿಗ್ಗಜರಿಂದ ಪ್ರಧಾನಿ ಮೋದಿಗೆ ಪ್ರಶಂಸೆ
ಭಾರತದ ಶೇ. 50ರಷ್ಟು ಮೊಬೈಲ್ ತಯಾರಿಕೆಯು ಉತ್ತರಪ್ರದೇಶದಲ್ಲಿ ಆಗುತ್ತಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು. ಸೆಮಿ ಸಂಸ್ಥೆಯ ಸಿಇಒ ಅಜಿತ್ ಮನೋಚ ಅವರು ಮೋದೀಸ್ ಲಾ ಎಂಬ ಹೊಸ ವ್ಯಾಖ್ಯಾನ ನೀಡಿದರು. ಭಾರತದಲ್ಲಿ ಹೇಗೆ ಎಲ್ಲವೂ ವೇಗವಾಗಿ ನಡೆಯುತ್ತಿದೆ ಎಂಬುದನ್ನು ಉಲ್ಲೇಖಿಸಿದ ಮನೋಚ, ಭಾರತದಲ್ಲಿ ಮೋದಿ ಅವರು ಲಾ ಆಫ್ ಎಕ್ಸ್ಪೋನೆನ್ಷಿಯಲ್ ತಂದಿದ್ದಾರೆ. ಇದಕ್ಕೆ ಮೋದೀಸ್ ಲಾ ಎನ್ನಬಹುದು ಎಂದು ಪ್ರಶಂಸಿಸಿದರು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ