
ನವದೆಹಲಿ, ಮಾರ್ಚ್ 26: ಇರಾನ್ ಯುದ್ಧ ಪರಿಣಾಮವಾಗಿ ಜಾಗತಿಕವಾಗಿ ತೈಲ ಬೆಲೆ (crude oil price) ಎರಡು ಪಟ್ಟು ಹೆಚ್ಚಾಗಿದೆ. ಆದರೂ ಭಾರತದಲ್ಲಿ ಸರ್ಕಾರದ ಸೂಚನೆ ಮೇರೆಗೆ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಏರಿಸಲಾಗಿಲ್ಲ. ಇದೀಗ ಖಾಸಗಿ ಇಂಧನ ರೀಟೇಲ್ ಮಾರಾಟ ಸಂಸ್ಥೆಯಾದ ನಯಾರಾ ಎನರ್ಜಿ (Nayara Energy) ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಹೆಚ್ಚಿಸಿದೆ. ಪೆಟ್ರೋಲ್ ಬೆಲೆ 5.30 ರೂ ಏರಿದರೆ, ಡೀಸಲ್ ಬೆಲೆ 3 ರೂ ಹೆಚ್ಚಿದೆ.
ಭಾರತದಲ್ಲಿ 2022ರಿಂದ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳ ಆಗಿದ್ದು ಇದೇ ಮೊದಲು. 2022ರ ಮೇ ತಿಂಗಳಲ್ಲಿ ಪೆಟ್ರೋಲ್ ದರ ಪರಿಷ್ಕರಣೆ ಆಗಿತ್ತು. ಮತ್ತೊಂದು ಖಾಸಗಿ ರೀಟೇಲರ್ ಆಗಿರುವ ಜಿಯೋ ಬಿಪಿ ಇನ್ನೂ ಕೂಡ ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡಿಲ್ಲ. ಪೆಟ್ರೋಲ್ ರೀಟೇಲ್ ಕ್ಷೇತ್ರದಲ್ಲಿ ಶೇ. 90ರಷ್ಟು ಪಾರಮ್ಯ ಹೊಂದಿರುವ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಎಚ್ಪಿ ಮತ್ತು ಬಿಪಿ ತಮ್ಮ ಸಾಮಾನ್ಯ ಪೆಟ್ರೋಲ್, ಡೀಸಲ್ ದರಗಳನ್ನು ಏರಿಸಿಲ್ಲ.
ಇದನ್ನೂ ಓದಿ: ಹೆಲ್ತ್ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ
ಕೆಲ ದಿನಗಳ ಹಿಂದೆ ಈ ಒಎಂಸಿಗಳು ತಮ್ಮ ಪ್ರೀಮಿಯಮ್ ಪೆಟ್ರೋಲ್ ಬೆಲೆಗಳನ್ನು ಏರಿಸಿದ್ದವು. ಪ್ರೀಮಿಯಮ್ 95-ಆಕ್ಟೇನ್ ಪೆಟ್ರೋಲ್ ಬೆಲೆಯಲ್ಲಿ ಲೀಟರ್ಗೆ 2 ರೂನಷ್ಟು ಏರಿಕೆ ಮಾಡಲಾಯಿತು. ಇಂಡಸ್ಟ್ರಿಯಲ್ ಡೀಸಲ್ ಬೆಲೆಯಲ್ಲೂ ಏರಿಕೆ ಮಾಡಲಾಗಿತ್ತು. ಆದರೆ, ಮಾಮೂಲಿಯ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳಲ್ಲಿ ಹೆಚ್ಚಳ ಮಾಡಲಾಗಿಲ್ಲ. ನಯಾರಾ ಪೆಟ್ರೋಲ್ ಪಂಪ್ಗಳಲ್ಲಿ ಮಾತ್ರವೇ ಬೆಲೆ ಏರಿಕೆ ಆಗಿದೆ.
ಸರ್ಕಾರ 2022ರಿಂದ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳನ್ನು ಫ್ರೀಜ್ ಮಾಡಿದೆ. ತೈಲ ಬೆಲೆ ಏರಿಕೆಯಾದಾಗ ಸರ್ಕಾರಿ ಸ್ವಾಮ್ಯದ ಒಎಂಸಿಗಳಿಗೆ ನಷ್ಟದ ಹೊರೆ ಕಡಿಮೆ ಮಾಡಲು ಸರ್ಕಾರ ನೆರವಾಗುತ್ತದೆ. ಖಾಸಗಿ ರೀಟೇಲ್ ಕಂಪನಿಗಳಿಗೆ ಸರ್ಕಾರದ ನೆರವು ಸಿಗುವುದಿಲ್ಲ. ತೈಲ ಬೆಲೆ ಕಡಿಮೆ ಇದ್ದಾಗ ಬಂದಿರುವ ಲಾಭದಿಂದ ಈಗ ಆಗುವ ನಷ್ಟವನ್ನು ಸರಿದೂಗಿಸಲು ಯತ್ನಿಸುವುದು ಅನಿವಾರ್ಯ. ಅದು ಸಾಧ್ಯವಾಗದಿದ್ದರೆ ಪೆಟ್ರೋಲ್, ಡೀಸಲ್ ಬೆಲೆ ಏರಿಸುವುದು ಅನಿವಾರ್ಯ. ಅಂತೆಯೇ, ರಷ್ಯಾದ ರಾಸ್ನೆಫ್ಟ್ (Rosneft) ಮಾಲಕತ್ವದ ನಯಾರಾ ಎನರ್ಜಿ ಸಂಸ್ಥೆ ಬೆಲೆ ಏರಿಸಿದೆ.
ಇದನ್ನೂ ಓದಿ: ಪಿಎಂ ಎಸ್ವೈಎಂ ಸ್ಕೀಮ್; ತಿಂಗಳಿಗೆ ಕೇವಲ 55 ರೂ ಹೂಡಿಕೆ; ಉತ್ತಮ ಮಾಸಿಕ ವರಮಾನ ಸೃಷ್ಟಿ
ಭಾರತದಲ್ಲಿ 1,02,075 ಪೆಟ್ರೋಲ್ ಪಂಪ್ಗಳಿವೆ. ಈ ಪೈಕಿ ನಯಾರಾ ಎನರ್ಜಿಯ ಪಂಪ್ಗಳ ಸಂಖ್ಯೆ 7,000ಕ್ಕೂ ಅಧಿಕ. ಜಿಯೊ ಬಿಪ್ ಔಟ್ಲೆಟ್ಗಳ ಸಂಖ್ಯೆ 2,185. ಇನ್ನುಳಿದ 90,000ಕ್ಕೂ ಅಧಿಕ ಪೆಟ್ರೋಲ್ ಪಂಪ್ಗಳು ಇಂಡಿಯನ್ ಆಯಿಲ್, ಬಿಪಿ ಮತ್ತು ಎಚ್ಪಿಗೆ ಸೇರಿದ್ದಾಗಿವೆ.
“ಕಚ್ಛಾ ತೈಲ ಪೂರೈಕೆಯಲ್ಲಿ ಆಗಿರುವ ವ್ಯತ್ಯಯದಿಂದ ಉದ್ಯಮಕ್ಕೆ ದೊಡ್ಡ ಸವಾಲು ಸೃಷ್ಟಿಯಾಗಿದೆ. ಇಂಧನ ವಿತರಣೆ ಮತ್ತು ಲಭ್ಯತೆಯ ಹಲವು ಅಂಶಗಳ ಮೇಲೆ ಪರಿಣಾಮ ಬೀರಿದೆ. ಉತ್ತಮ ಗುಣಮಟ್ಟದ ಇಂಧನದ ನಿರಂತರ ಪೂರೈಕೆಯಿಂದ ಭಾರತದ ಇಂಧನ ಅಗತ್ಯವನ್ನು ಮುಟ್ಟಲು ನಾವು ಪೂರ್ಣ ಗಮನ ಕೊಟ್ಟಿದ್ದೇವೆ ಎಂದು ಗ್ರಾಹಕರಿಗೆ ಭರವಸೆ ನೀಡುತ್ತೇವೆ. ನಮ್ಮ 7,000ಕ್ಕೂ ಅಧಿಕ ರೀಟೇಲ್ ನೆಟ್ವರ್ಕ್ ಸಹಜವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಔಟ್ಲೆಟ್ನಲ್ಲೂ ಸರ್ವಿಸ್ಗೆ ಅಡಚಣೆ ಆಗಿಲ್ಲ. ನಮ್ಮ ರಿಫೈನರಿ ನಿಲುಗಡೆ ಕಾರ್ಯವನ್ನೂ ಬಹಳ ಯೋಜಿತವಾಗಿ ಮಾಡಲಾಗುತ್ತದೆ. ಈ ಅವಧಿಯಲ್ಲಿ ಇಂಧನ ಪೂರೈಕೆಯಲ್ಲಿ ಕೊರತೆ ಆಗದಂತೆ ಎಚ್ಚರ ವಹಿಸುತ್ತೇವೆ” ಎಂದು ನಯಾರಾ ಎನರ್ಜಿ ಸಂಸ್ಥೆ ಹೇಳಿಕೆ ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Thu, 26 March 26