ನವದೆಹಲಿ: ಈ ವರ್ಷ (2023) ವಿಶ್ವದಾದ್ಯಂತ ಸುಮಾರು 21 ಕೋಟಿ ಜನ ನಿರುದ್ಯೋಗಿಗಳಾಗಿರಲಿದ್ದಾರೆ ಎಂದು ವಿಶ್ವಸಂಸ್ಥೆಯ (United Nations) ಉದ್ಯೋಗಾವಕಾಶಕ್ಕೆ ಸಂಬಂಧಿಸಿದ ವರದಿಯೊಂದು ತಿಳಿಸಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ವರದಿ ಸಿದ್ಧಪಡಿಸಿದೆ. ಉಕ್ರೇನ್ ಯುದ್ಧ, ಅತಿಯಾದ ಹಣದುಬ್ಬರ, ಬಿಗಿಯಾದ ಹಣಕಾಸು ನೀತಿಗಳು ಇತ್ಯಾದಿಗಳಿಂದಾಗಿ ಈ ವರ್ಷ ಉದ್ಯೋಗ ಬೆಳವಣಿಗೆ ಶೇ 1ರಷ್ಟು ಕುಸಿತವಾಗಲಿದೆ. ಈ ಹಿಂದೆ 2023ರಲ್ಲಿ ಉದ್ಯೋಗ ಬೆಳವಣಿಗೆ ಶೇ 1.5ರಷ್ಟಿರಲಿದೆ ಎಂದು ಐಎಲ್ಒ ಅಂದಾಜಿಸಿತ್ತು. ಇದೀಗ ಮತ್ತಷ್ಟು ಕುಸಿಯುವ ಮುನ್ಸೂಚನೆ ನೀಡಿದೆ. 30 ಲಕ್ಷ ಇರುವ ನಿರುದ್ಯೋಗಿಗಳ ಸಂಖ್ಯೆ 2023ರಲ್ಲಿ 20.8 ಕೋಟಿ ತಲುಪಲಿದೆ. ನಿರುದ್ಯೋಗ ದರ ಶೇ 5.8ಕ್ಕೆ ಹೆಚ್ಚಳವಾಗಲಿದೆ. ಹಣದುಬ್ಬರವು ಉದ್ಯೋಗಿಗಳ ವೇತನವನ್ನು ನುಂಗಿಹಾಕುತ್ತಿದೆ ಎಂದು ಐಎಲ್ಒ ವರದಿ ತಿಳಿಸಿದೆ.
ಜಾಗತಿಕ ಉದ್ಯೋಗ ಬೆಳವಣಿಗೆ ಕುಂಠಿತವಾಗಲು ಕೋವಿಡ್ ಸಾಂಕ್ರಾಮಿಕವೂ ಕಾರಣ. 2025ರ ವೇಳೆಗೆ ಬಿಕ್ಕಟ್ಟು ಪರಿಹಾರವಾಗುವ ನಿರೀಕ್ಷೆ ಇದೆ ಎಂದು ಐಎಲ್ಒದ ಸಂಶೋಧನಾ ವಿಭಾಗದ ನಿರ್ದೇಶಕ ರಿಚರ್ಡ್ ರಿಚರ್ಡ್ ಸಮನ್ಸ್ ತಿಳಿಸಿದ್ದಾರೆ.
ಕಾರ್ಮಿಕರ ಆದಾಯಕ್ಕಿಂತಲೂ ಬೆಲೆ ಏರಿಕೆ ವೇಗವಾಗಿ ಮೇಲ್ಮುಖವಾಗಿ ಸಾಗುತ್ತಿದೆ. ಜೀವನ ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದ ಬಿಕ್ಕಟ್ಟು ಹೆಚ್ಚಾಗುತ್ತಿದೆ. ಇದು ಇನ್ನಷ್ಟು ಜನರನ್ನು ಬಡತನಕ್ಕೆ ದೂಡಲಿದೆ. ಜಾಗತಿಕ ಆರ್ಥಿಕತೆ ಇನ್ನಷ್ಟು ಕುಂಠಿತವಾದರೆ ಬಡತನದ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ: layoffs: ಮೆಟಾ, ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಘೋಷಣೆ, ಸಂಕಷ್ಟದಲ್ಲಿ ದೈತ್ಯ ಕಂಪನಿಗಳು
ಕೋವಿಡ್ ಸಾಂಕ್ರಾಮಿಕದಿಂದ ಚೇತರಿಕೆ ನಿಧಾನವಾಗುತ್ತಿದೆ. ಇದರ ನಡುವೆ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳು ಹವಾಮಾನ ಬದಲಾವಣೆ ಸೇರಿದಂತೆ ಮಾನವೀಯ ಬಿಕ್ಕಟ್ಟು ಎದುರಿಸುತ್ತಿವೆ. ಈ ಎಲ್ಲ ಅಂಶಗಳು ಬೆಳವಣಿಗೆಯನ್ನು ಕುಂಠಿತಗೊಳಿಸಿವೆ ಎಂದು ಐಎಲ್ಒ ಪ್ರಧಾನ ನಿರ್ದೇಶಕ ಜನರಲ್ ಗಿಲ್ಬರ್ಟ್ ಹೌಂಗ್ಬೋ ತಿಳಿಸಿದ್ದಾರೆ.
ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಅನೇಕ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಮುಂದುವರಿಸಿವೆ. ಇತ್ತೀಚಿನ ಬೆಳವಣಿಗೆಯಲ್ಲಿ ಶೇ 20ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಶೇರ್ಚಾಟ್ ಹೇಳಿದೆ. ಮತ್ತೊಂದೆಡೆ ಮೆಟಾ, ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಕಂಪನಿಗಳು ಅಮೆರಿಕದ ಹಲವೆಡೆ ಕಚೇರಿಗಳ ನಿರ್ವಹಣೆ ವೆಚ್ಚ ಕಡಿತಗೊಳಿಸಲು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆ ನೀಡುತ್ತಿವೆ.