WPI Inflation: ಸಗಟು ಹಣದುಬ್ಬರ 22 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ
2022ರ ಡಿಸೆಂಬರ್ನಲ್ಲಿ ಸಗಟು ಹಣದುಬ್ಬರ ಪ್ರಮಾಣ ಶೇ 4.95ಕ್ಕೆ ಇಳಿಕೆಯಾಗಿದೆ. ಆಹಾರ ವಸ್ತುಗಳು, ತರಕಾರಿ, ತೈಲಬೀಜಗಳ ಬೆಲೆ ಇಳಿಕೆ ಸಗಟು ಹಣದುಬ್ಬರ ಇಳಿಕೆಗೆ ನೆರವಾಗಿದೆ.
ನವದೆಹಲಿ: ಚಿಲ್ಲರೆ ಹಣದುಬ್ಬರ (Retail Inflation) ಪ್ರಮಾಣ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಬೆನ್ನಲ್ಲೇ ಸಗಟು ದರ ಆಧಾರಿತ ಹಣದುಬ್ಬರವೂ (WPI Inflation) 22 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿರುವುದು ತಿಳಿದುಬಂದಿದೆ. 2022ರ ಡಿಸೆಂಬರ್ನಲ್ಲಿ ಸಗಟು ಹಣದುಬ್ಬರ ಪ್ರಮಾಣ ಶೇ 4.95ಕ್ಕೆ ಇಳಿಕೆಯಾಗಿದೆ. ಆಹಾರ ವಸ್ತುಗಳು, ತರಕಾರಿ, ತೈಲಬೀಜಗಳ ಬೆಲೆ ಇಳಿಕೆ ಸಗಟು ಹಣದುಬ್ಬರ ಇಳಿಕೆಗೆ ನೆರವಾಗಿದೆ. ನವೆಂಬರ್ನಲ್ಲಿ ಸಗಟು ಹಣದುಬ್ಬರ ಪ್ರಮಾಣ ಶೇ 5.85 ಇತ್ತು. 2021ರ ಡಿಸೆಂಬರ್ನಲ್ಲಿ ಶೇ 14.27ರಷ್ಟಿತ್ತು.
ತರಕಾರಿ ಮತ್ತು ಈರುಳ್ಳಿ ಬೆಲೆ ಕುಸಿತದಿಂದ ಕಳೆದ ತಿಂಗಳು ಆಹಾರ ಹಣದುಬ್ಬರ ಶೇ 1.25ಕ್ಕೆ ಇಳಿಕೆಯಾಗಿತ್ತು. ಆದಾಗ್ಯೂ ಗೋಧಿ, ಬೇಳೆಕಾಳುಗಳು, ಆಲೂಗಡ್ಡೆ ಮತ್ತು ಹಾಲು, ಮೊಟ್ಟೆ, ಮೀನು ದುಬಾರಿಯಾಗಿವೆ. ತರಕಾರಿ ಮತ್ತು ಈರುಳ್ಳಿಯ ಸಗಟು ಹಣದುಬ್ಬರ ಕ್ರಮವಾಗಿ ಶೇ 35 ಮತ್ತು 25.97ಕ್ಕೆ ಇಳಿಕೆಯಾಗಿವೆ. ಸಗಟು ಹಣದುಬ್ಬರದ ಅತಿ ಕಡಿಮೆ ಪ್ರಮಾಣ 2021ರ ಫೆಬ್ರವರಿಯಲ್ಲಿ ವರದಿಯಾಗಿತ್ತು. ಆಗ ಸಗಟು ಹಣದುಬ್ಬರ ಪ್ರಮಾಣ ಶೇ 4.83 ರಷ್ಟಿತ್ತು.
ಇದನ್ನೂ ಓದಿ: Retail Inflation: ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಚಿಲ್ಲರೆ ಹಣದುಬ್ಬರ
ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣ ಡಿಸೆಂಬರ್ನಲ್ಲಿ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ, ಅಂದರೆ ಶೇಕಡಾ 5.72ಕ್ಕೆ ಇಳಿಕೆಯಾಗಿರುವ ಬಗ್ಗೆ ಕಳೆದ ಗುರುವಾರ ಕೇಂದ್ರ ಸಾಂಖ್ಯಿಕ, ಯೋಜನಾನುಷ್ಠಾನ ಸಚಿವಾಲಯ ಮಾಹಿತಿ ನೀಡಿತ್ತು. ಸತತ 11 ತಿಂಗಳ ಬಳಿಕ ಚಿಲ್ಲರೆ ಹಣದುಬ್ಬರ ನವೆಂಬರ್ನಲ್ಲಿ ಶೇಕಡಾ 6ಕ್ಕಿಂತ ಕೆಳಗಿದು, ಆರ್ಬಿಐ ಸಹನೆಯ ಮಟ್ಟಕ್ಕೆ ಇಳಿಕೆಯಾಗಿತ್ತು. ಹಣದುಬ್ಬರ ತಡೆಯುವ ಸಲುವಾಗಿ ಆರ್ಬಿಐ ಹಣಕಾಸು ನೀತಿ ಸಮಿತಿಯು ಡಿಸೆಂಬರ್ 7ರಂದು ರೆಪೊ ದರವನ್ನು 35 ಮೂಲಾಂಶದಷ್ಟು ಹೆಚ್ಚಿಸಿ ಶೇಕಡಾ 6.25ಕ್ಕೆ ನಿಗದಿ ಮಾಡಿತ್ತು.
2023ರ ಜನವರಿ – ಮಾರ್ಚ್ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಸರಾಸರಿ ಶೇ 4.7 ಇರಲಿದೆ ಎಂದು ಎಸ್ಬಿಐ ಸಂಶೋಧನಾ ವರದಿ ಇತ್ತೀಚೆಗೆ ಅಂದಾಜಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ