RCB owners: ಮಾರಾಟ ಊಹಾಪೋಹ; ಝರ್ರನೆ ಏರಿದ ಆರ್ಸಿಬಿ ಮಾಲೀಕರ ಷೇರುಬೆಲೆ
United Spirits share price up today: ಆರ್ಸಿಬಿ ಫ್ರಾಂಚೈಸಿ ಮಾಲೀಕಸಂಸ್ಥೆ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಷೇರುಬೆಲೆ ಇವತ್ತು ಶೇ. 0.77ರಷ್ಟು ಏರಿದೆ. ಯುನೈಟೆಡ್ ಸ್ಪಿರಿಟ್ಸ್ನ ಮಾಲೀಕರಾದ ಡಿಯಾಜಿಯೋ ಸಂಸ್ಥೆಯು ಆರ್ಸಿಬಿಯನ್ನು ಮಾರುವ ಚಿಂತನೆಯಲ್ಲಿ ಇದೆ ಎನ್ನುವ ಸುದ್ದಿ ಇವತ್ತು ಕೇಳಿಬಂದಿದೆ. ಈ ಬೆನ್ನಲ್ಲೇ ಯುನೈಟೆಡ್ ಸ್ಪಿರಿಟ್ಸ್ ಷೇರುಬೆಲೆ ಏರಿಕೆ ಆಗಿದೆ. ಇದು ಕಾಕತಾಳೀಯವೋ, ಆರ್ಸಿಬಿ ಮಾರಾಟ ಸುದ್ದಿಯ ಪರಿಣಾಮವೋ ಗೊತ್ತಿಲ್ಲ.

ಬೆಂಗಳೂರು, ಜೂನ್ 10: ಆರ್ಸಿಬಿಯನ್ನು ಮಾರಾಟ ಮಾಡಲು ಯೋಜಿಸಲಾಗುತ್ತಿದೆ ಎನ್ನುವ ಸುದ್ದಿ ಇವತ್ತು ಕೇಳಿ ಬಂದ ಬೆನ್ನಲ್ಲೇ ಮಾಲೀಕರ ಷೇರುಬೆಲೆ ಏರಿಕೆ ಆಗಿದೆ. ಇವತ್ತು ಮಂಗಳವಾರ ಯುನೈಟೆಡ್ ಸ್ಪಿರಿಟ್ಸ್ನ ಷೇರುಬೆಲೆ 12 ರೂನಷ್ಟು (ಶೇ. 0.77) ಹೆಚ್ಚಳ ಆಗಿದೆ. 1,592 ರೂ ಇದ್ದ ಬೆಲೆ 1,605 ರೂ ಮುಟ್ಟಿದೆ. ಮಧ್ಯಾಹ್ನ 12 ಗಂಟೆಯ ವೇಳೆ ಬೆಲೆ 1,631 ರೂವರೆಗೂ ಏರಿತ್ತು.
ಆರ್ಸಿಬಿ ಮಾರಾಟದ ಸುದ್ದಿಯ ಪರಿಣಾಮವಾ?
ಐಪಿಎಲ್ನ ನೂತನ ಚಾಂಪಿಯನ್ಸ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿಯನ್ನು ಮಾರಾಟ ಮಾಡಲು ಯೋಜಿಸಲಾಗುತ್ತಿದೆ ಎನ್ನುವಂತಹ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿಯ ಷೇರುಬೆಲೆ ಇವತ್ತು ಏರಿರುವ ಸಾಧ್ಯತೆ ಇಲ್ಲದಿಲ್ಲ. ಆರ್ಸಿಬಿ ತಂಡದ ಮಾಲಕತ್ವ ಯುನೈಟೆಡ್ ಸ್ಪಿರಿಟ್ಸ್ನದ್ದಾಗಿದೆ. ಬ್ರಿಟನ್ ಮೂಲದ ಡಿಯಾಜಿಯೋ ಕಂಪನಿಯು ಯುನೈಟೆಡ್ ಸ್ಪಿರಿಟ್ಸ್ನ ಮಾಲಕ ಸಂಸ್ಥೆ.
ಇದನ್ನೂ ಓದಿ: ಆರ್ಸಿಬಿ ಮಾರಾಟ, 17,000 ಕೋಟಿ ರೂಗೆ? ಫ್ರಾಂಚೈಸಿ ಮಾರುವ ಯೋಚನೆಯಲ್ಲಿದ್ದಾರಾ ಮಾಲೀಕರು?
ಮಾಧ್ಯಮಗಳಲ್ಲಿ ಬಂದ ವರದಿ ಪ್ರಕಾರ, ಡಿಯಾಜಿಯೋ ಸಂಸ್ಥೆಯು ಅರ್ಸಿಬಿಯನ್ನು ಮಾರಿಬಿಡುವ ಆಲೋಚನೆಯಲ್ಲಿದೆ. ಈ ಬಗ್ಗೆ ಸಲಹೆಗಾರರ ಜೊತೆ ಸಮಾಲೋಚನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಡಿಯಾಜಿಯೋ ಸಂಸ್ಥೆ ಆರ್ಸಿಬಿಯನ್ನು ಮಾರುವ ಯೋಚನೆ ಮಾಡಿರುವುದಕ್ಕೆ ಎರಡು ಕಾರಣಗಳನ್ನು ಶಂಕಿಸಲಾಗಿದೆ. ಮೊದಲನೆಯದು, ಆಲ್ಕೋಹಾಲ್ ಬ್ಯುಸಿನೆಸ್ನಲ್ಲಿರುವ ಡಿಯಾಜಿಯೋ ತನ್ನ ಹಣಕಾಸು ಸಂಕಷ್ಟವನ್ನು ತಗ್ಗಿಸುವ ಸಲುವಾಗಿ ಮತ್ತು ಉದ್ಯಮದ ಮೇಲೆ ಹೆಚ್ಚು ಗಮನ ಕೊಡುವ ಸಲುವಾಗಿ ತನ್ನ ಉದ್ಯಮಕ್ಕೆ ಸೇರದ ವ್ಯವಹಾರಗಳನ್ನು ಕೈಬಿಡುವುದೋ ಅಥವಾ ಮುಂದುವರಿಸುವುದೋ ಎಂದು ಪರಿಶೀಲನೆ ನಡೆಸುತ್ತಿದೆ. ಪರಿಶೀಲನೆಯಾಗುತ್ತಿರುವ ಈ ಬ್ಯುಸಿನೆಸ್ಗಳಲ್ಲಿ ಆರ್ಸಿಬಿಯೂ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಡಿಶ್, ಕೇಬಲ್ ಟಿವಿ ಉದ್ಯಮದ ಸಂಕಷ್ಟ: ಕೆಲಸ ಕಳೆದುಕೊಂಡ 5.77 ಲಕ್ಷ ಮಂದಿ
ಮತ್ತೊಂದು ಕಾರಣ ಎಂದರೆ, ಕೇಂದ್ರ ಸರ್ಕಾರವು ಐಪಿಎಲ್ ಟೂರ್ನಿಯಲ್ಲಿ ತಂಬಾಕು ಮತ್ತು ಆಲ್ಕೋಹಾಲ್ ಉತ್ಪನ್ನಗಳ ಪ್ರಚಾರವನ್ನು ನಿಷೇಧಿಸಲು ಯೋಜಿಸುತ್ತಿದೆ. ಹೀಗಾಗಿ, ಫ್ರಾಂಚೈಸಿಯಿಂದ ಹೊರಬರುವ ನಿರ್ಧಾರವನ್ನು ಡಿಯಾಜಿಯೋ ಪರಿಗಣಿಸಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:47 pm, Tue, 10 June 25