RCB: ಆರ್ಸಿಬಿ ಮಾರಾಟ ಮಾಡುವುದಿಲ್ಲ: ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟನೆ
No sale of RCB, clarifies United Spirits: ಆರ್ಸಿಬಿಯನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಸುದ್ದಿಯನ್ನು ಯುನೈಟೆಡ್ ಸ್ಪಿರಿಟ್ಸ್ ಅಲ್ಲಗಳೆದಿದೆ. ರಾಯಲ್ ಚಾಲೆಂಜರ್ಸ್ ತಂಡವನ್ನು ಮಾರಾಟ ಮಾಡುವ ಯಾವ ಆಲೋಚನೆಯೂ ಇಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಯುನೈಟೆಡ್ ಸ್ಪಿರಿಟ್ಸ್ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರವು ಮದ್ಯದ ಜಾಹೀರಾತು ನಿರ್ಬಂಧಿಸುವ ಕಾರಣದಿಂದ ಆರ್ಸಿಬಿಯನ್ನು ಮಾರಬಹುದು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಕಾರಣಕ್ಕೆ ಮಾಲೀಕರು ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು, ಜೂನ್ 10: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಫ್ರಾಂಚೈಸಿಯನ್ನು (Royal Challengers Bangalore) ಮಾರಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ (USL- United Spirits Ltd) ತಳ್ಳಿಹಾಕಿದೆ. ಆರ್ಸಿಬಿ ತಂಡವನ್ನು ಮಾರಾಟ ಮಾಡಲಾಗುತ್ತದೆ ಎನ್ನುವ ಸುದ್ದಿ ಶುದ್ಧ ಸುಳ್ಳು, ಊಹಾಪೋಹ ಅಷ್ಟೇ. ತಂಡವನ್ನು ಮಾರಾಟ ಮಾಡುತ್ತಿಲ್ಲ ಎಂದು ಆರ್ಸಿಬಿಯ ಮಾಲಕಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
ಆರ್ಸಿಬಿ ತಂಡವನ್ನು ಪೂರ್ಣವಾಗಿಯಾಗಲೀ, ಭಾಗಶಃ ಆಗಿಯಾಗಲೀ ಮಾರಾಟ ಮಾಡುತ್ತಿಲ್ಲ ಎಂದು ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಕಂಪನಿ ಹೇಳಿಕೆ ನೀಡಿದೆ.
ಕೇಂದ್ರ ಸರ್ಕಾರವು ಕ್ರೀಡಾಕೂಟಗಳಲ್ಲಿ ತಂಬಾಕು ಮತ್ತು ಮದ್ಯ ಉತ್ಪನ್ನಗಳ ಪ್ರಚಾರ ಮತ್ತು ಜಾಹೀರಾತು ನಡೆಯದಂತೆ ನಿರ್ಬಂಧಿಸಲು ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಆರ್ಸಿಬಿಯನ್ನು ಮಾರುವ ಪರಿಶೀಲನೆಯಲ್ಲಿ ಡಿಯಾಜಿಯೋ ಇದೆ ಎನ್ನುವಂತಹ ಸುದ್ದಿಯನ್ನು ಬ್ಲೂಮ್ಬರ್ಗ್ ಸುದ್ದಿ ಸಂಸ್ಥೆ ಪ್ರಕಟಿಸಿತ್ತು.
ಇದನ್ನೂ ಓದಿ: ಆರ್ಸಿಬಿ ಮಾರಾಟ, 17,000 ಕೋಟಿ ರೂಗೆ? ಫ್ರಾಂಚೈಸಿ ಮಾರುವ ಯೋಚನೆಯಲ್ಲಿದ್ದಾರಾ ಮಾಲೀಕರು?
ಆರ್ಸಿಬಿಯ ಮಾಲೀಕನಾಗಿರುವ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯು ಬ್ರಿಟನ್ ಮೂಲದ ಡಿಯಾಜಿಯೋದ ಅಂಗಸಂಸ್ಥೆಯಾಗಿದೆ.
ಬ್ಲೂಮ್ಬರ್ಗ್ ವರದಿ ಪ್ರಕಾರ, ಡಿಯಾಜಿಯೋ ಸಂಸ್ಥೆಯು ಆರ್ಸಿಬಿಗೆ 2 ಬಿಲಿಯನ್ ಡಾಲರ್ (17,000 ಕೋಟಿ ರೂ) ಮೊತ್ತದ ವ್ಯಾಲ್ಯುಯೇಶನ್ ನಿರೀಕ್ಷಿಸುತ್ತಿದೆ ಎನ್ನಲಾಗಿತ್ತು.
ಐಪಿಎಲ್ನ ಆರಂಭದಲ್ಲಿ ಇದ್ದ ಎಂಟು ತಂಡಗಳಲ್ಲಿ ಆರ್ಸಿಬಿಯೂ ಒಂದು. ಮೊದಲಿಗೆ ವಿಜಯ್ ಮಲ್ಯ ಒಡೆತನದಲ್ಲಿ ಯುನೈಟೆಡ್ ಸ್ಪಿರಿಟ್ಸ್ ಇತ್ತು. ಯುನೈಟೆಡ್ ಸ್ಪಿರಿಟ್ಸ್ ಅನ್ನು ಬ್ರಿಟನ್ ಮೂಲದ ಡಿಯಾಜಿಯೋ ಖರೀದಿ ಮಾಡಿತು. ಆ ಬಳಿಕ ಆರ್ಸಿಬಿ ಮಾಲಕತ್ವವು ಡಿಯಾಜಿಯೋ ಕೈಗೆ ಹೋಗಿತ್ತು. 2008ರಿಂದ ಐಪಿಎಲ್ ಆಡುತ್ತಿರುವ ರಾಯಲ್ ಚಾಲೆಂಜ್ಸ್ ತಂಡ ಈ ವರ್ಷ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಪಡೆದಿದೆ.
ಇದನ್ನೂ ಓದಿ: ವಿಜಯ್ ಮಲ್ಯ ಬೇರೆ ಬೇರೆ ದೇಶಗಳಲ್ಲಿ ಹೊಂದಿರುವ ಆಸ್ತಿಗಳೇನು? ಅವುಗಳ ಮೌಲ್ಯವೆಷ್ಟು?
ಆದರೆ, ನಂತರ ನಡೆದ ಸಂಭ್ರಮಾಚರಣೆ ವೇಳೆ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸೇರಿ ನೂಕುನುಗ್ಗಲಾಗಿ 11 ಮಂದಿ ಕಾಲ್ತುಳಿತದಿಂದ ಬಲಿಯಾದ ದುರ್ಘಟನೆಯೂ ಸಂಭವಿಸಿ, ಆರ್ಸಿಬಿ ಗೆಲುವಿನಲ್ಲಿ ಕಪ್ಪುಚುಕ್ಕೆ ಎನಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ