ನವದೆಹಲಿ: ಪ್ಯಾನ್ ಕಾರ್ಡ್ (PAN Card) ಹೊಂದಿಲ್ಲದವರ ಇಪಿಎಪ್ಗೆ ಟಿಡಿಎಸ್ (TDS) ಕಡಿತ ಮಾಡುವ ಪ್ರಮಾಣವನ್ನು ಶೇ 30ರಿಂದ 20ಕ್ಕೆ ಇಳಿಕೆ ಮಾಡಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್ನಲ್ಲಿ ಪ್ರಸ್ತಾಪಿಸಿದ್ದಾರೆ. ಆದಾಗ್ಯೂ, ಈ ವಿಚಾರಕ್ಕೆ ಸಂಬಂಧಿಸಿ ಇತರ ಆದಾಯ ತೆರಿಗೆ ನಿಯಮಗಳು ಈಗಿರುವ ಹಾಗೆಯೇ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ. ಆದಾಯ ತೆರಿಗೆ ನಿಯಮದ ಪ್ರಕಾರ, 5 ವರ್ಷಗಳ ಅವಧಿಗೆ ಮುನ್ನ ಇಪಿಎಫ್ ವಿತ್ಡ್ರಾ ಮಾಡುವುದಾದರೆ ಒಟ್ಟು ಮೊತ್ತಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ವರ್ಷಕ್ಕೆ 2.5 ಲಕ್ಷ ರೂ.ಗಿಂತ ಹೆಚ್ಚು ಪಿಎಫ್ಗೆ ಜಮೆ ಮಾಡುವುದೂ ತೆರಿಗೆ ವ್ಯಾಪ್ತಿಗೆ ಬರುತ್ತದೆ.
ಪಿಎಫ್ ಅಥವಾ ಇಪಿಎಫ್ ಖಾತೆಯಿಂದ ಐದು ವರ್ಷ ಅವಧಿಗೂ ಮುನ್ನ ವಿತ್ಡ್ರಾ ಮಾಡುವುದು ತೆರಿಗೆ ವ್ಯಾಪ್ತಿಗೆ ಬರುತ್ತದೆ. ಪಿಎಫ್ ಖಾತೆದಾರ ಪ್ಯಾನ್ ಕಾರ್ಡ್ ಹೊಂದಿದ್ದಲ್ಲಿ ಟಿಡಿಎಸ್ ಕಡಿತವಾಗುವುದಿಲ್ಲ. ಇಲ್ಲದಿದ್ದರೆ ಪಿಎಫ್ ವಿತ್ಡ್ರಾವಲ್ ಮೊತ್ತವು ಪಿಎಫ್ ಚಂದಾದಾರನ ಆ ವರ್ಷದ ತೆರಿಗೆ ವ್ಯಾಪ್ತಿಯ ಆದಾಯಕ್ಕೆ ಸೇರುತ್ತದೆ ಎಂದು ಮುಂಬೈ ಮೂಲದ ತೆರಿಗೆ ತಜ್ಞ ಬಲ್ವಂತ್ ಜೈನ್ ಹೇಳಿರುವುದಾಗಿ ‘ಲೈವ್ ಮಿಂಟ್ ಡಾಟ್ಕಾಂ’ ವರದಿ ಮಾಡಿದೆ.
ಇದನ್ನೂ ಓದಿ: Income Tax Slabs: ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ; ಗೊಂದಲವಿದೆಯಾ? ಇಲ್ಲಿದೆ ಹಳೆದು, ಹೊಸದರ ನಡುವಣ ಪೂರ್ಣ ವ್ಯತ್ಯಾಸ
‘ಪಿಎಫ್ ಖಾತೆ ಜತೆ ಪ್ಯಾನ್ ಅನ್ನು ಸಂಯೋಜಿಸಿರದಿದ್ದರೆ ಪಿಎಫ್ ಖಾತೆಯ ನಿವ್ವಳ ಮೊತ್ತದಿಂದ ಪಿಎಫ್ ಕಡಿತವಾಗಬಹುದು. ಸದ್ಯ ಟಿಡಿಎಸ್ ಪ್ರಮಾಣ ಶೇ 30ರಷ್ಟಿದ್ದು, 2023ರ ಏಪ್ರಿಲ್ 1ರಿಂದ ಶೇ 20ಕ್ಕೆ ಇಳಿಕೆಯಾಗಲಿದೆ’ ಎಂದು ಬಲ್ವಂತ್ ಜೈನ್ ತಿಳಿಸಿದ್ದಾರೆ.
ಆದಾಯ ತೆರಿಗೆ ನಿಯಮಕ್ಕೆ ಬಜೆಟ್ನಲ್ಲಿ ಮಹತ್ವದ ಪರಿಷ್ಕರಣೆ ಮಾಡಲಾಗಿದ್ದು, ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂ.ಗೆ ವಿಸ್ತರಣೆ ಮಾಡಲಾಗಿದೆ. ಹೊಸ ತೆರಿಗೆ ಪದ್ಧತಿಯಡಿ ಈ ಘೋಷಣೆ ಮಾಡಲಾಗಿದ್ದು, ಇದುವೇ ಡಿಫಾಲ್ಟ್ ತೆರಿಗೆ ಪದ್ಧತಿಯಾಗಿರಲಿದೆ ಎಂದೂ ಹಣಕಾಸು ಸಚಿವರು ತಿಳಿಸಿದ್ದಾರೆ. ಹಳೆಯ ತೆರಿಗೆ ಪದ್ಧತಿಯೂ ಅಸ್ತಿತ್ವದಲ್ಲಿರಲಿದ್ದು, 3 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಈ ತೆರಿಗೆ ವಿಧಾನದಲ್ಲಿ ಆದಾಯ ತೆರಿಗೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ.