
ಮುಂಬೈ, ಮೂನ್ 17: ಭಾರತದ ಅತಿದೊಡ್ಡ ಐಟಿ ಸರ್ವಿಸ್ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನ ಉದ್ಯೋಗಿಗಳ ಬೆಂಚ್ ಟೈಮ್ ನೀತಿಯನ್ನು (Bench time) ಅಪ್ಡೇಟ್ ಮಾಡಿದೆ. ಈ ಹೊಸ ಪಾಲಿಸಿ ಪ್ರಕಾರ ಪ್ರತಿಯೊಬ್ಬ ಉದ್ಯೋಗಿಯ ಸಕ್ರಿಯ ಕಾರ್ಯದಿನಗಳು ಅಥವಾ ಬಿಲ್ಡ್ ಬ್ಯುಸಿನೆಸ್ ದಿನಗಳು (Billed business day) ಒಂದು ವರ್ಷದಲ್ಲಿ ಕನಿಷ್ಠ 225 ಇರಬೇಕು ಎಂದಿದೆ. ಅಂದರೆ, ಉದ್ಯೋಗಿಯನ್ನು ವರ್ಷದಲ್ಲಿ 225ಕ್ಕೂ ಹೆಚ್ಚು ದಿನ ಸಕ್ರಿಯ ಪ್ರಾಜೆಕ್ಟ್ಗಳಲ್ಲಿ ಬಳಕೆ ಮಾಡಬೇಕು. ಹಾಗೆಯೇ, ಒಬ್ಬ ಉದ್ಯೋಗಿಯ ಬೆಂಚ್ ಟೈಮ್ ಒಂದು ವರ್ಷದಲ್ಲಿ 35ಕ್ಕಿಂತ ಹೆಚ್ಚಿರಬಾರದು. ಈ ನೀತಿಯನ್ನು ಜೂನ್ 12ರಿಂದಲೇ ಟಿಸಿಎಸ್ ಜಾರಿಗೆ ತಂದಿದೆ.
ಒಬ್ಬ ಉದ್ಯೋಗಿಯು ಸಕ್ರಿಯವಾಗಿರುವ ಪ್ರಾಜೆಕ್ಟ್ಗಳಲ್ಲಿ ತೊಡಗಿರದೆ ಸುಮ್ಮನೆ ಇರುವ ಅವಧಿಯನ್ನು ಬೆಂಚ್ ಟೈಮ್ ಎನ್ನುತ್ತಾರೆ. ವಿವಿಧ ಪ್ರಾಜೆಕ್ಟ್ಗಳ ಮೇಲೆ ಕೆಲಸ ಮಾಡುತ್ತಿರುವ ಕಂಪನಿಗಳಲ್ಲಿ ಕೆಲ ಉದ್ಯೋಗಿಗಳು ಖಾಲಿ ಇರುವುದುಂಟು. ಐಟಿ ಕ್ಷೇತ್ರದಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ.
ಬಿಲ್ಡ್ ಬ್ಯುಸಿನೆಸ್ ಡೇ ಎಂದರೆ ಕಂಪನಿಗೆ ಆದಾಯ ತರಬಲ್ಲಂತಹ ಕ್ಲೈಂಟ್ ಪ್ರಾಜೆಕ್ಟ್ಗಳಲ್ಲಿ ಕೆಲಸ ನಡೆಯುತ್ತಿರುವ ದಿನ ಎಂದಾಗುತ್ತದೆ. ಆ ದಿನದ ಕೆಲಸದಿಂದ ಕಂಪನಿಗೆ ಆದಾಯ ಸಿಗುತ್ತದೆ.
ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ಕಾದಿದೆಯಾ ಸಂಕಷ್ಟ? ಟಿಸಿಎಸ್, ಇನ್ಫೋಸಿಸ್ ಕಂಪನಿಗಳ ಬ್ಯುಸಿನೆಸ್ ಇಳಿಮುಖ?
‘ಯಾವುದೇ ಕೆಲಸದ ನಿಯೋಜನೆ ಇಲ್ಲದೆ ದೀರ್ಘಕಾಲ ಇದ್ದರೆ ಉದ್ಯೋಗಿಯ ವೃತ್ತಿಜೀವನಕ್ಕೆ ತೊಂದರೆ ಆಗುತ್ತದೆ. ಕಂಪನಿಯಲ್ಲಿ ಆತನ ಮುಂದುವರಿಕೆಗೆ ಅಡ್ಡಿಯಾಗುತ್ತದೆ. ಹೀಗಾಗಿ, ವರ್ಷದಲ್ಲಿ 225 ದಿನಗಳಾದರೂ ಉದ್ಯೋಗಿಯನ್ನು ಸಕ್ರಿಯ ಪ್ರಾಜೆಕ್ಟ್ಗಳಿಗೆ ಉಪಯೋಗಿಸಬೇಕು’ ಎಂದು ಟಿಸಿಎಸ್ನ ನೀತಿಯಲ್ಲಿ ತಿಳಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.
ಇದನ್ನೂ ಓದಿ: ಬರಲಿವೆ ಹೊಸ ಎಸಿ ನಿಯಮಗಳು; ಉಷ್ಣಾಂಶ 20 ಡಿಗ್ರಿಗಿಂತ ಕಡಿಮೆಗೆ ಇಳಿಸುವಂತಿಲ್ಲ; ಗರಿಷ್ಠ ಉಷ್ಣಾಂಶಕ್ಕೂ ಮಿತಿ
ಇನ್ಫೋಸಿಸ್, ವಿಪ್ರೋ, ಎಚ್ಸಿಎಲ್, ಕಾಗ್ನೈಜೆಂಟ್ ಇತ್ಯಾದಿ ಹೆಚ್ಚಿನ ಐಟಿ ಕಂಪನಿಗಳಲ್ಲಿ ಉದ್ಯೋಗಿಯ ಬೆಂಚ್ ಟೈಮ್ ಒಂದು ವರ್ಷಕ್ಕೆ 35-45 ದಿನ ಇದೆ. ಆದರೆ, ಒಬ್ಬ ಉದ್ಯೋಗಿ ಒಂದು ವರ್ಷದಲ್ಲಿ 60 ದಿನಗಳನ್ನು ಬೆಂಚ್ ಟೈಮ್ನಲ್ಲಿ ಕಳೆದರೆ ಆತನನ್ನು ಉದ್ಯೋಗದಲ್ಲಿ ಮುಂದುವರಿಸುವ ಸಾಧ್ಯತೆ ಕಡಿಮೆ ಇರುತ್ತದೆ.
ಬೆಂಚ್ನಲ್ಲಿರುವ ಉದ್ಯೋಗಿಗಳು ಈ ಅವಧಿಯನ್ನು ತಮ್ಮ ಕೌಶಲ್ಯ ಅಭಿವೃದ್ಧಿಗೆ ಬಳಕೆ ಮಾಡಲು ಅವಕಾಶ ಇರುತ್ತದೆ. ತಮಗೆ ಕೊರತೆ ಎನಿಸಿರುವ ಅಗತ್ಯ ಕೌಶಲ್ಯಗಳನ್ನು ಕಲಿಯಲು ಅಥವಾ ಹೆಚ್ಚಿನ ಪಕ್ವತೆ ಗಳಿಸಲು ಪ್ರಯತ್ನಿಸಬಹುದು. ಇಂಟರ್ನಲ್ ಪ್ರಾಜೆಕ್ಟ್ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬಹುದು. ಈ ಮೂಲಕ ಕಂಪನಿಯ ಪ್ರಮುಖ ಪ್ರಾಜೆಕ್ಟ್ಗಳಿಗೆ ಇವರನ್ನು ಪರಿಗಣಿಸಲು ದಾರಿ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ