ನವದೆಹಲಿ: ಏಳನೇ ವೇತನ ಆಯೋಗ (7th Pay Commission) ಶಿಫಾರಸು ಮಾಡಿರುವ ಪ್ರಮಾಣದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮಾರ್ಚ್ನಲ್ಲಿ ಶೇಕಡಾ 3-5ರಷ್ಟು ತುಟ್ಟಿ ಭತ್ಯೆ ಅಥವಾ ಡಿಎ (DA Hike) ಹೆಚ್ಚಳವಾಗುವ ಸಾಧ್ಯತೆ ಇದೆ. ಇದರಿಂದ ಲಕ್ಷಾಂತರ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಸೆಪ್ಟೆಂಬರ್ನಲ್ಲಿ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಕೇಂದ್ರ ಸರ್ಕಾರ ಶೇಕಡಾ 4ರಷ್ಟು ಹೆಚ್ಚಿಸಿತ್ತು. ಈ ಮಧ್ಯೆ, 18 ತಿಂಗಳುಗಳಿಂದ ಬಾಕಿ ಇರುವ ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರವನ್ನು ಕಂತುಗಳಲ್ಲಿ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಇದನ್ನೂ ಶೀಘ್ರವೇ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೆಪ್ಟೆಂಬರ್ 28ರಂದು ಕೇಂದ್ರ ಸಚಿವ ಸಂಪುಟ ಸಮಿತಿ ಸರ್ಕಾರಿ ನೌಕರರ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರವನ್ನು ಶೇಕಡಾ 4ರಷ್ಟು ಹೆಚ್ಚಿಸಿ ಶೇಕಡಾ 38ಕ್ಕೆ ನಿಗದಿ ಮಾಡಿತ್ತು. ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಈ ಹೆಚ್ಚಳ ಪ್ರಕಟಿಸಲಾಗಿತ್ತು. ಇದರಿಂದ ಸುಮಾರು 48 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಹಾಗೂ 68 ಲಕ್ಷ ಪಿಂಚಣಿದಾರರಿಗೆ ಹಬ್ಬದ ಅವಧಿಯಲ್ಲಿ ಪ್ರಯೋಜನವಾಗಿತ್ತು.
ಡಿಎ ಹೆಚ್ಚಳ ಲೆಕ್ಕಾಚಾರ ಹೇಗೆ?
ಕೇಂದ್ರ ಸರ್ಕಾರಿ ನೌಕರರ ವೇತನದ ಒಂದು ಭಾಗವನ್ನು ಗಣನೆಗೆ ತೆಗೆದುಕೊಂಡು ಡಿಎ ಅಥವಾ ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಉದಾಹರಣೆಗೆ; ಒಬ್ಬ ಸರ್ಕಾರಿ ನೌಕರನ ಒಟ್ಟು ಮಾಸಿಕ ವೇತನ 50,000 ರೂ. ಇದ್ದು 15,000 ರೂ. ಮೂಲ ವೇತನ ಇದ್ದರೆ ಶೇಕಡಾ 34ರಂತೆ 5,100 ತುಟ್ಟಿ ಭತ್ಯೆ ದೊರೆಯುತ್ತದೆ. ಶೇಕಡಾ 4ರಷ್ಟು ಹೆಚ್ಚಿಸಿದರೆ ಇದು ತಿಂಗಳಿಗೆ 5,700 ರೂ. ಆಗುತ್ತದೆ. ಅಂದರೆ 6,00 ರೂ. ಹೆಚ್ಚಳವಾದಂತೆ. ಅಂದರೆ, ತಿಂಗಳಿಗೆ 50,000 ರೂ. ವೇತನ ಪಡೆಯುವ ನೌಕರನ ಮೂಲ ವೇತನ 15,000 ರೂ. ಇದ್ದರೆ ತುಟ್ಟಿ ಭತ್ಯೆ ಹೆಚ್ಚಳದೊಂದಿಗೆ ಆತನ ವೇತನದಲ್ಲಿ 6,00 ರೂ. ಹೆಚ್ಚಾಗಲಿದೆ.
ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ; ಬಾಕಿ ಇರುವ ತುಟ್ಟಿಭತ್ಯೆ 3 ಕಂತಿನಲ್ಲಿ ನೀಡುವ ನಿರೀಕ್ಷೆ
ಜೂನ್ ತಿಂಗಳಿಗೆ ಕೊನೆಗೊಂಡಂತೆ ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ 12 ತಿಂಗಳುಗಳ ಸರಾಸರಿ ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಂಡು ಡಿಎ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಾಮಾನ್ಯವಾಗಿ ಜುಲೈ 1 ಅಥವಾ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಮಾರ್ಚ್ ಅಥವಾ ಸೆಪ್ಟೆಂಬರ್ನಲ್ಲಿ ಡಿಎ ಹೆಚ್ಚಳ ನಿರ್ಧಾರ ಪ್ರಕಟಿಸಲಾಗುತ್ತದೆ.
ಶೇಕಡಾ 31ರಷ್ಟಿದ್ದ ತುಟ್ಟಿಭತ್ಯೆಯನ್ನು ಕೇಂದ್ರ ಸರ್ಕಾರ ಕಳೆದ ಮಾರ್ಚ್ನಲ್ಲಿ ಶೇಕಡಾ 34ಕ್ಕೆ ಹೆಚ್ಚಿಸಿತ್ತು. ಸೆಪ್ಟೆಂಬರ್ನಲ್ಲಿ ಶೇಕಡಾ 4ರಷ್ಟು ಹೆಚ್ಚಿಸಿ ಶೇಕಡಾ 38ಕ್ಕೆ ನಿಗದಿಪಡಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ