ಭಾರತದ ಗೇಮಿಂಗ್ ಕಂಪನಿ ನಜಾರ ಟೆಕ್ನಾಲಜೀಸ್ಗೆ ನಿಖಿಲ್ ಕಾಮತ್ ಮತ್ತು ನಿತಿನ್ ಕಾಮತ್ ಒಡೆತನ ಕಂಪನಿಗಳಿಂದ 100 ಕೋಟಿ ರೂ ಹೂಡಿಕೆ ಆಗಿದೆ. ಕಾಮತ್ ಸಹೋದರರ ಒಡೆತನದ ಕಾಮತ್ ಅಸೋಸಿಯೇಟ್ಸ್ (Kamath Associates) ಮತ್ತು ಎನ್ಕೆಸ್ಕ್ವಯರ್ಡ್ (NKSquared) ಕಂಪನಿಗಳಿಗೆ 100 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಿರುವುದಾಗಿ ಸೆಬಿಗೆ ಸಲ್ಲಿಸಿದ ಫೈಲಿಂಗ್ನಲ್ಲಿ ನಜಾರ ಟೆಕ್ನಾಲಜೀಸ್ ತಿಳಿಸಿದೆ. ಅದು ನೀಡಿದ ಮಾಹಿತಿ ಪ್ರಕಾರ, ನಜಾರ ಟೆಕ್ನಾಲಜೀಸ್ ಕಂಪನಿಯ 14,00,560 ಷೇರುಗಳನ್ನು 714 ರೂನಂತೆ 99,99,99,840 ರುಪಾಯಿಗೆ ನೀಡಲು ಕಂಪನಿಯ ಮಂಡಳಿ ಅನುಮೋದನೆ ನೀಡಿದೆ.
ಈ 100 ಕೋಟಿ ರೂ ಹೂಡಿಕೆಯೊಂದಿಗೆ ನಜಾರ ಟೆಕ್ನಾಲಜೀಸ್ನಲ್ಲಿ ನಿಖಿಲ್ ಕಾಮತ್ ಅವರ ವೈಯಕ್ತಿ ಹೂಡಿಕೆ ಪ್ರಮಾಣ ಶೇ. 1ರಿಂದ ಶೇ. 3.50ಗೆ ಹೆಚ್ಚಾಗಿದೆ. ಝೀರೋಧ ಕಂಪನಿಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರು ಮುಂದಿನ ದಿನಗಳಲ್ಲಿ ನಜಾರ ಟೆಕ್ನಾಲಜೀಸ್ ಮೇಲಿನ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಖಿಲ್ ಕಾಮತ್ ಅವರಿಗೆ ನೀಡಲಾಗಿರುವ ನಜಾರ ಟೆಕ್ನಾಲಜೀಸ್ನ ಷೇರುಗಳಿಗೆ ಆರು ತಿಂಗಳ ಲಾಕ್ ಇನ್ ಪೀರಿಯಡ್ ಇರುತ್ತದೆ. ಅಂದರೆ, ಈ ಷೇರುಗಳನ್ನು 6 ತಿಂಗಳ ಕಾಲ ಮಾರಾಟ ಮಾಡುವಂತಿರುವುದಿಲ್ಲ.
ಇದನ್ನೂ ಓದಿ: ಫುಯೆಲ್ ಕ್ರೆಡಿಟ್ ಕಾರ್ಡ್ನಿಂದ ಏನು ಪ್ರಯೋಜನ? ಸೂಕ್ತ ಎನಿಸುವ ಕಾರ್ಡ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?
ಭಾರತದ ಪ್ರಬಲ ಮೊಬೈಲ್ ಕಂಪನಿಗಳಲ್ಲಿ ಒಂದಾದ ನಜಾರ ಟೆಕ್ನಾಲಜೀಸ್ ಹಲವು ಗೇಮ್ಗಳನ್ನು ಬಿಡುಗಡೆ ಮಾಡಿದೆ. ಮಕ್ಕಳಿಗಾಗಿ ಖ್ಯಾತ ಕಾರ್ಟೂನ್ ಸೀರಿಯಲ್ಗಳ ಹೆಸರಿನಲ್ಲಿ ವಿವಿಧ ರೇಸಿಂಗ್, ಅಡ್ವೆಂಚರ್ ಗೇಮ್ಗಳನ್ನು ತಯಾರಿಸಿದೆ. ವಿವಿಧ ಕ್ರಿಕೆಟ್, ಕೇರಂ, ಟೇಬಲ್ ಟೆನಿಸ್ ಇತ್ಯಾದಿ ಕ್ರೀಡೆಗಳ ಆಧರಿತ ಮೊಬೈಲ್ ಗೇಮ್ಗಳನ್ನು ನಜಾರ ಟೆಕ್ನಾಲಜೀಸ್ ತಯಾರಿಸಿದೆ.
ನಿಖಿಲ್ ಕಾಮತ್ ಪ್ರಕಾರ ವಿಶ್ವಾದ್ಯಂತದಂತೆ ಭಾರತದಲ್ಲೂ ಗೇಮಿಂಗ್ ಕ್ಷೇತ್ರ ಅಮೋಘವಾಗಿ ಬೆಳೆಯುತ್ತದೆ. ನಜಾರ ಟೆಕ್ನಾಲಜೀಸ್ ಇ-ಸ್ಪೋರ್ಟ್ಸ್ ಮತ್ತು ಗೇಮಿಂಗ್ನಲ್ಲಿ ವಿನೂತನ ಎನಿಸುವ ಗೇಮ್ಗಳನ್ನು ರೂಪಿಸಿದ್ದು, ಮುಂದೊಂದು ದಿನ ಬೇರೆ ಅಂತಾರಾಷ್ಟ್ರೀಯ ಗೇಮಿಂಗ್ ಕಂಪನಿಗಳ ಜೊತೆ ಅದು ಸ್ಪರ್ಧೆ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ನಿಖಿಲ್ ಕಾಮತ್ ಹೇಳುತ್ತಾರೆ.
ಇದನ್ನೂ ಓದಿ: ಸಿನಿಮೀಯ ಘಟನೆ; ಉದ್ಯೋಗಿಯಾಗಿ ಸೇರಿಕೊಂಡು ಪ್ರಾಜೆಕ್ಟ್ ಲಪಟಾಯಿಸುತ್ತಿದ್ದ ಬೆಂಗಳೂರಿನ ಬಿಸಿನೆಸ್ಮ್ಯಾನ್
2020-21ರ ಹಣಕಾಸು ವರ್ಷದಲ್ಲಿ ಭಾರತದ ಆನ್ಲೈನ್ ಗೇಮಿಂಗ್ ಉದ್ಯಮದ ಆದಾಯ 2 ಬಿಲಿಯನ್ ಡಾಲರ್ ಇತ್ತು. 2021-22ರಲ್ಲಿ ಅದು 2.6 ಬಿಲಿಯನ್ ಡಾಲರ್ಗೆ ಏರಿತು. ತದನಂತರದಿಂದ ಈ ಉದ್ಯಮ ವಾರ್ಷಿಕವಾಗಿ ಶೇ. 27ರ ದರದಲ್ಲಿ ಬೆಳೆಯುತ್ತಾ ಹೋಗಬಹುದು. 2026-27ರಲ್ಲಿ ಭಾರತದಲ್ಲಿ ಗೇಮಿಂಗ್ ಉದ್ಯಮ 8.6 ಬಿಲಿಯನ್ ಡಾಲರ್ ಮಟ್ಟಕ್ಕೆ ಹೋಗಬಹುದು ಎಂದು ಅಂದಾಜಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Mon, 4 September 23