35 ವರ್ಷಕ್ಕೆ ರಿಟೈರ್ ಆಗಬೇಕು; 41 ಕೋಟಿ ರೂ ಸಂಪಾದಿಸಬೇಕು; 22 ವರ್ಷದ ಗೂಗಲ್ ಉದ್ಯೋಗಿಯ ಟಾರ್ಗೆಟ್ ಇದು
Early Retirement Plan: ಗೂಗಲ್ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ 22 ವರ್ಷದ ಇಥಾನ್ ಎನ್ಗುವೋನ್ಲಿ ಎಂಬಾತ 35 ವರ್ಷ ವಯಸ್ಸಿಗೆ ಸಾಕಷ್ಟು ಹಣ ಸಂಪಾದಿಸಿ ನಿವೃತ್ತಿಯಾಗುವ ಗುರಿ ಹೊಂದಿದ್ದಾನೆ. ದುಡಿಮೆಯಲ್ಲಿ ಹಣ ಉಳಿಸಿ ಅದರ ಮೂಲಕ ಹೂಡಿಕೆಯ ಅಸ್ತ್ರ ಪ್ರಯೋಗಿಸಿ ಈತ ರಿಯಲ್ ಎಸ್ಟೇಟ್ ಇತ್ಯಾದಿ ಕಡೆ ಹಣ ಹಾಕಿ ಬೆಳೆಸುತ್ತಿದ್ದಾನೆ.
ಸಾಧ್ಯವಾದಷ್ಟೂ ವೇಗದಲ್ಲಿ ಹಣ ಸಂಪಾದಿಸಿ, ಕೆಲಸಗಳಿಂದ ಬೇಗ ನಿವೃತ್ತಿ ಪಡೆದು ವಿಶ್ರಾಂತ ಜೀವನ ನಡೆಸುವುದೋ ಅಥವಾ ತಮ್ಮ ಇಚ್ಛೆಯ ಹವ್ಯಾಸಗಳತ್ತ ಗಮನ ಕೊಡುವುದೋ ಕನಸು ಪ್ರತಿಯೊಬ್ಬರಿಗೂ ಇರುತ್ತದೆ. ಇಂಥ ಕನಸುಗಾರರಲ್ಲಿ 22 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ಇಥಾನ್ ಎನ್ಗುವೋನ್ಲಿ (Ethan Nguonly) ಒಬ್ಬರು. ಗೂಗಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿರುವ ಈತ ಕನಸು ಕಾಣುತ್ತಿರುವುದಷ್ಟೇ ಅಲ್ಲ, ಆ ಕನಸು ನನಸು ಆಗಲು ಎಲ್ಲಾ ಪ್ರಯತ್ನ ಮಾಡುತ್ತಿದ್ದಾನೆ. ತಾನು 35 ವರ್ಷ ವಯಸ್ಸಿನ ಗಡಿ ಮುಟ್ಟಿದ ಬಳಿಕ ನಿವೃತ್ತನಾಗಬೇಕು. ಅಷ್ಟರಲ್ಲಿ 5 ಮಿಲಿಯನ್ ಡಾಲರ್ (ಸುಮಾರು 41 ಕೋಟಿ ರೂ) ಮೌಲ್ಯದ ಆಸ್ತಿ ಸಂಪಾದನೆ ಮಾಡಿರಬೇಕು ಎಂಬುದು ಇಥಾನ್ನ ಗುರಿ. ಅಂದರೆ ಈತನಿಗೆ ತನ್ನ ಗುರಿ ಈಡೇರಲು ಇನ್ನೂ 13 ವರ್ಷ ಕಾಲಾವಕಾಶ ಇದೆ. ಇದು ಹೇಗೆ ಸಾಧ್ಯವಾಗುತ್ತದೆ ಎಂಬುದು ಪ್ರಶ್ನೆ.
ಇಥಾನ್ನ ಗುರಿ ಈಡೇರಿಕೆಯ ಪ್ಲಾನ್ ನೋಡಿ…
ಅಮೆರಿಕದ ಇಥಾನ್ ಎನ್ಗುಯೋನ್ಲಿಗೆ ಗೂಗಲ್ ಸೇರಿದ ಮೇಲೆ ಅರ್ಲಿ ರಿಟೈರ್ಮೆಂಟ್ ಐಡಿಯಾ ಹೊಳೆದದ್ದಲ್ಲ. ತನ್ನ ತಂದೆ ತಾಯಿ ಮೂಲಕ ಹಣದ ಮಹತ್ವದ ಬಗ್ಗೆ ತಿಳಿದುಕೊಂಡಿದ್ದ ಈತ ಗೂಗಲ್ ಸೇರುವ ಮುನ್ನವೇ ಹೂಡಿಕೆ ಇತ್ಯಾದಿ ಬಗ್ಗೆ ಸಾಕಷ್ಟು ಅನುಭವ ಹೊಂದಿದ್ದವ. ಸೇವಿಂಗ್ಸ್ ಅಕೌಂಟ್ನಲ್ಲಿ ಹಣ ಇರಿಸಿದರೆ ಏನೂ ಪ್ರಯೋಜನ ಇಲ್ಲ. ಆ ಹಣವನ್ನು ಹೂಡಿಕೆ ಮಾಡಿ ಬೆಳೆಸಬೇಕು ಎನ್ನುವ ಪಾಠ ಕಲಿತ ಈತ ಹಲವು ಹೂಡಿಕೆ ಮತ್ತು ನಿವೃತ್ತಿ ಯೋಜನೆಗಳಲ್ಲಿ ಹಣ ತೊಡಗಿಸಿಕೊಂಡಿದ್ದಾನೆ. ರಿಯಲ್ ಎಸ್ಟೇಟ್ನಲ್ಲಿ ಹಣ ಹಾಕಿದ್ದಾನೆ.
ಇದನ್ನೂ ಓದಿ: ಒಂದೆಡೆ ಸಾಲ ಇದೆ, ಈಕ್ವಿಟಿ ಮೇಲೆ ಎಸ್ಐಪಿ ಇದೆ; ಇನ್ನೊಂದೆಡೆ ಪಿಎಫ್ ಹಣ ಇದೆ; ಮುಂದೇನು ಮಾಡಬಹುದು?
ಅಮೆರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಲ್ಲಿ ಎರಡೇ ವರ್ಷದಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು, ಬಳಿಕ ಕೆಲಸಕ್ಕೆ ಸೇರಿ, ಸಾಲ ಪಡೆದು ಉನ್ನತ ವ್ಯಾಸಂಗ ಓದಿದ್ದಾನೆ. ಡಾಟಾ ಸೈನ್ಸ್ನಲ್ಲಿ ಸ್ನಾತಕೋತ್ತರ ಪದವಿ ಮಾಡಿ ತಾನು ಅಂದುಕೊಂಡಂತೆ ಗೂಗಲ್ನಲ್ಲಿ ಕೆಲಸ ಕೂಡ ಗಿಟ್ಟಿಸಿದ್ದಾನೆ.
ಇಥಾನ್ಗೆ 2021ರ ಡಿಸೆಂಬರ್ನಲ್ಲಿ ಗೂಗಲ್ನಲ್ಲಿ ಕೆಲಸ ಸಿಕ್ಕಿತು. ಈಗ ಈತನ ಒಂದು ವರ್ಷದ ಸಂಬಳ, ಭತ್ಯೆ ಎಲ್ಲವೂ ಸೇರಿ ಒಟ್ಟು 1,94,000 ಡಾಲರ್ (1.60 ಕೋಟಿ ರೂ) ಸಂಪಾದನೆ ಇದೆ. ಹಣಕಾಸು ಶಿಸ್ತುಬದ್ಧತೆ ಮೂಲಕ ಒಂದು ವರ್ಷದಲ್ಲಿ ಈತ 60,000 ಡಾಲರ್ ಹಣವನ್ನು ಉಳಿಸುತ್ತಾನೆ. ಈ ಉಳಿತಾಯ ಹಣದಲ್ಲಿ ಪ್ಲೋರಿಡಾ, ಕ್ಯಾಲಿಫೋರ್ನಿಯಾ ಮೊದಲಾದ ಕಡೆ ಆಸ್ತಿ ಖರೀದಿಸಿದ್ದಾನೆ. ವಿವಿಧ ಹೂಡಿಕೆ ಮತ್ತು ನಿವೃತ್ತಿ ಯೋಜನೆಗಳಲ್ಲಿ ಹಣತೊಡಗಿಸಿಕೊಂಡಿದ್ದಾನೆ.
ಈತ ತನ್ನ ಕೈಗೆ ಬರುವ ಸಂಬಳದಲ್ಲಿ ಶೇ. 35ರಷ್ಟು ಹಣವನ್ನು ಹೂಡಿಕೆಗೆ ವಿನಿಯೋಗಿಸುತ್ತಾನಂತೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸಾಕಷ್ಟು ಪಳಗಿಹೋಗಿರುವ ಈತ ಬಹಳಷ್ಟು ಆಸ್ತಿಗಳನ್ನು ಖರೀದಿಸಿದ್ದಾನೆ.
ಇದನ್ನೂ ಓದಿ: ನಿಮಗೆ ಸಂಪಾದನೆ ಎಷ್ಟೇ ಇರಲಿ, ಹಣ ನಿರ್ವಹಣೆಗೆ ನೆನಪಿರಲಿ 3 ಬಕೆಟ್ ಫಾರ್ಮುಲಾ
ಈತನ ಪ್ರಕಾರ, ಹೂಡಿಕೆ ಪ್ರಯಾಣ ಇದು ಆರಂಭಿಕ ಹಂತವಾಗಿದ್ದು, ತನ್ನ ವಯಸ್ಸು 35 ವರ್ಷ ಆಗುತ್ತಲೇ 5 ಮಿಲಿಯನ್ ಡಾಲರ್ ಮೊತ್ತದ ಆಸ್ತಿ ತನ್ನದಾಗಬೇಕೆಂಬುದು ಗುರಿ. ಹಣಕಾಸು ಶಿಸ್ತು, ಉಳಿತಾಯ, ಹೂಡಿಕೆಗಳಿಂದ ಈತನ ಗುರಿ ಈಡೇರಿಕೆ ಅಸಾಧ್ಯವೇನಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ