ಮೂರೇ ವರ್ಷದಲ್ಲಿ 1 ಲಕ್ಷಕ್ಕೆ 12 ಲಕ್ಷ ಲಾಭ; ಇದು ಬಿಸಿಎಲ್ ಇಂಡಸ್ಟ್ರೀಸ್ ಷೇರು ಚಮತ್ಕಾರ
Mulibagger Stock: ಬಿಸಿಎಲ್ ಇಂಡಸ್ಟ್ರೀಸ್ ಸಂಸ್ಥೆ ಕಳೆದ 3 ವರ್ಷದಲ್ಲಿ 12 ಪಟ್ಟು ಹೆಚ್ಚು ರಿಟರ್ನ್ ಕೊಟ್ಟಿದೆ. 40 ರೂ ಇದ್ದ ಅದರ ಷೇರುಬೆಲೆ ಇವತ್ತು 492 ರೂ ದಾಟಿದೆ. 3 ವರ್ಷದ ಹಿಂದೆ ಈ ಷೇರಿನ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರಿಗೆ 12,50,000 ರೂಗೆ ಏರಿರುತ್ತಿತ್ತು. ಅಷ್ಟು ವೇಗದಲ್ಲಿ ಬಿಸಿಎಲ್ ಇಂಡಸ್ಟ್ರೀಸ್ ಷೇರುಬೆಲೆ ಬೆಳೆದಿದೆ.
ಪಂಜಾಬ್ ಮೂಲದ ಬಿಸಿಎಲ್ ಇಂಡಸ್ಟ್ರೀಸ್ನ ಷೇರುಗಳು (BCL Industries) ಕಳೆದ 3 ವರ್ಷದಲ್ಲಿ ಮಲ್ಟಿಬ್ಯಾಗರ್ ಸ್ಟಾಕ್ ಆಗಿ ಪರಿಣಮಿಸಿ ಹೂಡಿಕೆದಾರರಿಗೆ ಭರ್ಜರಿ ಲಾಭ ತರುತ್ತಿದೆ. ರಾಸಾಯನಿಕ, ಎಫ್ಎಂಸಿಜಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವ್ಯವಹಾರ ಹೊಂದಿರುವ ಬಿಸಿಎಲ್ ಇಂಡಸ್ಟ್ರೀಸ್ ಷೇರುಬೆಲೆ 3 ವರ್ಷದಲ್ಲಿ ಶೇ. 1,100ರಷ್ಟು, ಅಂದರೆ 12 ಪಟ್ಟು ಹೆಚ್ಚು ಬೆಳೆದಿದೆ. ಕೋವಿಡ್ ಸಂದರ್ಭದಲ್ಲಿ 40 ರೂನಷ್ಟು ಇದ್ದ ಇದರ ಬೆಲೆ ಈಗ 492 ರೂ ದಾಟಿದೆ. ಎರಡು ತಿಂಗಳ ಹಿಂದೆ (ಜುಲೈ) ಇದು 534 ರೂಗಳ ತನ್ನ ಗರಿಷ್ಠ ಮಟ್ಟಕ್ಕೆ ಏರಿತ್ತು. ಕುತೂಹಲ ಎಂದರೆ ಷೇರು ಬ್ರೋಕರೇಜ್ ಕಂಪನಿಯೊಂದು ಬಿಸಿಎಲ್ ಇಂಡಸ್ಟ್ರೀಸ್ಗೆ ಇನ್ನೂ ಹೆಚ್ಚಿನ ಮಟ್ಟದ ಪ್ರೈಸ್ ಟಾರ್ಗೆಟ್ ಇಟ್ಟಿದೆ. ಇವತ್ತೂ ಕೂಡ ಈ ಷೇರಿನ ಮೇಲೆ ಹೂಡಿಕೆ ಮಾಡಿದರೆ ಕೆಲವೇ ವರ್ಷಗಳಲ್ಲಿ ಹಣ ಡಬಲ್ ಮಾಡಿಕೊಳ್ಳುವ ಅವಕಾಶ ಇರುತ್ತದೆ.
3 ವರ್ಷದ ಹಿಂದೆ ಹೂಡಿಕೆ ಮಾಡಿದವರಿಗೆ ಎಷ್ಟು ಲಾಭ ಸಿಗುತ್ತಿತ್ತು?
ಮೂರು ವರ್ಷದ ಹಿಂದೆ ಬಿಸಿಎಲ್ ಇಂಡಸ್ಟ್ರೀಸ್ ಷೇರುಬೆಲೆ 40 ರೂ ಇತ್ತು. ಈಗ ಅದರ ಬೆಲೆ 492 ರೂ ಮುಟ್ಟಿದೆ. ಬೆಲೆ 40 ರೂ ಇದ್ದಾಗ ಯಾರಾದರೂ ಈ ಸ್ಟಾಕ್ ಮೇಲೆ 1 ಲಕ್ಷ ರೂನಷ್ಟು ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರುಮೊತ್ತ 12.30 ಲಕ್ಷ ರೂ ಆಗುತ್ತಿತ್ತು. ಇದು ನಿಜಕ್ಕೂ ಗಣನೀಯ ಲಾಭವೇ ಹೌದು.
ಇದನ್ನೂ ಓದಿ: ನಜಾರ ಟೆಕ್ನಾಲಜೀಸ್ ಮೇಲೆ ನಿಖಿಲ್ ಕಾಮತ್ 100 ಕೋಟಿ ರೂ ಹೂಡಿಕೆ; ಗೇಮಿಂಗ್ ಕಂಪನಿ ಬಗ್ಗೆ ಕಾಮತ್ಗೆ ಯಾಕೆ ಒಲವು?
925 ರೂವರೆಗೂ ಹೋಗುತ್ತಾ ಬಿಸಿಎಲ್ ಇಂಡಸ್ಟ್ರಿಸ್ ಷೇರುಬೆಲೆ?
ಇನ್ಕ್ರೆಡ್ ಈಕ್ವಿಟೀಸ್ ಎಂಬ ಬ್ರೋಕರೇಜ್ ಸಂಸ್ಥೆ ಬಿಸಿಎಲ್ ಇಂಡಸ್ಟ್ರೀಸ್ ಷೇರಿನ ಬೆಳವಣಿಗೆ ಬಗ್ಗೆ ವಿಶ್ವಾಸ ಹೊಂದಿದೆ. ಇದರ ಷೇರು ಇನ್ನೂ ಶೇ. 85ರಷ್ಟು ಏರಬಹುದು ಎಂದು ಅದು ನಿರೀಕ್ಷಿಸಿದೆ. ಅದರ ಷೇರಿಗೆ ಲಾಂಗ್ ಟರ್ಮ್ ಟಾರ್ಗೆಟ್ ಆಗಿ 925 ರೂ ಎಂದು ನಿಗದಿ ಮಾಡಿದೆ.
ಬಿಸಿಎಲ್ ಇಂಡಸ್ಟ್ರೀಸ್ನ ಭವಿಷ್ಯ ಉತ್ತಮ ಎನ್ನುವುದಕ್ಕೆ ಕಾರಣಗಳಿವು
- ಪಂಜಾಬ್ನ ಲೂಧಿಯಾನದಲ್ಲಿ ಮುಖ್ಯ ಕಚೇರಿ ಹೊಂದಿರುವ ಬಿಸಿಎಲ್ ಇಂಡಸ್ಟ್ರೀಸ್ ಸಂಸ್ಥೆಯ ಹೊಸ ಘಟಕವೊಂದು ಪಶ್ಚಿಮ ಬಂಗಾಳದಲ್ಲಿ ಶುರುವಾಗಿದ್ದು, ಉತ್ಪಾದನಾ ಕಾರ್ಯ ನಡೆಯುತ್ತಿದೆ.
- ಪಂಜಾಬ್ನಲ್ಲಿ ಬೃಹತ್ ಎಥನಾಲ್ ತಯಾರಕಾ ಘಟಕ ಸದ್ಯದಲ್ಲೇ ಶುರುವಾಗಲಿದೆ
- ಇಎನ್ಎ (ಎಕ್ಸ್ಟ್ರಾ ನ್ಯೂಟ್ರಲ್ ಆಲ್ಕೋಹಾಲ್) ಉತ್ಪಾದನೆಯಲ್ಲಿ ತೊಡಗಿರುವುದು.
ಇದನ್ನೂ ಓದಿ: ಫುಯೆಲ್ ಕ್ರೆಡಿಟ್ ಕಾರ್ಡ್ನಿಂದ ಏನು ಪ್ರಯೋಜನ? ಸೂಕ್ತ ಎನಿಸುವ ಕಾರ್ಡ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೇಗೆ?
2022ರ ಫೆಬ್ರುವರಿಯಲ್ಲಿ ಬಿಸಿಎಲ್ ಇಂಡಸ್ಟ್ರೀಸ್ ಷೇರುಬೆಲೆ 484 ರೂ ದಾಟಿ ಮೇಲೆ ಹೋಗಿತ್ತು. ಅದಾದ ಬಳಿಕ ಹಲವು ಏರಿಳಿತಗಳನ್ನು ಕಂಡು ಈಗ 492 ರೂಗೆ ಬಂದಿದೆ. ಒಂದು ವರ್ಷದಲ್ಲಿ ಬಹುತೇಕ ಅಷ್ಟೇ ಬೆಲೆ ಇದೆ. ಇದಕ್ಕೆ ಕಾರಣ, ಎಥನಾಲ್ ಬೆಲೆ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಳವಾಗದೇ ಇದ್ದದ್ದು. ಎಥನಾಲ್ ತಯಾರಿಕೆಯಲ್ಲಿ ತೊಡಗಿದ ಕಂಪನಿಗಳೆಲ್ಲವೂ ಹಿನ್ನಡೆ ಕಂಡಿದ್ದವು. ಆದರೆ, ಈಗ ಬಿಸಿಎಲ್ ಇಂಡಸ್ಟ್ರೀಸ್ ಮುನ್ನೋಟ ಉತ್ತಮವಾಗಿ ಕಾಣುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ