15 ವರ್ಷ ಪೂರೈಸಿದ ಎಲ್ಲ ಸರ್ಕಾರಿ ವಾಹನಗಳು ಇನ್ನು ಗುಜರಿಗೆ; ರಾಜ್ಯಗಳಿಗೆ ಕೇಂದ್ರ ಸೂಚನೆ

| Updated By: Ganapathi Sharma

Updated on: Nov 25, 2022 | 5:26 PM

15 ವರ್ಷ ಪೂರೈಸಿದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ನೀತಿಗೆ ನಿನ್ನೆ ನಾನು ಸಹಿ ಮಾಡಿದೆ. ರಾಜ್ಯ ಮಟ್ಟದಲ್ಲಿ ಈ ನೀತಿಯ ಅನುಷ್ಠಾನಗೊಳಿಸಬೇಕಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಶುಕ್ರವಾರ ತಿಳಿಸಿದ್ದಾರೆ.

15 ವರ್ಷ ಪೂರೈಸಿದ ಎಲ್ಲ ಸರ್ಕಾರಿ ವಾಹನಗಳು ಇನ್ನು ಗುಜರಿಗೆ; ರಾಜ್ಯಗಳಿಗೆ ಕೇಂದ್ರ ಸೂಚನೆ
ನಿತಿನ್ ಗಡ್ಕರಿ
Follow us on

ನಾಗ್ಪುರ: ಇನ್ನು ಮುಂದೆ 15 ವರ್ಷ ಪೂರೈಸಿದ ಎಲ್ಲ ಸರ್ಕಾರಿ ವಾಹನಗಳು ಗುಜರಿ ಸೇರಲಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಶುಕ್ರವಾರ ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದ ನೀತಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮಾರ್ಗದರ್ಶನದಂತೆ ಸಹಿ ಮಾಡಿದ್ದು, ಎಲ್ಲ ರಾಜ್ಯ ಸರ್ಕಾರಗಳಿಗೆ ಹೊಸ ನೀತಿಯ ಕುರಿತ ಸಂದೇಶ ಕಳುಹಿಸಿಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ನಾಗ್ಪುರದಲ್ಲಿ ನಡೆಯುತ್ತಿರುವ ‘ಆಗ್ರೊ-ವಿಷನ್’ ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘15 ವರ್ಷ ಪೂರೈಸಿದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ನೀತಿಗೆ ನಿನ್ನೆ ನಾನು ಸಹಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಈ ನೀತಿಯ ಪ್ರತಿಯನ್ನು ಎಲ್ಲ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ. ರಾಜ್ಯ ಮಟ್ಟದಲ್ಲಿ ಈ ನೀತಿಯ ಅನುಷ್ಠಾನಗೊಳಿಸಬೇಕಿದೆ’ ಎಂದು ಗಡ್ಕರಿ ತಿಳಿಸಿದ್ದಾರೆ.

ಪಾಣಿಪತ್​ನಲ್ಲಿ ಎಥೆನಾಲ್ ಉತ್ಪಾದನೆ

ಪಾಣಿಪತ್​ನಲ್ಲಿ ಇಂಡಿಯನ್ ಆಯಿಲ್​ನ ಎರಡು ಘಟಕಗಳನ್ನು ತೆರೆಯಲಾಗಿದ್ದು, ಈ ಪೈಕಿ ಒಂದು ಘಟಕ ಪ್ರತಿ ದಿನ ಒಂದು ಲಕ್ಷ ಲೀಟರ್ ಎಥೆನಾಲ್ ಉತ್ಪಾದಿಸಲಿದೆ. ಮತ್ತೊಂದು ಘಟಕವು 150 ಟನ್ ಜೈವಿಕ ಡಾಂಬರು ಉತ್ಪಾದಿಸಲಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ. ಇದು ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶಗಳಲ್ಲಿ ದೊಡ್ಡ ಬದಲಾವಣೆಯಾಗಿದೆ. ಭತ್ತ ಬೆಳೆಯುವ ಈ ಪ್ರದೇಶಗಳಲ್ಲಿ ಭತ್ತದ ಹುಲ್ಲು ಸುಡುವಿಕೆಯಿಂದ ಮಾಲಿನ್ಯ ಉಂಟಾಗುತ್ತಿತ್ತು. ಇನ್ನು ಭತ್ತದ ಹುಲ್ಲಿನಿಂದ ಎಥೆನಾಲ್ ಹಾಗೂ ಜೈವಿಕ ಡಾಂಬರು ಉತ್ಪಾದನೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ನಮಗೆ 80 ಲಕ್ಷ ಟನ್ ಜೈವಿಕ ಡಾಂಬರು ಬೇಕಾಗಿದೆ. ಈ ಪೈಕಿ ಹೆಚ್ಚಿನದ್ದು ರಸ್ತೆ ಇಲಾಖೆಗೆ ಬೇಕಾಗಿದೆ. 50 ಲಕ್ಷ ಟನ್ ದೇಶದಲ್ಲೇ ಉತ್ಪಾದನೆಯಾಗುತ್ತಿದ್ದು, 25 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇಂಥ ಯೋಜನೆಗಳು ಆರಂಭವಾಗುತ್ತಿರುವುದು ಸಂತಸದ ವಿಚಾರ. ಇನ್ನು ಕೆಲವು ಸಮಯದ ಬಳಿಕ ದೇಶವು ಡಾಂಬರು ಆಮದು ನಿಲ್ಲಿಸಬಹುದು. ನಮಗೆ ಬೇಕಾದಷ್ಟು ಡಾಂಬರು ದೇಶದಲ್ಲೇ ಉತ್ಪಾದನೆಯಾಗಲಿದೆ. ನಮ್ಮ ರೈತರಿಂದ ದೊರೆಯುವ ಭತ್ತದ ಹುಲ್ಲಿನಿಂದಲೇ ನಮ್ಮ ಗ್ರಾಮಗಳು, ಜಿಲ್ಲೆಗಳು ಹಾಗೂ ರಾಜ್ಯಗಳ ರಸ್ತೆಗೆ ಡಾಂಬರು ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

ಇಂಡಿಯನ್ ಆಯಿಲ್​ ಅಸ್ಸಾಂನಲ್ಲಿ ಬಯೊಎಥೆನಾಲ್ ಉತ್ಪಾದನಾ ಘಟಕ ಆರಂಭಿಸಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ