Big News: ವೇದಿಕೆಯಲ್ಲೇ ಅನಾರೋಗ್ಯಕ್ಕೆ ಒಳಗಾದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಅರ್ಧಕ್ಕೇ ನಿಂತ ಕಾರ್ಯಕ್ರಮ
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿದೆ. ವೈದ್ಯರ ಸಲಹೆಯಂತೆ ಸಲೈನ್ ಆರಂಭಿಸಲಾಗಿದೆ.
ಕೊಲ್ಕತ್ತಾ: ಉತ್ತರ ಬಂಗಾಳ ಪ್ರವಾಸದಲ್ಲಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಇಂದು ಸಿಲಿಗುರಿಯಲ್ಲಿ 1,206 ಕೋಟಿ ರೂ. ಮೌಲ್ಯದ 3 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ವೇಳೆ ವೇದಿಕೆಯಲ್ಲೇ ತೀವ್ರ ಅಸ್ವಸ್ಥರಾದ ಸಚಿವ ನಿತಿನ್ ಗಡ್ಕರಿ ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತು. ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಚಿಕಿತ್ಸೆ ಕೊಡಿಸಲು ಗ್ರೀನ್ ಕಾರಿಡಾರ್ ಮೂಲಕ ತಕ್ಷಣ ವೈದ್ಯರನ್ನು ಕರೆತರಲಾಯಿತು. ಇದೀಗ ಅವರು ಚೇತರಿಸಿಕೊಂಡಿದ್ದಾರೆ.
ಇಂದು ನಿತಿನ್ ಗಡ್ಕರಿ ಉತ್ತರ ಬಂಗಾಳದ ಸಿಲಿಗುರಿಯ ಶಿವ ಮಂದಿರದಿಂದ ಸೇವಕ್ ಕಂಟೋನ್ಮೆಂಟ್ ವರೆಗಿನ ಉದ್ದದ ರಸ್ತೆಯ ಶಂಕುಸ್ಥಾಪನೆ ನೆರವೇರಿಸಿದ್ದರು. ಡಾರ್ಜಿಲಿಂಗ್ ಜಂಕ್ಷನ್ ಬಳಿಯ ದಗಾಪುರ್ ಮೈದಾನದಲ್ಲಿ ಕಾರ್ಯಕ್ರಮ ನಡೆದಿತ್ತು. ಆ ವೇಳೆ ವೇದಿಕೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಸ್ವಸ್ಥರಾಗಿದ್ದರಿಂದ ಕಾರ್ಯಕ್ರಮವನ್ನು ಅರ್ಧಕ್ಕೇ ನಿಲ್ಲಿಸಲಾಯಿತು. ತಕ್ಷಣ ಅವರನ್ನು ಗ್ರೀನ್ ರೂಂಗೆ ಕರೆದುಕೊಂಡು ಹೋದ ಸಿಬ್ಬಂದಿ ತುರ್ತು ಚಿಕಿತ್ಸೆ ಕೊಡಿಸಿದರು. ಅಲ್ಲಿ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದರಿಂದ ತಕ್ಷಣ ವೈದ್ಯರನ್ನು ಕರೆಸಲಾಯಿತು.
ಇದನ್ನೂ ಓದಿ: Nitin Gadkari: ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದೇನು?
ಬಿಜೆಪಿ ಪಕ್ಷದ ಮೂಲಗಳ ಪ್ರಕಾರ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿದೆ. ವೈದ್ಯರ ಸಲಹೆಯಂತೆ ಸಲೈನ್ ಆರಂಭಿಸಲಾಗಿದೆ. ಗ್ರೀನ್ ರೂಂನಲ್ಲಿ ಸಚಿವರು ಪ್ರಥಮ ಚಿಕಿತ್ಸೆ ಪಡೆದರು. ಅದರ ನಂತರ ಹಸಿರು ಕಾರಿಡಾರ್ ಮೂಲಕ ಅವರನ್ನು ನೋಡಲು ಸಿಲಿಗುರಿಯ ವೈದ್ಯರನ್ನು ಕರೆಸಲಾಯಿತು. ಅವರು ನಿತಿನ್ ಚಿಕಿತ್ಸೆ ಪ್ರಾರಂಭಿಸಿದರು. ನಂತರ ಡಾರ್ಜಲಿಂಗ್‌ನ ಬಿಜೆಪಿ ಸಂಸದ ರಾಜು ಬಿಸ್ತಾ ಅವರು ನಿತಿನ್ ಗಡ್ಕರಿ ಅವರೊಂದಿಗೆ ಕಾರಿನಲ್ಲಿ ತಮ್ಮ ಮನೆಗೆ ತೆರಳಿದರು. ಕೇಂದ್ರ ಸಚಿವರ ಚಿಕಿತ್ಸೆಗೆ ಮತ್ತಿಗಾರದಲ್ಲಿರುವ ಅವರ ಮನೆಯಲ್ಲಿಯೇ ವ್ಯವಸ್ಥೆ ಮಾಡಲಾಯಿತು.
ಸಿಲಿಗುರಿಯಲ್ಲಿ ನಡೆದ ಸಮಾರಂಭದ ನಂತರ ನಿತಿನ್ ಗಡ್ಕರಿ ದಲ್ಖೋಲಾಗೆ ಹೋಗಬೇಕಿತ್ತು. ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ರದ್ದಾಗುವ ಸಾಧ್ಯತೆಯಿದೆ. ಇಂದು ಸಂಜೆ ಅವರು ನೇರವಾಗಿ ದೆಹಲಿಗೆ ಪ್ರಯಾಣ ಮಾಡುವ ಸಾಧ್ಯತೆಯಿದೆ.