ಧಾರ್ಮಿಕ ಸಂಸ್ಥೆಗಳು ನಿರ್ವಹಿಸುವ ಕಡಿಮೆ ದರದ ವಸತಿ ಗೃಹಗಳಿಗೆ ಜಿಎಸ್​ಟಿ ವಿನಾಯ್ತಿ: ಸಿಬಿಐಸಿ

ಧಾರ್ಮಿಕ ಅಥವಾ ದತ್ತಿ (ಚಾರಿಟೇಬಲ್) ಟ್ರಸ್ಟ್​ಗಳು ನಡೆಸುವ ವಸತಿ ಗೃಹಗಳಿಗೆ ಜಿಎಸ್​ಟಿ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ. ಈ ಮೂಲಕ ಜಿಎಸ್​ಟಿ ಬಗ್ಗೆ ಎದ್ದಿರುವ ಸಂದೇಹಗಳನ್ನು ಪರಿಹರಿಸಿದೆ.

ಧಾರ್ಮಿಕ ಸಂಸ್ಥೆಗಳು ನಿರ್ವಹಿಸುವ ಕಡಿಮೆ ದರದ ವಸತಿ ಗೃಹಗಳಿಗೆ ಜಿಎಸ್​ಟಿ ವಿನಾಯ್ತಿ: ಸಿಬಿಐಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 05, 2022 | 12:33 PM

ದೆಹಲಿ: ವಸತಿ ಗೃಹಗಳ ಮೇಲೆ ಸರಕು ಸೇವಾ ಸುಂಕ (Goods and Services Tax – GST) ವಿಧಿಸಿರುವ ಕೇಂದ್ರ ಸರ್ಕಾರವು ಇದೀಗ ನಿಯಮಗಳಿಗೆ ಸಂಬಂಧಿಸಿದಂತೆ ಎದ್ದಿದ್ದ ವಿವಾದವನ್ನು ಶಮನಗೊಳಿಸಲು ಮುಂದಾಗಿದೆ. ಧಾರ್ಮಿಕ ಅಥವಾ ದತ್ತಿ (ಚಾರಿಟೇಬಲ್) ಟ್ರಸ್ಟ್​ಗಳು ನಡೆಸುವ ವಸತಿ ಗೃಹಗಳಿಗೆ ಜಿಎಸ್​ಟಿ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ. ಈ ಮೂಲಕ ಜಿಎಸ್​ಟಿ ಬಗ್ಗೆ ಎದ್ದಿರುವ ಸಂದೇಹಗಳನ್ನು ಪರಿಹರಿಸಿದೆ.

‘ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕೆಲ ಮೆಸೇಜ್​ಗಳಲ್ಲಿ ಧಾರ್ಮಿಕ ಅಥವಾ ಚಾರಿಟೇಬಲ್ ಟ್ರಸ್ಟ್​ಗಳು ನಡೆಸುವ ವಸತಿ ಗೃಹಗಳ ಮೇಲೆಯೂ ಜಿಎಸ್​ಟಿ ವಿಧಿಸಿದ್ದಾಗಿ ಆರೋಪಿಸಿವೆ. ಇದು ಸತ್ಯವಲ್ಲ’ ಎಂದು ಪರೋಕ್ಷ ತೆರಿಗೆಗಳು ಮತ್ತು ಅಬಕಾರಿ ಸುಂಕಗಳ ಕೇಂದ್ರೀಯ ಮಂಡಳಿ (Central Board of Indirect Taxes and Customs – CBIC) ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

ಚಂಡಿಗಡದಲ್ಲಿ ನಡೆದಿದ್ದ 47ನೇ ಜಿಎಸ್​ಟಿ ಮಂಡಳಿಯ ಸಭೆಯಲ್ಲಿ ₹ 1000ಕ್ಕೂ ಕಡಿಮೆ ದರ ವಿಧಿಸುತ್ತಿದ್ದ ಹೊಟೆಲ್ ವಸತಿ ಕೊಠಡಿಗಳಿಗೆ ನೀಡಿದ್ದ ಜಿಎಸ್​ಟಿ ವಿನಾಯ್ತಿ ಹಿಂಪಡೆದು, ಶೇ 12ರಷ್ಟು ತೆರಿಗೆ ವಿಧಿಸಲಾಗಿತ್ತು. ಈ ನಿಯಮದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿದ್ದವು. ಸಿಖ್ ಸಮುದಾಯದ ಪ್ರಭಾವಿ ಹಾಗೂ ಮುಂಚೂಣಿ ಸಂಘಟನೆ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕರಾದ ರಾಘವ್ ಛಡ್ಡ ಜಿಎಸ್​ಟಿ ವಿಧಿಸುವ ನಿರ್ಧಾರವನ್ನು ಪ್ರಬಲವಾಗಿ ವಿರೋಧಿಸಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಕಡಿಮೆ ದರ ವಿಧಿಸುವ ವಸತಿ ಗೃಹಗಳ ಮೇಲೆ ಜಿಎಸ್​ಟಿ ರದ್ದುಪಡಿಸುವಂತೆ ಆಗ್ರಹಿಸಿದ್ದರು. ಈ ಬೆಳವಣಿಗೆ ನಡೆದ ನಂತರ ಹಣಕಾಸು ಇಲಾಖೆಯು ಸ್ಪಷ್ಟನೆ ನೀಡಿದ್ದು, ಧಾರ್ಮಿಕ ಅಥವಾ ಚಾರಿಟೇಬಲ್ ಟ್ರಸ್ಟ್​ಗಳು ನಡೆಸುವ ವಸತಿ ಸೌಕರ್ಯಗಳ ಮೇಲೆ ತೆರಿಗೆ ಇರುವುದಿಲ್ಲ ಎಂದು ಹೇಳಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವೀಟ್ ಮಾಡಿರುವ ಸಿಬಿಐಸಿ, ‘ಧಾರ್ಮಿಕ ಸ್ಥಳಗಳ ಆವರಣದಲ್ಲಿರುವ ವಸತಿ ಗೃಹಗಳು ₹ 1000ಕ್ಕಿಂತಲೂ ಕಡಿಮೆ ಶುಲ್ಕ ವಿಧಿಸಿದರೆ ಅದರ ಮೇಲೆಯೂ ಜಿಎಸ್​ಟಿ ಇರುವುದಿಲ್ಲ. ಈ ವಸತಿ ಗೃಹ ವಿಚಾರದಲ್ಲಿಯೂ ತೆರಿಗೆ ನಿಯಮಗಳು ಎಂದಿನಂತೆಯೇ ಮುಂದುವರಿಯಲಿವೆ’ ಎಂದು ಸ್ಪಷ್ಟಪಡಿಸಿದೆ.

ಶಿರೋಮಣಿ ಗುರುದ್ವಾರ ಪ್ರಬಂಧ ಸಮಿತಿ ನಿರ್ವಹಿಸುತ್ತಿರುವ ಗುರು ಗೋವಿಂದ್ ಸಿಂಗ್ ಎನ್​ಆರ್​ಐ ನಿವಾಸ್, ಬಾಬಾ ದೀಪ್ ಸಿಂಗ್ ನಿವಾಸ್ ಮತ್ತು ಮಾತಾ ಭಾಗ್ ಕೌಸ್​ ನಿವಾಸಗಳು ಕಳೆದ ಜುಲೈ 18ರಿಂದಲೇ ಜಿಎಸ್​ಟಿ ಪಾವತಿಸುತ್ತಿವೆ ಎಂದು ಕೆಲ ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ಸಿಬಿಐಸಿ ತಿಳಿಸಿದೆ. ಸಾರಿಯಾಸ್ ಎಂದು ಕರೆಯುವ ಈ ವಸತಿ ಗೃಹಗಳು ಸ್ವಯಂ ಪ್ರೇರಣೆಯಿಂದ ಜಿಎಸ್​ಟಿ ಪಾವತಿ ಆರಂಭಿಸಿರಬಹುದು. ದೇಶದಲ್ಲಿ ಜಿಎಸ್​ಟಿ ಜಾರಿಗೆ ಮೊದಲೂ ಇಂಥ ವಸತಿಗೃಹಗಳಿಗೆ ತೆರಿಗೆ ವಿಧಿಸುತ್ತಿರಲಿಲ್ಲ ಎಂದು ಹೇಳಿದೆ.

Published On - 12:33 pm, Fri, 5 August 22