
ದೆಹಲಿ: ವಸತಿ ಗೃಹಗಳ ಮೇಲೆ ಸರಕು ಸೇವಾ ಸುಂಕ (Goods and Services Tax – GST) ವಿಧಿಸಿರುವ ಕೇಂದ್ರ ಸರ್ಕಾರವು ಇದೀಗ ನಿಯಮಗಳಿಗೆ ಸಂಬಂಧಿಸಿದಂತೆ ಎದ್ದಿದ್ದ ವಿವಾದವನ್ನು ಶಮನಗೊಳಿಸಲು ಮುಂದಾಗಿದೆ. ಧಾರ್ಮಿಕ ಅಥವಾ ದತ್ತಿ (ಚಾರಿಟೇಬಲ್) ಟ್ರಸ್ಟ್ಗಳು ನಡೆಸುವ ವಸತಿ ಗೃಹಗಳಿಗೆ ಜಿಎಸ್ಟಿ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದೆ. ಈ ಮೂಲಕ ಜಿಎಸ್ಟಿ ಬಗ್ಗೆ ಎದ್ದಿರುವ ಸಂದೇಹಗಳನ್ನು ಪರಿಹರಿಸಿದೆ.
‘ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಕೆಲ ಮೆಸೇಜ್ಗಳಲ್ಲಿ ಧಾರ್ಮಿಕ ಅಥವಾ ಚಾರಿಟೇಬಲ್ ಟ್ರಸ್ಟ್ಗಳು ನಡೆಸುವ ವಸತಿ ಗೃಹಗಳ ಮೇಲೆಯೂ ಜಿಎಸ್ಟಿ ವಿಧಿಸಿದ್ದಾಗಿ ಆರೋಪಿಸಿವೆ. ಇದು ಸತ್ಯವಲ್ಲ’ ಎಂದು ಪರೋಕ್ಷ ತೆರಿಗೆಗಳು ಮತ್ತು ಅಬಕಾರಿ ಸುಂಕಗಳ ಕೇಂದ್ರೀಯ ಮಂಡಳಿ (Central Board of Indirect Taxes and Customs – CBIC) ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.
ಚಂಡಿಗಡದಲ್ಲಿ ನಡೆದಿದ್ದ 47ನೇ ಜಿಎಸ್ಟಿ ಮಂಡಳಿಯ ಸಭೆಯಲ್ಲಿ ₹ 1000ಕ್ಕೂ ಕಡಿಮೆ ದರ ವಿಧಿಸುತ್ತಿದ್ದ ಹೊಟೆಲ್ ವಸತಿ ಕೊಠಡಿಗಳಿಗೆ ನೀಡಿದ್ದ ಜಿಎಸ್ಟಿ ವಿನಾಯ್ತಿ ಹಿಂಪಡೆದು, ಶೇ 12ರಷ್ಟು ತೆರಿಗೆ ವಿಧಿಸಲಾಗಿತ್ತು. ಈ ನಿಯಮದ ಬಗ್ಗೆ ಹಲವು ಪ್ರಶ್ನೆಗಳು ಉದ್ಭವಿಸಿದ್ದವು. ಸಿಖ್ ಸಮುದಾಯದ ಪ್ರಭಾವಿ ಹಾಗೂ ಮುಂಚೂಣಿ ಸಂಘಟನೆ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕರಾದ ರಾಘವ್ ಛಡ್ಡ ಜಿಎಸ್ಟಿ ವಿಧಿಸುವ ನಿರ್ಧಾರವನ್ನು ಪ್ರಬಲವಾಗಿ ವಿರೋಧಿಸಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ರಾಘವ್ ಛಡ್ಡಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ, ಕಡಿಮೆ ದರ ವಿಧಿಸುವ ವಸತಿ ಗೃಹಗಳ ಮೇಲೆ ಜಿಎಸ್ಟಿ ರದ್ದುಪಡಿಸುವಂತೆ ಆಗ್ರಹಿಸಿದ್ದರು. ಈ ಬೆಳವಣಿಗೆ ನಡೆದ ನಂತರ ಹಣಕಾಸು ಇಲಾಖೆಯು ಸ್ಪಷ್ಟನೆ ನೀಡಿದ್ದು, ಧಾರ್ಮಿಕ ಅಥವಾ ಚಾರಿಟೇಬಲ್ ಟ್ರಸ್ಟ್ಗಳು ನಡೆಸುವ ವಸತಿ ಸೌಕರ್ಯಗಳ ಮೇಲೆ ತೆರಿಗೆ ಇರುವುದಿಲ್ಲ ಎಂದು ಹೇಳಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಟ್ವೀಟ್ ಮಾಡಿರುವ ಸಿಬಿಐಸಿ, ‘ಧಾರ್ಮಿಕ ಸ್ಥಳಗಳ ಆವರಣದಲ್ಲಿರುವ ವಸತಿ ಗೃಹಗಳು ₹ 1000ಕ್ಕಿಂತಲೂ ಕಡಿಮೆ ಶುಲ್ಕ ವಿಧಿಸಿದರೆ ಅದರ ಮೇಲೆಯೂ ಜಿಎಸ್ಟಿ ಇರುವುದಿಲ್ಲ. ಈ ವಸತಿ ಗೃಹ ವಿಚಾರದಲ್ಲಿಯೂ ತೆರಿಗೆ ನಿಯಮಗಳು ಎಂದಿನಂತೆಯೇ ಮುಂದುವರಿಯಲಿವೆ’ ಎಂದು ಸ್ಪಷ್ಟಪಡಿಸಿದೆ.
ಶಿರೋಮಣಿ ಗುರುದ್ವಾರ ಪ್ರಬಂಧ ಸಮಿತಿ ನಿರ್ವಹಿಸುತ್ತಿರುವ ಗುರು ಗೋವಿಂದ್ ಸಿಂಗ್ ಎನ್ಆರ್ಐ ನಿವಾಸ್, ಬಾಬಾ ದೀಪ್ ಸಿಂಗ್ ನಿವಾಸ್ ಮತ್ತು ಮಾತಾ ಭಾಗ್ ಕೌಸ್ ನಿವಾಸಗಳು ಕಳೆದ ಜುಲೈ 18ರಿಂದಲೇ ಜಿಎಸ್ಟಿ ಪಾವತಿಸುತ್ತಿವೆ ಎಂದು ಕೆಲ ಮಾಧ್ಯಮಗಳ ವರದಿಗಳನ್ನು ಉಲ್ಲೇಖಿಸಿ ಸಿಬಿಐಸಿ ತಿಳಿಸಿದೆ. ಸಾರಿಯಾಸ್ ಎಂದು ಕರೆಯುವ ಈ ವಸತಿ ಗೃಹಗಳು ಸ್ವಯಂ ಪ್ರೇರಣೆಯಿಂದ ಜಿಎಸ್ಟಿ ಪಾವತಿ ಆರಂಭಿಸಿರಬಹುದು. ದೇಶದಲ್ಲಿ ಜಿಎಸ್ಟಿ ಜಾರಿಗೆ ಮೊದಲೂ ಇಂಥ ವಸತಿಗೃಹಗಳಿಗೆ ತೆರಿಗೆ ವಿಧಿಸುತ್ತಿರಲಿಲ್ಲ ಎಂದು ಹೇಳಿದೆ.
Published On - 12:33 pm, Fri, 5 August 22