
ನವದೆಹಲಿ, ಸೆಪ್ಟೆಂಬರ್ 10: ಇನ್ನೊಬ್ಬರ ಗುರುತಿನ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ನಕಲಿ ಜಿಎಸ್‌ಟಿ ನೋಂದಣಿ ಪಡೆಯುವುದನ್ನು ತಡೆಯಲು ದೆಹಲಿ ಹೈಕೋರ್ಟ್ ದೇಶವ್ಯಾಪಿ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ. ಇನ್ಮುಂದೆ ಬಯೋಮೆಟ್ರಿಕ್ ಆಧಾರಿತ ಗುರುತಿನ ದೃಢೀಕರಣ (Biometric-based Authentication) ಇಲ್ಲದೆ ದೇಶಾದ್ಯಂತ ಯಾವುದೇ ಹೊಸ ಜಿಎಸ್‌ಟಿ ನೋಂದಣಿ ನೀಡಬಾರದು ಎಂದು ನ್ಯಾ| ಅನಿಲ್ ಕ್ಷೇತ್ರಪಾಲ್ ಮತ್ತು ನ್ಯಾ| ಶೈಲ್ ಜೈನ್ ಅವರಿದ್ದ ಉಚ್ಚ ನ್ಯಾಯಪೀಠವು ಸೆ. 8ರಂದು ಜಿಎಸ್‌ಟಿ ಪ್ರಾಧಿಕಾರಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಸಾರ್ವಜನಿಕರ ಗುರುತಿನ ಚೀಟಿಗಳನ್ನು ಕದ್ದು ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿರುವ ಪ್ರಕರಣಗಳ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ಆದೇಶ ನೀಡಿದೆ. ಇದುವರೆಗೆ ವ್ಯವಸ್ಥೆಯು ಕೇವಲ “ಅಪಾಯಕಾರಿ” (Risky) ಎಂದು ಗುರುತಿಸಿದ ಅರ್ಜಿಗಳಿಗೆ ಮಾತ್ರ ಬಯೋಮೆಟ್ರಿಕ್ ಪರಿಶೀಲನೆ ನಡೆಸುತ್ತಿತ್ತು. ಆದರೆ ಇನ್ಮುಂದೆ ಪ್ರತಿಯೊಂದು ಹೊಸ ಜಿಎಸ್‌ಟಿ ನೋಂದಣಿಗೂ ಬಯೋಮೆಟ್ರಿಕ್ ದೃಢೀಕರಣ ಕಡ್ಡಾಯವಾಗಿರುತ್ತದೆ.
ಇದನ್ನೂ ಓದಿ: ಈಕ್ವಿಟಿ ಫಂಡ್ಗಳಿಗೆ ಹರಿದುಬಂದ ಬಂಡವಾಳ 29,329 ಕೋಟಿ ರೂ; ಆಗಸ್ಟ್ನಲ್ಲಿ ನಿವ್ವಳ ಹೂಡಿಕೆಯಲ್ಲಿ ಶೇ. 19 ಏರಿಕೆ
ಸಾವಿರಾರು ಕೋಟಿ ತೆರಿಗೆ ವಂಚನೆ: 2023-24ರಲ್ಲಿ 2,800 ನಕಲಿ ಜಿಎಸ್‌ಟಿ ನೋಂದಣಿಗಳಿಂದ ₹15,085 ಕೋಟಿ ತೆರಿಗೆ ವಂಚನೆ ಹಾಗೂ 2024-25ರಲ್ಲಿ 1,654 ನಕಲಿ ನೋಂದಣಿಗಳಿಂದ ₹13,109 ಕೋಟಿ ವಂಚನೆ ಪತ್ತೆಯಾಗಿದೆ ಎಂದು ಸಂಸತ್ತಿನಲ್ಲಿ ನೀಡಿದ್ದ ವರದಿಯನ್ನು ಕೋರ್ಟ್ ಉಲ್ಲೇಖಿಸಿದೆ.
ಬಯೋಮೆಟ್ರಿಕ್ ಪರಿಶೀಲನೆಯನ್ನು ಕಡ್ಡಾಯಗೊಳಿಸುವುದಾಗಿ ಸಚಿವರು ಭರವಸೆ ನೀಡಿ ವರ್ಷ ಕಳೆದರೂ ಅದನ್ನು ಪೂರ್ಣವಾಗಿ ಜಾರಿಗೆ ತರದಿರುವುದಕ್ಕೆ ನ್ಯಾಯಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.
ನಕಲಿ ನೋಂದಣಿಗಳಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗುತ್ತಿರುವುದಲ್ಲದೆ, ಯಾವುದೇ ಸಂಬಂಧವಿಲ್ಲದ ನಿರಪರಾಧಿ ಸಾರ್ವಜನಿಕರು ಆರ್ಥಿಕ ಮತ್ತು ಕಾನೂನು ಸಂಕಷ್ಟಗಳನ್ನು ಎದುರಿಸಬೇಕಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಇದನ್ನೂ ಓದಿ: ಎಐ ಏಜೆಂಟ್‌ಗಳ ಮೂಲಕ ಯುಪಿಐ ಪಾವತಿ: ಕ್ರಾಂತಿಕಾರಿ ತಂತ್ರಜ್ಞಾನಕ್ಕೆ ಎನ್‌ಪಿಸಿಐ ಆಲೋಚನೆ
ದುರ್ಬಳಕೆಯನ್ನು ತಡೆಯಲು ಅರ್ಜಿ ಸಲ್ಲಿಸುವಾಗ 20-30 ಸೆಕೆಂಡುಗಳ ವಿಡಿಯೋ ಪರಿಶೀಲನೆ (Video Verification), ರಿಯಲ್-ಟೈಮ್ ಫೇಸ್ ರೆಕಗ್ನಿಷನ್ (Face Recognition) ಹಾಗೂ ಪ್ಯಾನ್/ಆಧಾರ್ ದುರ್ಬಳಕೆಯಾದಾಗ ನೇರ ಎಸ್‌ಎಂಎಸ್/ಇಮೇಲ್ ಅಲರ್ಟ್ ಕಳುಹಿಸುವ ಪ್ರಸ್ತಾಪಗಳನ್ನು ಕೋರ್ಟ್ ಪರಿಶೀಲಿಸುತ್ತಿದ್ದು, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 22ಕ್ಕೆ ನಿಗದಿಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ