ಚೆನ್ನೈ: ವಾರ್ಷಿಕ 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರಿಂದ ಆದಾಯ ತೆರಿಗೆ ಸಂಗ್ರಹಿಸುತ್ತಿರುವುದನ್ನು ಪ್ರಶ್ನಿಸಿ ಡ್ರಾವಿಡ ಮುನ್ನೇತ್ರ ಕಳಗಂ (DMK) ನಾಯಕ ಕುನ್ನೂರ್ ಶ್ರೀನಿವಾಸನ್ ಎಂಬವರು ಮದ್ರಾಸ್ ಹೈಕೋರ್ಟ್ನ (Madras High Court) ಮದುರೈ ಪೀಠಕ್ಕೆ (Madurai Bench) ಅರ್ಜಿ ಸಲ್ಲಿಸಿದ್ದಾರೆ. ಆರ್ಥಿಕ ದುರ್ಬಲ ವರ್ಗಕ್ಕೆ (EWS) ಸಂಬಂಧಿಸಿ ಇತ್ತೀಚೆಗೆ ಸುಪ್ರೀಂ ಕೋರ್ಟ್ (Supreme Court) ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಅವರು, 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವವರಿಂದ ತೆರಿಗೆ ಸಂಗ್ರಹಿಸುತ್ತಿರುವುದರ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ಕೋರಿ ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ.
ಅರ್ಜಿದಾರರ ವಾದವೇನು?
ವಾರ್ಷಿಕ 8 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರು ಆರ್ಥಿಕ ದುರ್ಬಲ ವರ್ಗ ಅಥವಾ ಇಡಬ್ಲ್ಯೂಎಸ್ ಅಡಿ ನೀಡುವ ಸೌಲಭ್ಯಕ್ಕೆ ಅರ್ಹರು ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಹೇಳಲಾಗಿದೆ. ಹೀಗಿರುವಾಗ 2.5 ಲಕ್ಷ ರೂ. ಆದಾಯ ಹೊಂದಿರುವವರಿಂದ ತೆರಿಗೆ ಸಂಗ್ರಹಿಸುವುದರಲ್ಲಿ ಅರ್ಥವಿಲ್ಲ ಎಂದು ಅರ್ಜಿಯಲ್ಲಿ ಶ್ರೀನಿವಾಸನ್ ಉಲ್ಲೇಖಿಸಿದ್ದಾರೆ.
ಕೃಷಿಕರಾಗಿರುವ ಶ್ರೀನಿವಾಸನ್ ಡಿಎಂಕೆಯ ಸ್ವತ್ತು ರಕ್ಷಣಾ ಮಂಡಳಿಯ ಸದಸ್ಯರಾಗಿದ್ದಾರೆ. ವಾರ್ಷಿಕವಾಗಿ 2.5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಗಳಿಸುವ ಜನರು ಆದಾಯ ತೆರಿಗೆ ಪಾವತಿಸಬೇಕು ಎಂಬ ‘2022ರ ಹಣಕಾಸು ಕಾಯ್ದೆ’ಯನ್ನು ಅಸಿಂಧು ಎಂದು ಘೋಷಿಸಬೇಕು ಎಂಬುದಾಗಿ ಅವರು ಮನವಿ ಮಾಡಿರುವುದಾಗಿ ‘ಲೈವ್ ಲಾ’ ವರದಿ ಮಾಡಿದೆ.
ಇದನ್ನೂ ಓದಿ: EWS Quota: ಅರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರ ಮೀಸಲಾತಿ; ಕೇಂದ್ರದ ಕಾನೂನು ಎತ್ತಿ ಹಿಡಿದ ಸುಪ್ರೀಂಕೋರ್ಟ್
ಸಂವಿಧಾನದ 103ನೇ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಇತ್ತೀಚಿನ ಆದೇಶದ ವೇಳೆ ಎತ್ತಿಹಿಡಿದಿರುವುದನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ಒದಗಿಸುವ ಕೇಂದ್ರ ಸರ್ಕಾರದ ಕಾನೂನನ್ನು ನವೆಂಬರ್ 7ರಂದು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. 7,99,999 ರೂ.ವರೆಗೆ ವಾರ್ಷಿಕ ಆದಾಯ ಹೊಂದಿರುವವರು ಆರ್ಥಿಕ ದುರ್ಬಲ ವರ್ಗದಡಿ ಮೀಸಲಾತಿ ಪಡೆಯಲು ಅರ್ಹರು ಎಂದು ಹೇಳಿತ್ತು. ಹೀಗಾಗಿ ಆರ್ಥಿಕ ದುರ್ಬಲ ವರ್ಗದವರಿಂದ ಸರ್ಕಾರ ಆದಾಯ ತೆರಿಗೆ ಸಂಗ್ರಹಿಸಲು ಬಿಡಬಾರದು ಎಂದು ಶ್ರೀನಿವಾಸನ್ ಮನವಿ ಮಾಡಿದ್ದಾರೆ.
ಸಂವಿಧಾನದ 103ನೇ ತಿದ್ದುಪಡಿಯಲ್ಲಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10ರ ಮೀಸಲಾತಿ ನೀಡಲು ಅನುವು ಮಾಡಿಕೊಡಲಾಗಿದೆ. ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ವರ್ಗ (ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರದ ವ್ಯಕ್ತಿಗಳ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷ ರೂ.ಗಿಂತ ಕಡಿಮೆಯಿದ್ದರೆ ಈ ಕಾನೂನಿನ ಅನ್ವಯ ಮೀಸಲಾತಿ ನೀಡಲು ಅವಕಾಶ ಸಿಗುತ್ತದೆ.
ಕೇಂದ್ರಕ್ಕೆ ನೋಟಿಸ್
ಶ್ರೀನಿವಾಸನ್ ಅವರ ಅರ್ಜಿಯನ್ನು ಮದುರೈ ಪೀಠದ ನ್ಯಾಯಮೂರ್ತಿ ಆರ್. ಮಹಾದೇವನ್ ಹಾಗೂ ಜೆ. ಸತ್ಯನಾರಾಯಣ ಪ್ರಸಾದ್ ವಿಚಾರಣೆಗೆ ಕೈಗೆತ್ತಿಕೊಂಡಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯೆ ಕೋರಿ ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಸಚಿವರು, ವೈಯಕ್ತಿಕ ಹಣಕಾಸು ಸಚಿವರಿಗೆ ನೋಟಿಸ್ ನೀಡಿದ್ದಾರೆ. ಬಳಿಕ ವಿಚಾರಣೆಯನ್ನು ಮುಂದೂಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:39 am, Wed, 23 November 22