ನವದೆಹಲಿ: ವಿಮಾ ಕ್ಷೇತ್ರಕ್ಕೆ ಪೂರಕ ಘೋಷಣೆಗಳಾಗಬಹುದು, ತೆರಿಗೆ ವಿನಾಯಿತಿ ಮಿತಿ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸುತ್ತಿದ್ದವರಿಗೆ ಬಜೆಟ್ (Budget 2023) ನಿರಾಸೆ ಮೂಡಿಸಿದ್ದು, ಆಘಾತ ನೀಡಿದೆ. 5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ವಿಮೆಗೆ ತೆರಿಗೆ ವಿನಾಯಿತಿ (Tax exemption) ಇರುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಘೋಷಿಸಿದ್ದಾರೆ. ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ಗಳನ್ನು ಹೊರತುಪಡಿಸಿ 5 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಜೀವ ವಿಮಾ ಪಾಲಿಸಿಗಳಿಗೆ ತೆರಿಗೆ ವಿನಾಯಿತಿ ನೀಡುವುದು 2023ರ ಏಪ್ರಿಲ್ 1ರಿಂದ ಸ್ಥಗಿತಗೊಳ್ಳಲಿದೆ ಎಂದು ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ. ವಿಮೆ ಹೊಂದಿರುವ ವ್ಯಕ್ತಿ ಮೃತಪಟ್ಟಾಗ ದೊರೆಯುವ ಮೊತ್ತಕ್ಕೆ ಪರಿಷ್ಕೃತ ನಿಯಮ ಅನ್ವಯವಾಗುವುದಿಲ್ಲ ಎಂದೂ ತಿಳಿಸಲಾಗಿದೆ. ಹೊಸ ತೆರಿಗೆ ನಿಯಮ 2023ರ ಮಾರ್ಚ್ 31ರ ಒಳಗೆ ಅವಧಿಪೂರ್ಣಗೊಳ್ಳುವ ವಿಮಾ ಪಾಲಿಸಿಗಳಿಗೆ ಅನ್ವಯವಾಗುವುದಿಲ್ಲ.
ಒಂದು ಅಥವಾ ಅದಕ್ಕಿಂತ ಹೆಚ್ಚಿನ ಎಷ್ಟೇ ವಿಮಾ ಪಾಲಿಸಿಗಳನ್ನು ಹೊಂದಿದ್ದರೂ ವರ್ಷದ ಅವಧಿಯಲ್ಲಿ ಅದರ ಪ್ರೀಮಿಯಂ ಮೊತ್ತ 5 ಲಕ್ಷ ರೂ. ದಾಟಿದ್ದರೆ ಅದಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ‘ಕ್ಲಿಯರ್’ ಸಿಇಒ ಅರ್ಚಿತ್ ಗುಪ್ತಾ ತಿಳಿಸಿರುವುದಾಗಿ ‘ಮನಿ ಕಂಟ್ರೋಲ್’ ವರದಿ ಮಾಡಿದೆ. ಮುಂದಿನ ಹಣಕಾಸು ವರ್ಷಕ್ಕೆ ಮಾಡಿಸಿಕೊಳ್ಳುವ ವಿಮೆಗೆ ಹೊಸ ನಿಯಮ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
2.5 ಲಕ್ಷ ರೂ.ಗಿಂತ ಹೆಚ್ಚು ಮೊತ್ತದ ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ಗಳ ತೆರಿಗೆ ವಿನಾಯಿತಿಯನ್ನು 2021ರ ಬಜೆಟ್ನಲ್ಲೇ ರದ್ದುಗೊಳಿಸಲಾಗಿತ್ತು. ಇದೀಗ 5 ಲಕ್ಷ ರೂ.ಗಿಂತ ಹೆಚ್ಚಿನ ಪ್ರೀಮಿಯಂ ಮೊತ್ತದ ವಿಮೆಗೆ ತೆರಿಗೆ ವಿನಾಯಿತಿ ರದ್ದುಗೊಳಿಸಿರುವ ಸರ್ಕಾರದ ನಡೆ ವಿಮಾ ಕ್ಷೇತ್ರದ ಕಂಪನಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಇದನ್ನೂ ಓದಿ: ಕೇಂದ್ರ ಬಜೆಟ್ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಬಂಪರ್: ಏನಿದು ಯೋಜನೆ? ಯಾರಿಗೆಲ್ಲ ಲಾಭ?
ಹೊಸ ನಿಯಮದಿಂದಾಗಿ ಜನರು ಸಾಂಪ್ರದಾಯಿಕ ಜೀವ ವಿಮೆ ಮಾಡಿಸಿಕೊಳ್ಳುವ ಬದಲು ಟರ್ಮ್ ಇನ್ಶೂರೆನ್ಸ್ ಬಗ್ಗೆ ಹೆಚ್ಚು ಗಮನಹರಿಸುವ ಸಾಧ್ಯತೆ ಇದೆ. ಇದರಿಂದ ಜನರು ಸಂಪೂರ್ಣವಾಗಿ ಹೂಡಿಕೆ ಆಧಾರಿತ ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ಗಳ ಕಡೆಗೆ ಒಲವು ಹೆಚ್ಚಾಗುವ ಕಳವಳ ವ್ಯಕ್ತವಾಗಿದೆ ಎಂದು ಇನ್ಶೂರೆನ್ಸ್ ಮಧ್ಯವರ್ತಿ ಕಂಪನಿ ‘ಸೆಕ್ಯೂರ್ ನೌ’ ಸ್ಥಾಪಕ ಕಪಿಲ್ ಮೆಹ್ತಾ ಹೇಳಿದ್ದಾರೆ.
ಬಜೆಟ್ಗೂ ಮುನ್ನ ವಿಮಾ ಕಂಪನಿಗಳು ಜೀವ ವಿಮೆಗೆ ಪ್ರತ್ಯೇಕ ತೆರಿಗೆ ಕಡಿತ ಹಾಗೂ ಆರೋಗ್ಯ ವಿಮೆಗೆ ಹೆಚ್ಚಿನ ತೆರಿಗೆ ವಿನಾಯಿತಿಯನ್ನು ನಿರೀಕ್ಷಿಸಿದ್ದವು.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:05 pm, Thu, 2 February 23