Adani Group: ಅದಾನಿ ಗ್ರೂಪ್ ವಿರುದ್ಧ ತನಿಖೆಗೆ ವಿಪಕ್ಷಗಳ ಒತ್ತಾಯ; ಬ್ಯಾಂಕುಗಳಿಂದ ವಿವರ ಕೇಳಿದ ಆರ್ಬಿಐ
Opposition Parties Attack Government: ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಥವಾ ಸಿಜೆಐ ನೇಮಿತ ಸಮಿತಿಯೊಂದರಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ವಿಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದಾರೆ.
ನವದೆಹಲಿ: ಅದಾನಿ ಗ್ರೂಪ್ನಿಂದ ಷೇರುಮೌಲ್ಯ ಹೆಚ್ಚಿಸಲು ವಂಚನೆಗಳಾಗಿವೆ ಎಂಬಂತೆ ಹಿಂಡನ್ಬರ್ಗ್ ರಿಸರ್ಚ್ ವರದಿ (Hindenburg Research Report) ಮಾಡಿದ ಬೆನ್ನಲ್ಲೇ ಭಾರತದಲ್ಲಿ ಷೇರುಪೇಟೆ ಅಲುಗಾಡಲು ಆರಂಭವಾಗಿದೆ. ಜೊತೆಗೆ, ನರೇಂದ್ರ ಮೋದಿ ನೇತೃತ್ವದ ಆಳಿತಾರೂಢ ಬಿಜೆಪಿಯನ್ನು ಅಲುಗಾಡಿಸಲು ವಿಪಕ್ಷಗಳಿಗೆ ಪ್ರಬಲ ಅಸ್ತ್ರ ಸಿಕ್ಕಂತಾಗಿದೆ. ಇದೀಗ ಸಂಸತ್ನಲ್ಲಿ ಅದಾನಿ ಗ್ರೂಪ್ ಪ್ರಕರಣವೇ (Adani Group) ಜೋರು ಸದ್ದು ಮಾಡುತ್ತಿದೆ. ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ– JPC- Joint Parliamentary Committee) ಅಥವಾ ಸಿಜೆಐ ನೇಮಿತ ಸಮಿತಿಯೊಂದರಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ವಿಪಕ್ಷಗಳ ನಾಯಕರು ಆಗ್ರಹಿಸುತ್ತಿದ್ದಾರೆ.
ಸಂಸತ್ನಲ್ಲಿ ಅದಾನಿ ಗ್ರೂಪ್ ವಿಚಾರವನ್ನು ಪ್ರಸ್ತಾಪಿಸಿ ಚರ್ಚಿಸಲು ವಿಪಕ್ಷಗಳು ಪ್ರಯತ್ನಿಸುತ್ತಿವೆ. ಆದರೆ, ಸರ್ಕಾರದಿಂದ ಅದಕ್ಕೆ ಅವಕಾಶ ಸಿಗುತ್ತಿಲ್ಲ ಎಂಬುದು ಕಾಂಗ್ರೆಸ್ ಮತ್ತಿತರ ಪಕ್ಷಗಳ ಆಕ್ರೋಶವಾಗಿದೆ. ಸಂಸದೀಯ ಅಧಿವೇಶನಕ್ಕೆ ಮುನ್ನ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಮಾಜವಾದಿ ಪಕ್ಷ, ಎನ್ಸಿಪಿ, ಶಿವಸೇನೆ, ಡಿಎಂಕೆ, ಟಿಎಂಸಿ, ಎಎಪಿ, ಸಿಪಿಐಎಂ ಮೊದಲಾದ ವಿಪಕ್ಷಗಳ ನಾಯಕರ ಸಭೆ ನಡೆದು ಅದಾನಿ ವಿಚಾರವನ್ನು ಚರ್ಚೆಗೆ ತರಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ಅವಕಾಶ ಕಲ್ಪಿಸದೇ ಹೋದ್ದರಿಂದ ಗುರುವಾರದ ಅಧಿವೇಶನದಲ್ಲಿ ವಿಪಕ್ಷಗಳ ಸದಸ್ಯರು ಗಲಾಟೆ ನಡೆಸಿದ್ದಾರೆ.
ಇದನ್ನೂ ಓದಿ: ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಹುತಾತ್ಮರಾಗಿಲ್ಲ ಅದೊಂದು ಅಪಘಾತವಷ್ಟೇ ಎಂದ ಬಿಜೆಪಿ ಸಚಿವ
ಎಸ್ಬಿಐ ಮತ್ತು ಎಲ್ಐಸಿಯಲ್ಲಿರುವ ಬಹಳಷ್ಟು ಸಾರ್ವಜನಿಕರ ಹಣವು ಅದಾನಿ ಗ್ರೂಪ್ಗಳಲ್ಲಿ ಹೂಡಿಕೆಯಾಗಿದೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೋಟ್ಯಂತರ ಜನರ ಹಣವು ಎಲ್ಐಸಿ ಮತ್ತು ಎಸ್ಬಿಐನಂತರ ಸಂಸ್ಥೆಗಳ ಮೂಲಕ ಕೆಲ ಆಯ್ದ ಕಂಪನಿಗಳಿಗೆ ಸಂದಾಯವಾಗಿದೆ. ಈ ಕಂಪನಿ (ಅದಾನಿ ಎಂಟರ್ಪ್ರೈಸಸ್) ಬಗ್ಗೆ ಹಿಂಡನ್ಬರ್ಗ್ ರೀಸರ್ಚ್ ವರದಿಯಲ್ಲಿ ಎತ್ತಿತೋರಿಸಲಾಗಿದೆ. ಅದಾದ ಬಳಿಕ ಆ ಕಂಪನಿಯ ಷೇರುಗಳು ಬಿದ್ದಿವೆ. ಈ ಕಂಪನಿಯ ಮಾಲೀಕ ಯಾರು ಎಂದು ನಿಮಗೆ ಗೊತ್ತು. ಇಂಥ ಕಂಪನಿಗಳಿಗೆ ಸರ್ಕಾರ ಯಾಕೆ ಹಣ ಕೊಡುತ್ತಿದೆ? ಎಲ್ಐಸಿ, ಎಸ್ಬಿಐ ಮೊದಲಾದ ಸಂಸ್ಥೆಗಳು ಈ ಕಂಪನಿಗೆ ಹಣ ಕೊಟ್ಟಿವೆ. ಇದರ ತನಿಖೆ ಆಗಬೇಕು. ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ಆಗಬೇಕು ಅಥವಾ ಭಾರತೀಯ ಮುಖ್ಯ ನ್ಯಾಯಮೂರ್ತಿ ಮಾರ್ಗದರ್ಶನದಲ್ಲಿ ಸಮಿತಿ ರಚನೆಯಾಗಿ ಅದರಿಂದಲಾದರೂ ತನಿಖೆ ಆಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಬ್ಯಾಂಕ್ಗಳಿಂದ ವಿವರ ಕೋರಿದ ಆರ್ಬಿಐ
ಅದಾನಿ ಗ್ರೂಪ್ನ ವಿವಿಧ ಕಂಪನಿಗಳಿಗೆ ಯಾವ್ಯಾವ ಬ್ಯಾಂಕುಗಳು ಸಾಲ ನೀಡಿವೆ ಎಂದು ಆರ್ಬಿಐ ಮಾಹಿತಿ ಕಲೆಹಾಕುತ್ತಿದೆ. ಈ ಸಂಬಂಧ ಸ್ಥಳೀಯ ಬ್ಯಾಂಕುಗಳಿಂದ ಆರ್ಬಿಐ ವಿವರ ಕೋರುತ್ತಿದೆ.
ಇದನ್ನೂ ಓದಿ: Share Market: ಭಾರತದ ಷೇರುಪೇಟೆ ಗುರುವಾರವೂ ಕುಸಿತ; ಅದಾನಿ ಷೇರು ಇನ್ನಷ್ಟು ಇಳಿಕೆ
ಕ್ರೆಡಿಟ್ ಸ್ಯೂಸ್, ಸಿಟಿ ಗ್ರೂಪ್ ಕಂಪನಿಗಳು ಅದಾನಿ ಗ್ರೂಪ್ನಿಂದ ಬಾಂಡ್ಗಳನ್ನು ಅಡವಾಗಿ ಪಡೆದು ಸಾಲ ನೀಡುವುದನ್ನು ನಿಲ್ಲಿಸಿವೆ. ಈ ಬೆಳವಣಿಗೆಯಿಂದಾಗಿ ಆರ್ಬಿಐ ಅನಿವಾರ್ಯವಾಗಿ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂಬ ವಿಚಾರ ತಿಳಿದುಬಂದಿದೆ. ಆರ್ಬಿಐನಿಂದ ಈ ಬಗ್ಗೆ ಮಾಧ್ಯಮಗಳಿಗೆ ಅಧಿಕೃತವಾಗಿ ಪ್ರತಿಕ್ರಿಯೆ ಸಿಕ್ಕಿಲ್ಲ.
ನಿನ್ನೆ ಅದಾನಿ ಎಂಟರ್ಪ್ರೈಸಸ್ ಸಂಸ್ಥೆ ತನ್ನ ಎಫ್ಪಿಒ ಯೋಜನೆಯನ್ನು ರದ್ದು ಮಾಡಿತ್ತು. ಎಫ್ಪಿಒದಲ್ಲಿ ಭರ್ತಿ ಹೂಡಿಕೆಯಾಗಿದ್ದ 20 ಸಾವಿರ ಕೋಟಿ ರೂ ಹಣವನ್ನು ಜನರಿಗೆ ಮರಳಿಸಲೂ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಅದಾನಿ ಗ್ರೂಪ್ನ ಕಂಪನಿಗಳ ಷೇರುಗಳು ಕುಸಿಯುವುದು ಮುಂದುವರಿದಿದೆ. ಹಿಂಡನ್ಬರ್ಗ್ ರಿಸರ್ಚ್ನ ವರದಿ ಬಿಡುಗಡೆ ಆದ ಬಳಿಕ ಅದಾನಿ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಧುಮುಕುತ್ತಿವೆ. ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಂಡ ಅದಾನಿ ಗ್ರೂಪ್ನ ಕಂಪನಿಗಳಲ್ಲಿ ದೊಡ್ಡ ರಿಟರ್ನ್ಸ್ ನಿರೀಕ್ಷೆಯಲ್ಲಿ ಹಣ ಹೂಡಿಕೆ ಮಾಡಿದ್ದವರು ಈಗ ಆತಂಕಗೊಂಡಿದ್ದಾರೆ.