Share Market: ಭಾರತದ ಷೇರುಪೇಟೆ ಗುರುವಾರವೂ ಕುಸಿತ; ಅದಾನಿ ಷೇರು ಇನ್ನಷ್ಟು ಇಳಿಕೆ
BSE, NSE Indexes Fall On Feb 2nd: ಭಾರತದ ಷೇರು ಮಾರುಕಟ್ಟೆಗಳ ಕುಸಿತದ ಟ್ರೆಂಡ್ ಮುಂದುವರಿಯುತ್ತಿದೆ. ಬಜೆಟ್ ಮಂಡನೆ ದಿನ ಬೆಳಗ್ಗೆ ಏರಿಕೆ ಕಂಡು, ಬಳಿಕ ಸಂಜೆಯ ವೇಳೆ ಷೇರುಗಳು ಕುಸಿದಿದ್ದವು. ಇಂದು ಗುರುವಾರ ಬೆಳಗ್ಗೆಯೂ ಷೇರುಪೇಟೆ ಇಳಿಕೆ ಕಂಡಿದೆ.
ಮುಂಬೈ: ಭಾರತದ ಷೇರು ಮಾರುಕಟ್ಟೆಗಳ (Indian Share Markets) ಕುಸಿತದ ಟ್ರೆಂಡ್ ಮುಂದುವರಿಯುತ್ತಿದೆ. ಬಜೆಟ್ ಮಂಡನೆ (Union Budget 2023) ದಿನ ಬೆಳಗ್ಗೆ ಏರಿಕೆ ಕಂಡು, ಬಳಿಕ ಸಂಜೆಯ ವೇಳೆ ಷೇರುಗಳು ಕುಸಿದಿದ್ದವು. ಇಂದು ಗುರುವಾರ ಬೆಳಗ್ಗೆಯೂ ಷೇರುಪೇಟೆ ಇಳಿಕೆ ಕಂಡಿದೆ. ಬಿಎಸ್ಇ ಸೆನ್ಸೆಕ್ಸ್ನ ಎಸ್ ಅಂಡ್ ಪಿ ವಿಭಾಗವು (S&P BSE Sensex) ಗುರುವಾರದ ವಹಿವಾಟಿನಲ್ಲಿ ಶೇ. 0.7, ಅಂದರೆ 463 ಅಂಕಗಳಷ್ಟು ಇಳಿಕೆ ಕಂಡು 59,245 ಮಟ್ಟಕ್ಕೆ ಬಂದಿದೆ. ಇನ್ನು ನಿಫ್ಟಿ50 (Nifty50) ಸೂಚ್ಯಂಕ ಕೂಡ 163 ಅಂಕಗಳಷ್ಟು ಕಡಿಮೆಯಾಗಿ 17,450 ಮಟ್ಟ ತಲುಪಿದೆ. ನಿನ್ನೆ ಮಂಡನೆಯಾದ ಬಜೆಟ್ 2023ನಿಂದ ನಿರೀಕ್ಷಿದ ಕ್ರಮಗಳು ಬರದೇ ಇದ್ದದ್ದು ಈ ಕುಸಿತಕ್ಕೆ ಒಂದು ಕಾರಣವಾದರೆ ಷೇರುಮಾರುಕಟ್ಟೆಯ ಎಫ್ ಅಂಡ್ ಒ ಟ್ರೇಡಿಂಗ್ನ ವಾರದ ಗಡುವು ದಿನ ಮುಗಿದಿದ್ದರ ಪರಿಣಾಮವೂ ಈ ಕುಸಿತಕ್ಕೆ ಇನ್ನೊಂದು ಕಾರಣ ಎಂದು ಹೇಳಲಾಗುತ್ತಿದೆ.
ನಿರೀಕ್ಷೆಯಂತೆ ಅದಾನಿ ಗ್ರೂಪ್ನ ಹಲವು ಸಂಸ್ಥೆಗಳ ಷೇರುಗಳು ಕುಸಿತ ಕಂಡಿವೆ. ನಿನ್ನೆಯಷ್ಟೇ ಅದಾನಿ ಎಂಟರ್ಪ್ರೈಸಸ್ ತನ್ನ ಎಫ್ಪಿಒ ಯೋಜನೆಯನ್ನು ರದ್ದು ಮಾಡಿ ಹೂಡಿಕೆದಾರರಿಗೆ ಹಣ ವಾಪಸ್ ಮಾಡಲು ನಿರ್ಧರಿಸಿತ್ತು. ಇದರಿಂದಲೂ ಅವುಗಳ ಕುಸಿತ ಮುಂದುವರಿಕೆ ಆಗಿರಬಹುದು. ಅದಾನಿ ಕಂಪನಿಗಳ ಜೊತೆಗೆ ಎಚ್ಡಿಎಫ್ಸಿ ಲೈಫ್, ಎಸ್ಬಿಐ, ಯುಪಿಎಲ್, ಯುಪಿಎಲ್ ಮತ್ತು ಐಸಿಐಸಿಐ ಬ್ಯಾಂಕ್ನ ಷೇರುಗಳು ಗುರುವಾರದ ಬೆಳಗಿನ ವಹಿವಾಟಿನಲ್ಲಿ ಶೇ. 9.5ರವರೆಗೂ ಮೌಲ್ಯ ಕಳೆದುಕೊಂಡಿವೆ.
ಇದನ್ನೂ ಓದಿ: LIC: ಅದಾನಿ ಸಮೂಹದಲ್ಲಿ ಮಾಡಿರುವ ಹೂಡಿಕೆ ಎಷ್ಟು? ಕೊನೆಗೂ ಸ್ಪಷ್ಟನೆ ನೀಡಿದ ಎಲ್ಐಸಿ
ಇನ್ನೊಂದೆಡೆ ಎಸ್ಬಿಐ ಲೈಫ್, ಇನ್ಫೋಸಿಸ್, ಐಟಿಸಿ, ಟೆಕ್ ಮಹೀಂದ್ರ, ಹೆಚ್ಸಿಎಲ್ ಟೆಕ್ ಮೊದಲಾದ ಕಂಪನಿಗಳ ಷೇರುಗಳು ತುಸು ವೃದ್ಧಿ ಕಂಡಿವೆ.
ಅಮೆರಿಕದಲ್ಲಿ ಹಣದುಬ್ಬರ ಕಡಿಮೆಯಾಗುವ (Deflation) ಸಾಧ್ಯತೆ ಕಾಣುತ್ತಿದೆ ಎಂದು ಅಲ್ಲಿನ ಸೆಂಟ್ರಲ್ ಬ್ಯಾಂಕ್ ಮುಖ್ಯಸ್ಥ ಜಿರೋಮ್ ಪೋವೆಲ್ ಹೇಳಿದ ಬೆನ್ನಲ್ಲೇ ಏಷ್ಯಾದ ಕೆಲ ಷೇರುಪೇಟೆಗಳ ವಹಿವಾಟಿನಲ್ಲಿ ತುಸು ವ್ಯತ್ಯಯಗಳಾಗಿವೆ. ಚೀನಾದ ಶಾಂಘೈ ಕಾಂಪೋಸಿಟ್ ಸೂಚ್ಯಂಕ ಶೇ. 0.1ರಷ್ಟು ಕುಸಿತ ಕಂಡರೆ, ಹಾಂಕಾಂಗ್ನ ಹ್ಯಾಂಗ್ ಸೆಂಗ್, ಸೌತ್ ಕೊರಿಯಾದ ಕೋಸ್ಪಿ, ಜಪಾನ್ನ ನಿಕ್ಕೀ ಸೂಚ್ಯಂಕಗಳು ಹೆಚ್ಚಳ ಕಂಡಿವೆ.
ಇನ್ನು, ಅಮೆರಿಕದ ಷೇರುಮಾರುಕಟ್ಟೆಗಳ ಪೈಕಿ ನಾಸ್ಡಾಕ್ ಕಾಂಪೋಸಿಟ್ ಇಂಡೆಕ್ಸ್, ಎಸ್ ಅಂಡ್ ಪಿ 500, ಡೋ ಜೋನ್ಸ್ ಇಂಡೆಕ್ಸ್ ತುಸು ಮಟ್ಟಿಗೆ ಏರಿಕೆ ಕಂಡಿವೆ.
Published On - 10:08 am, Thu, 2 February 23