Budget 2023: ವಿದೇಶಿ ಮಾರುಕಟ್ಟೆಗಳಲ್ಲಿ ಹೂಡಿಕೆ, ವಿದೇಶ ಪ್ರವಾಸ ಕೈಗೊಳ್ಳುವವರಿಗೂ ತಟ್ಟಲಿದೆ ತೆರಿಗೆ ಬಿಸಿ; ಇಲ್ಲಿದೆ ವಿವರ
ತೆರಿಗೆ ಪರಿಷ್ಕರಣೆಯು ಅಂತಾರಾಷ್ಟ್ರೀಯ ಷೇರುಗಳ ವವಹಿವಾಟು ನಡೆಸುವ ಹಾಗೂ ಟೂರ್ ಪ್ಯಾಕೇಜ್ ಒದಗಿಸುವ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.
ನೀವು ನೇರವಾಗಿ ಅಥವಾ ಮ್ಯೂಚುವಲ್ ಫಂಡ್ (Mutual Fund) ಮೂಲಕ ವಿದೇಶಿ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತೀರಾ? ಹಾಗಿದ್ದರೆ ಶೇ 20ರ ವರೆಗೆ ತೆರಿಗೆ (tax) ಪಾವತಿಸಲು ಸಿದ್ಧರಾಗಿರಿ! ಹೂಡಿಕೆಗೆ ಮಾತ್ರವಲ್ಲ, ರಜಾ ದಿನಗಳಲ್ಲಿ ಟೂರಿಸ್ಟ್ ಪ್ಯಾಕೇಜ್ ಮೂಲಕ ವಿದೇಶ ಪ್ರವಾಸ ಕೈಗೊಳ್ಳುವ ಯೋಚನೆ ಇದ್ದರೂ ಶೇ 20ರ ವರೆಗಿನ ತೆರಿಗೆ ಪಾವತಿಗೆ ಸಿದ್ಧವಾಗಿರಿ. ಹೌದು, ಫೆಬ್ರವರಿ 1ರಂದು ಮಂಡನೆಯಾದ ಬಜೆಟ್ನಲ್ಲಿ (Budget 2023) ಹೊಸ ನಿಯಮ ಘೋಷಿಸಲಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲಿನ ಹೂಡಿಕೆಗೆ ‘ಲಿಬರಲೈಸ್ಡ್ ರೆಮಿಟೆನ್ಸ್ ಸ್ಕೀಮ್ (ಅನಿವಾಸಿ ಭಾರತೀಯರಿಗೆ ಭಾರತದಲ್ಲಿರುವ ನಿವಾಸಿಗಳು ಹಣ ಕಳುಹಿಸುವುದಕ್ಕೆ ಸಂಬಂಧಿಸಿದ ನಿಯಮ)’ ಅಡಿಯಲ್ಲಿ ಶೇ 20ರ ವರೆಗೆ ಮುಂಗಡ ತೆರಿಗೆ ಸಂಗ್ರಹಿಸುವ ಬಗ್ಗೆ ಉಲ್ಲೇಖಿಸಲಾಗಿದೆ. ಶಿಕ್ಷಣ ಮತ್ತು ಚಿಕಿತ್ಸೆಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.
ಟಿಸಿಎಸ್ (ಮೂಲದಿಂದ ಸಂಗ್ರಹಿಸುವ ತೆರಿಗೆ) ಆನ್ ರೆಮಿಟೆನ್ಸ್ನಲ್ಲಿ ಬದಲಾವಣೆ ಮಾಡಲಾಗಿಲ್ಲ. ಈ ವಹಿವಾಟಿನಲ್ಲಿ ಯಾವಾಗಲೂ ಮೂಲದಿಂದಲೇ ತೆರಿಗೆ ಸಂಗ್ರಹಿಸಲಾಗುತ್ತದೆ. ಇದೀಗ ತೆರಿಗೆ ದರವನ್ನು ಮಾತ್ರ ಶೇ 5ರಿಂದ 20ರ ವರೆಗೆ ಪರಿಷ್ಕರಣೆ ಮಾಡಲಾಗಿದೆ. ಈವರೆಗಿನ ನಿಯಮ ಪ್ರಕಾರ, ವಿದೇಶಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವವರು 7 ಲಕ್ಷ ರೂ.ಗಿಂತ ಮೇಲಿನ ಹೂಡಿಕೆಯಾಗಿದ್ದರೆ ಶೇ 5ರ ತೆರಿಗೆ ಪಾವತಿಸಿದರೆ ಸಾಕಾಗುತ್ತಿತ್ತು. ಇದರ ಪ್ರಕಾರ, 1 ಲಕ್ಷ ರೂ. ಹೂಡಿಕೆ ಮಾಡಿದ ಕೂಡಲೇ 20,000 ರೂ. ಅನ್ನು ಸರ್ಕಾರ ಮೂಲದಿಂದ ಸಂಗ್ರಹಿಸುವ ತೆರಿಗೆ ಎಂದು ಪರಿಗಣಿಸಿ ಲಾಕ್ ಮಾಡಿ ಇಡುತ್ತದೆ. ಇದನ್ನು ಐಟಿಆರ್ ಸಲ್ಲಿಸುವ ಸಂದರ್ಭದಲ್ಲಿ ಕ್ಲೇಮ್ ಮಾಡಿಕೊಳ್ಳಲು ಅವಕಾಶವಿದೆ.
ಇದನ್ನೂ ಓದಿ: Income Tax Slabs: ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ; ಗೊಂದಲವಿದೆಯಾ? ಇಲ್ಲಿದೆ ಹಳೆದು, ಹೊಸದರ ನಡುವಣ ಪೂರ್ಣ ವ್ಯತ್ಯಾಸ
ತೆರಿಗೆ ಪರಿಷ್ಕರಣೆಯು ಅಂತಾರಾಷ್ಟ್ರೀಯ ಷೇರುಗಳ ವವಹಿವಾಟು ನಡೆಸುವ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಏರ್ಪೇ, ವೆಸ್ಟೆಡ್, ಐಎನ್ಡಿ ಮನಿಯಂಥ ಕಂಪನಿಗಳು ಭಾರತೀಯ ಬಳಕೆದಾರರಿಗೆ ಸರಳವಾಗಿ ವಿದೇಶಿ ಮಾರುಕಟ್ಟೆಗಳಲ್ಲಿನ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತಿವೆ. ಈ ಕಂಪನಿಗಳ ವಹಿವಾಟಿನ ಮೇಲೆ ತೆರಿಗೆ ಪರಿಷ್ಕರಣೆ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.
ರಜಾ ದಿನಗಳ ಪ್ರವಾಸಕ್ಕೂ ತೆರಿಗೆ ಹೊರೆ
ಪರಿಷ್ಕೃತ ತೆರಿಗೆ ದರವು ವಿದೇಶಿ ಪ್ರವಾಸದ ಪ್ಯಾಕೇಜ್ಗಳಿಗೂ ಅನ್ವಯವಾಗಲಿದೆ. ಈ ಹಿಂದೆ ಶೇ 5ರ ತೆರಿಗೆ ಮಾತ್ರ ಅನ್ವಯವಾಗುತ್ತಿತ್ತು. ತೆರಿಗೆ ಪರಿಷ್ಕರಣೆ ನಮ್ಮ ವಹಿವಾಟಿಗೆ ದೊಡ್ಡ ಹೊಡೆತವಾಗಿದೆ ಎಂದು ಟೂರ್ ಪ್ಯಾಕೇಜ್ಗಳನ್ನು ಒದಗಿಸುವ ಕಂಪನಿಯೊಂದು ಅಭಿಪ್ರಾಯಪಟ್ಟಿದೆ. 1 ಲಕ್ಷ ರೂ. ಮೌಲ್ಯದ ಟೂರ್ ಪ್ಯಾಕೇಜ್ಗೆ ಶೇ 5ರ ಜಿಎಸ್ಟಿ, ಶೇ 5ರ ಟಿಸಿಎಸ್ (ಮೂಲದಿಂದ ಸಂಗ್ರಹಿಸುವ ತೆರಿಗೆ) ಪರಿಣಾಮ ಒಟ್ಟು ಮೊತ್ತ 1.1 ಲಕ್ಷ ರೂ. ಆಗಲಿದೆ. 5,000 ರೂ. ಜಿಎಸ್ಟಿ, 20,000 ಟಿಸಿಎಸ್ ಪಾವತಿಸಬೇಕಾಗುತ್ತದೆ. ಈ ಪೈಕಿ ಟಿಸಿಎಸ್ ರಿಫಂಡೇಬಲ್ ಆಗಿರುತ್ತದೆ ಎಂದು ಕಂಪನಿ ಹೇಳಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:22 am, Thu, 2 February 23