ದೇಶದ ಅತಿದೊಡ್ಡ ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಭಾಗಶಃ ನಿರಾಳ ಆಗುವಂಥ ಸುದ್ದಿ ಬಂದಿದೆ. ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಣೆ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್‌ಬಿಐ) ಅನುಮತಿ ನೀಡಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. ಎಚ್‌ಡಿಎಫ್‌ಸಿ ಬ್ಯಾಂಕ್ನಿಂದ ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ನೀಡದಂತೆ ಮತ್ತು ಡಿಜಿಟಲ್ 2.0 ಕಾರ್ಯಕ್ರಮದ ಅಡಿಯಲ್ಲಿ ತನ್ನ ಡಿಜಿಟಲ್ ವ್ಯವಹಾರ ಚಟುವಟಿಕೆಗಳು ಎಲ್ಲ ಆರಂಭಗಳನ್ನು ನಿಲ್ಲಿಸುವಂತೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ಯಾಂಕಿಂಗ್ ನಿಯಂತ್ರಕ ಸಂಸ್ಥೆಯಾದ ಆರ್‌ಬಿಐ ನಿರ್ದೇಶನ ನೀಡಿತು. ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಹಲವು ಬಾರಿ ಸ್ಥಗಿತಗೊಂಡಿದ್ದರಿಂದ ಬ್ಯಾಂಕ್ ಮೇಲೆ ನಿರ್ಬಂಧಗಳನ್ನು ಹೇರುವುದಕ್ಕೆ ಆರ್‌ಬಿಐ ನಿರ್ಧಾರಕ್ಕೆ ಬಂದಿತು.
“ಹೊಸ ಕಾರ್ಡ್‌ಗಳನ್ನು ನೀಡುವುದಕ್ಕೆ ಇದ್ದ ನಿರ್ಬಂಧಗಳನ್ನು ಕೊನೆಗೊಳಿಸಲಾಗಿದೆ ಮತ್ತು ಹೊಸ ಕ್ರೆಡಿಟ್ ಕಾರ್ಡ್‌ಗಳ ಸೋರ್ಸಿಂಗ್ ಅನ್ನು ಕೈಗೊಳ್ಳಲು ಆರ್‌ಬಿಐ ಈಗ ಬ್ಯಾಂಕ್‌ಗೆ ಅನುಮತಿ ನೀಡಿದೆ,” ಎಂದು ಮೂಲಗಳು ತಿಳಿಸಿವೆ. ಕ್ರೆಡಿಟ್ ಕಾರ್ಡ್ ವಿತರಣೆಯ ಮೇಲಿನ ನಿಷೇಧವು ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಭಾರಿ ಹೊಡೆತ ನೀಡಿತು. ಏಕೆಂದರೆ ಅದರ ಒಟ್ಟು ಕಾರ್ಡ್ ಬೇಸ್ ಕಳೆದ ಡಿಸೆಂಬರ್‌ನಲ್ಲಿ 1.54 ಕೋಟಿ ಇದ್ದದ್ದು, ಈ ವರ್ಷದ ಜೂನ್ ಹೊತ್ತಿಗೆ 1.48 ಕೋಟಿಗೆ ಇಳಿದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ದೇಶದ ಅತಿದೊಡ್ಡ ಕ್ರೆಡಿಟ್ ಕಾರ್ಡ್ ನೀಡುವ ಸಂಸ್ಥೆಯಾಗಿದೆ ಮತ್ತು ನಿಷೇಧದ ನಂತರವೂ ಅದೇ ಸ್ಥಾನದಲ್ಲಿಯೇ ಉಳಿದಿದೆ. ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಈ ನಿಷೇಧವು ಎಚ್‌ಡಿಎಫ್‌ಸಿ ಬ್ಯಾಂಕ್ ಮಾರುಕಟ್ಟೆ ಪಾಲನ್ನು ಕಳೆದುಕೊಳ್ಳುವಂತೆ ಮಾಡಿತು. ಏಕೆಂದರೆ ಅದರ ಕೆಲವು ಪ್ರತಿಸ್ಪರ್ಧಿಗಳು ಮುಂಚೂಣಿಗೆ ಬಂದವು.
ಜೂನ್‌ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ, ಬ್ಯಾಂಕ್‌ನ ಪೇಮೆಂಟ್ ವ್ಯವಹಾರದ ದೇಶದ ಮುಖ್ಯಸ್ಥ ಮತ್ತು ತಂತ್ರಜ್ಞಾನ ಪರಿವರ್ತನೆಯ ಉಸ್ತುವಾರಿ ವಹಿಸಿದ ಪರಾಗ್ ರಾವ್ ಮಾತನಾಡಿ, ಕ್ರೆಡಿಟ್ ಕಾರ್ಡ್ ವ್ಯವಹಾರದ ನಿರ್ಬಂಧ ತೆಗೆದರೆ ಆಕ್ರಮಣಕಾರಿಯಾಗಿ ಮರಳಲು ಬ್ಯಾಂಕ್ ಯೋಜನೆಯನ್ನು ಸಿದ್ಧಪಡಿಸಿದೆ. “ನಾವು ಮಾರುಕಟ್ಟೆಯಲ್ಲಿ ಹಿಡಿತವನ್ನು ಹೆಚ್ಚಿಸಿಕೊಳ್ಳಲಿದ್ದೇವೆ,” ಎಂದು ಹೇಳಿದ್ದರು. ಎಚ್‌ಡಿಎಫ್‌ಸಿ ಬ್ಯಾಂಕ್ ಕಳೆದ ಕೆಲವು ತಿಂಗಳಿಂದ ಲಯಾಬಿಲಿಟಿ ಗ್ರಾಹಕರನ್ನು ಆಕ್ರಮಣಕಾರಿಯಾಗಿ ಪಡೆಯುತ್ತಿದೆ, ನಿಷೇಧವನ್ನು ತೆಗೆದುಹಾಕಿದ ನಂತರ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಬಹುದು.
ನಿಷೇಧವನ್ನು ಜಾರಿಗೊಳಿಸುವಾಗಲೇ ಆರ್‌ಬಿಐ ತಿಳಿಸಿದ್ದಂತೆ, ನಿಯಮಾವಳಿಗಳನ್ನು ಸಮಾಧಾನಕರ ಎನಿಸುವಂತೆ ಅನುಸರಿಸುತ್ತಿದ್ದಲ್ಲಿ ಮಾತ್ರ ಅವಲೋಕನದ ನಂತರ ನಿರ್ಬಂಧ ತೆಗೆಯಲಾಗುವುದು ಎಂದು ಆರ್‌ಬಿಐ ತಿಳಿಸಿತ್ತು. ನಿಷೇಧದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್ ತಕ್ಷಣದ, ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿಯ ಮೇಲೆ ಕೇಂದ್ರೀಕರಿಸುವ ಯೋಜನೆಯನ್ನು ಕೆಲವು ತಿಂಗಳ ಹಿಂದೆ ಆರ್ಬಿಐಗೆ ಸಲ್ಲಿಸಿತ್ತು. “ಸುಧಾರಣೆಗಾಗಿ ಗುರುತಿಸಲಾದ ಸಂಗತಿಗಳನ್ನು ಬಲಪಡಿಸಲು ನಾವು ತಜ್ಞರು ಮತ್ತು ನಿಯಂತ್ರಕರೊಂದಿಗೆ ಕೆಲಸ ಮಾಡುತ್ತೇವೆ. ಆಂತರಿಕವಾಗಿ ನಮ್ಮನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಮತ್ತು ಬಲಶಾಲಿಯಾಗಿ ಹೊರಹೊಮ್ಮಲು ಇದೊಂದು ಅವಕಾಶ ಎಂದು ನಾವು ನೋಡುತ್ತಿದ್ದೇವೆ,” ಎಂದು 2020ರ ಡಿಸೆಂಬರ್‌ನಲ್ಲಿ ನಿಷೇಧ ಹೇರಿದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಂ.ಡಿ. ಮತ್ತು ಸಿಇಒ ಶಶಿ ಜಗದೀಶನ್ ಹೇಳಿದ್ದರು.
ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ತಾಂತ್ರಿಕ ಮೂಲಸೌಕರ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಬ್ಯಾಂಕ್ ತಂತ್ರಜ್ಞಾನ ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡುತ್ತಿದೆ, ಹೊಸ ಪ್ರತಿಭೆಗಳನ್ನು ತರುತ್ತಿದೆ, ಕ್ಲೌಡ್-ನೇಟಿವ್ ಸ್ಟಾಕ್‌ಗಳಿಗೆ ಪ್ರವೇಶಿಸುತ್ತಿದೆ. ಸಾಂಪ್ರದಾಯಿಕ ಏಕರೀತಿಯ ಐಟಿ ಮೂಲಸೌಕರ್ಯಗಳಿಂದ ಬದಲಾಗಿದ್ದು, ಉತ್ತಮ ಉತ್ಪನ್ನಗಳು ಮತ್ತು ಸೇವೆಗಳಿಗಾಗಿ ಸ್ಟ್ರಾಟೆಜಿಕ್ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ.
ಇದನ್ನೂ ಓದಿ: ಎಚ್‌ಡಿಎಫ್‌ಸಿ ಬ್ಯಾಂಕ್‌ನ ಹೊಸ ಡಿಜಿಟಲ್ ಕೊಡುಗೆಗಳು, ಕ್ರೆಡಿಟ್ ಕಾರ್ಡ್ ಗ್ರಾಹಕರ ನೋಂದಣಿಗೆ ಆರ್‌ಬಿಐ ನಿರ್ಬಂಧ
Penalty to HDFC Bank: ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ರೂ. 10 ಕೋಟಿ ದಂಡ ಹಾಕಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
(Now HDFC Bank Can Start To Issue Credit Card As RBI Eases Curb According To Sources)
Published On - 11:05 pm, Tue, 17 August 21