ವರ್ತಕರ ಮನವಿ ಹಿನ್ನೆಲೆ, ಯುಪಿಐ ಎಂಡಿಆರ್ ಶುಲ್ಕ ಜಾರಿ ಕ್ರಮ ದೀಪಾವಳಿ ನಂತರ ಎಂದ ಎನ್ಪಿಸಿಐ
ಕೆಲ ನಿರ್ದಿಷ್ಟ ಯುಪಿಐ ಪಾವತಿಗಳಿಗೆ ಎಂಡಿಆರ್ ಶುಲ್ಕ ಕ್ರಮವನ್ನು ದೀಪಾವಳಿ ಹಬ್ಬದ ಬಳಿಕ ಜಾರಿ ಮಾಡುವುದಾಗಿ ಎನ್ಪಿಸಿಐ ಹೇಳಿದೆ. ಅಕ್ಟೋಬರ್ 15ರಿಂದ ಇದನ್ನು ಜಾರಿ ಮಾಡಬೇಕಿತ್ತು. ಆದರೆ, ಹಬ್ಬದ ಸೀಸನ್ ಆದ್ದರಿಂದ ಜಾರಿ ಕ್ರಮವನ್ನು ಮುಂದೂಡಲಾಗಿದೆ. ಗ್ರಾಹಕರಿಂದ ವರ್ತಕರಿಗೆ ಆಗುವ 2,000 ರೂ ಮೇಲ್ಪಟ್ಟ ಯುಪಿಐ ಪಾವತಿಗೆ ಶೇ. 0.40 ಎಂಡಿಆರ್ ವಿಧಿಸಲು ನಿರ್ಧರಿಸಲಾಗಿದೆ.

ನವದೆಹಲಿ, ಅಕ್ಟೋಬರ್ 13: ಇದೇ 15ನೇ ತಾರೀಖಿನಿಂದ ಜಾರಿಯಾಗಬೇಕಿದ್ದ ಯುಪಿಐ ಎಂಡಿಆರ್ ಶುಲ್ಕ ಕ್ರಮವನ್ನು ಮುಂದೂಡಲಾಗಿದೆ. ವರ್ತಕರಿಂದ ಮನವಿ ಬಂದ ಹಿನ್ನೆಲೆಯಲ್ಲಿ ಎಂಡಿಆರ್ ಶುಲ್ಕ ಕ್ರಮವನ್ನು ದೀಪಾವಳಿ ಹಬ್ಬದ ಹಬ್ಬದ ನಂತರ ತೆಗೆದುಕೊಳ್ಳಲಾಗುತ್ತದೆ ಎಂದು ಎನ್ಪಿಸಿಐ ಹೇಳಿದೆ. ದೀಪಾವಳಿ ಹಬ್ಬ ನವೆಂಬರ್ 7ರಿಂದ 10ರವರೆಗೂ ಇದೆ. ಯುಪಿಐ ಪಾವತಿ ಮೇಲಿನ ಎಂಡಿಆರ್ ಶುಲ್ಕ ಕ್ರಮವನ್ನು ನವೆಂಬರ್ ಎರಡನೇ ವಾರದಲ್ಲಿ ಜಾರಿಗೆ ತರಲಾಗಬಹುದು.
‘ಹಬ್ಬದ ಸೀಸನ್ ಗಮನದಲ್ಲಿಟ್ಟುಕೊಂಡು, ನಿರ್ದಿಷ್ಟ ಪಿ2ಎಂ (ವ್ಯಕ್ತಿಯಿಂದ ವರ್ತಕರಿಗೆ) ಯುಪಿಐ ಪೇಮೆಂಟ ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಕ್ರಮವನ್ನು ದೀಪಾವಳಿ ಹಬ್ಬವಾದ ಕೂಡಲೇ ಜಾರಿಗೆ ತರಲು ಯುಪಿಐ ಸೇವೆಗಳ ಸ್ಟೀರಿಂಗ್ ಕಮಿಟಿ ಇವತ್ತು (ಅ. 13) ನಿರ್ಧರಿಸಿದೆ’ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (ಎನ್ಪಿಸಿಐ) ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ. ದೀಪಾವಳಿ ಹಬ್ಬದ ನಂತರ ಯಾವ ದಿನದಿಂದ ಇದು ಜಾರಿಯಾಗುತ್ತದೆ ಎಂಬುದನ್ನು ಖಚಿತಪಡಿಸಲಾಗಿಲ್ಲ. ಮುಂದೆ ಈ ಸಂಬಂಧ ತಿಳಿಸಲಾಗುವುದು ಎಂದಷ್ಟೇ ಎನ್ಪಿಸಿಐ ಹೇಳಿದೆ.
ಇದನ್ನೂ ಓದಿ: ಜಿಯೋದ ಎಐ ಕನ್ನಡಕ..! ಯುಪಿಐ ಪಾವತಿ, ಲೈವ್ ಟ್ರಾನ್ಸ್ಲೇಶನ್, ಲೈವ್ ಕಾಮೆಂಟರಿ ಮಾಡಬಲ್ಲುದು ಈ ಸ್ಮಾರ್ಟ್ ಗ್ಲಾಸ್
ಕಳೆದ ತಿಂಗಳು ಯುಪಿಐ ಸ್ಟೀರಿಂಗ್ ಕಮಿಟಿ ಯುಪಿಐ ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಕ್ರಮವನ್ನು ಪ್ರಕಟಿಸಿತ್ತು. ಅಕ್ಟೋಬರ್ 15ರಿಂದ ಅದು ಜಾರಿಯಾಗಬೇಕಿತ್ತು. ಗ್ರಾಹಕರಿಂದ ವರ್ತಕರು ಸ್ವೀಕರಿಸುವ 2,000 ರೂ ಮೇಲ್ಪಟ್ಟ ಮೊತ್ತದ ಯುಪಿಐ ಪಾವತಿಗಳಿಗೆ ಶೇ. 0.4ರಷ್ಟು ಎಂಡಿಆರ್ ಶುಲ್ಕ ಹಾಕಲಾಗುವುದು ಎಂದು ಘೋಷಿಸಲಾಗಿದೆ.
2,000 ರೂ ಪಾವತಿಗೆ 8 ರೂ, 10,000 ರೂ ಪಾವತಿಗೆ 40 ರೂ ಹೀಗೆ 75,000 ರೂವರೆಗೂ ಶುಲ್ಕ ಇರುತ್ತದೆ. 75,000 ರೂಗೆ 300 ರೂ ಎಂಡಿಆರ್ ಶುಲ್ಕ ಆಗುತ್ತದೆ. ಅದಕ್ಕೂ ಮೇಲ್ಪಟ್ಟ ಪಾವತಿಗೆ ಗರಿಷ್ಠ 300 ರೂ ಶುಲ್ಕವೇ ಮುಂದುವರಿಯುತ್ತದೆ. ಇದು ದೊಡ್ಡ ವ್ಯಾಪಾರಿಗಳು ಪಡೆಯುವ ಯುಪಿಐ ಪಾವತಿಗಳಿಗೆಯಷ್ಟೇ ವಿಧಿಸುವ ಶುಲ್ಕ. ಗ್ರಾಹಕರಿಗೆ ಈ ಶುಲ್ಕ ಇರುವುದಿಲ್ಲ.
ಹಾಗೆಯೇ, ರೈಲ್ವೆ, ಇನ್ಷೂರೆನ್ಸ್, ಟೆಲಿಕಾಂ, ಪೆಟ್ರೋಲ್, ಕೃಷಿ ಸಾಮಗ್ರಿಗಳ ಪಾವತಿಗಳಿಗೆ ಗರಿಷ್ಠ 5 ರೂ ಮಾತ್ರವೇ ಎಂಡಿಆರ್ ಶುಲ್ಕ ವಿಧಿಸಲಾಗುತ್ತದೆ.
ಇದನ್ನೂ ಓದಿ: ಯುಪಿಐ ಎಂಡಿಆರ್ ಶುಲ್ಕ; ಶೇ. 0.40 ಬದಲು ಶೇ. 0.08 ಶುಲ್ಕ ವಿಧಿಸಬಹುದು: ಐಐಟಿ ಬಾಂಬೆ ವರದಿ ಸಲಹೆ
ಎಂಡಿಆರ್ ಕ್ರಮಕ್ಕೆ ಹಲವರಿಂದ ವಿರೋಧ
ಯುಪಿಐ ಪಾವತಿ ಮೇಲೆ ಎಂಡಿಆರ್ ಶುಲ್ಕ ವಿಧಿಸುವುದನ್ನು ಹಲವರು ವಿರೋಧಿಸಿದ್ದಾರೆ. ಯುಪಿಐ ಪಾವತಿ ಸಂಪೂರ್ಣ ಉಚಿತ ಇರಬೇಕು. ವ್ಯಾಪಾರಿಗಳಿಗೆ ಎಂಡಿಆರ್ ವಿಧಿಸಿದರೂ ಅದು ಪರೋಕ್ಷವಾಗಿ ಗ್ರಾಹಕರಿಗೆ ಹೊರೆ ವರ್ಗಾವಣೆ ಆಗುತ್ತದೆ. ಹೀಗಾಗಿ, ಯುಪಿಐ ಪಾವತಿ ವ್ಯವಸ್ಥೆ ಸಂಪೂರ್ಣ ಉಚಿತ ಇರಬೇಕು ಎಂಬುದು ಹಲವರ ಆಗ್ರಹ.
ಐಐಟಿ ಬಾಂಬೆಯ ತಂಡವೊಂದು ಯುಪಿಐ ಎಂಡಿಆರ್ ಶುಲ್ಕವನ್ನು ಶೇ. 0.40 ಬದಲು ಶೇ. 0.08 ಎಂದು ನಿಗದಿ ಮಾಡುವುದು ಲೇಸು ಎಂದು ಶಿಫಾರಸು ಮಾಡಿದೆ. ಯುಪಿಐ ಇಕೋಸಿಸ್ಟಂ ಅಭಿವೃದ್ಧಿಗೆ ಆಗುವ ವೆಚ್ಚವನ್ನು ಬ್ಯಾಂಕುಗಳು ಬೇರೆ ಆದಾಯದಿಂದ ಭರಿಸಬಹುದು ಎಂದೂ ಸಲಹೆ ನೀಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




