AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಪಿಐ ಎಂಡಿಆರ್ ಶುಲ್ಕ; ಶೇ. 0.40 ಬದಲು ಶೇ. 0.08 ಶುಲ್ಕ ವಿಧಿಸಬಹುದು: ಐಐಟಿ ಬಾಂಬೆ ವರದಿ ಸಲಹೆ

ಯುಪಿಐ ಪಾವತಿ ಮೇಲೆ ಶೇ. 0.40ರಷ್ಟು ಎಂಡಿಆರ್ ಶುಲ್ಕ ಬೇಡ. ಅದು ಶೇ. 0.08 ಮಾತ್ರ ಇರಲಿ ಎಂದು ಐಐಟಿ ಬಾಂಬೆ ವರದಿಯೊಂದು ಸಲಹೆ ನೀಡಿದೆ. ಐಐಟಿ ಬಾಂಬೆ ಪ್ರೊಫೆಸರ್ ಆಶೀಶ್ ದಾಸ್ ಮತ್ತು ಮಾಜಿ ಆರ್​ಬಿಐ ಅಧಿಕಾರಿ ಪ್ರಗ್ಯಾದಾಸ್ ಬಿಡುಗಡೆ ಮಾಡಿದ ವರದಿಯಲ್ಲಿ ಈ ಸಲಹೆ ನೀಡಲಾಗಿದೆ. ಯುಪಿಐ ಪಾವತಿ ಮೇಲೆ ಎಂಡಿಆರ್ ಶುಲ್ಕ ವಿಧಿಸುವ ಕ್ರಮ ನವೆಂಬರ್​ನಲ್ಲಿ ಜಾರಿಗೆ ಬರಬಹುದು ಎನ್ನಲಾಗಿದೆ.

ಯುಪಿಐ ಎಂಡಿಆರ್ ಶುಲ್ಕ; ಶೇ. 0.40 ಬದಲು ಶೇ. 0.08 ಶುಲ್ಕ ವಿಧಿಸಬಹುದು: ಐಐಟಿ ಬಾಂಬೆ ವರದಿ ಸಲಹೆ
ಯುಪಿಐImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 12, 2026 | 3:01 PM

Share

ನವದೆಹಲಿ, ಅಕ್ಟೋಬರ್ 12: ನಿರ್ದಿಷ್ಟ ಯುಪಿಐ ವಹಿವಾಟುಗಳ ಮೇಲೆ ಶೇ. 0.40 ಎಂಡಿಆರ್ ಶುಲ್ಕ ವಿಧಿಸುವ ಪ್ರಸ್ತಾಪ ಇದೆ. ಆದರೆ, ಎಂಡಿಆರ್ ಶುಲ್ಕ ವಿಧಿಸುವುದೇ ಆದರೆ ಅದನ್ನು ಶೇ 0.08ರಷ್ಟು ಎಂದು ನಿಗದಿ ಮಾಡಿ ಎಂದು ಐಐಟಿ ಬಾಂಬೆಯ ವರದಿಯೊಂದು ಶಿಫಾರಸು ಮಾಡಿದೆ. ಯುಪಿಐ ಪ್ಲಾಟ್​ಫಾರ್ಮ್ ನಿರ್ವಹಣೆಗೆ ಆಗುವ ವೆಚ್ಚವನ್ನು ಬ್ಯಾಂಕುಗಳು ಸ್ವಂತವಾಗಿ ಭರಿಸಬೇಕು ಎಂದೂ ವರದಿಯಲ್ಲಿ ಸಲಹೆ ನೀಡಲಾಗಿದೆ. ಐಐಟಿ ಬಾಂಬೆಯ ಗಣಿತ ವಿಭಾಗದ ಪ್ರೊಫೆಸರ್ ಆಶೀಷ್ ದಾಸ್ ಹಾಗೂ ಮಾಜಿ ಆರ್​ಬಿಐ ಅಧಿಕಾರಿ ಪ್ರಗ್ಯಾ ದಾಸ್ ಅವರು ಅಧ್ಯಯನ ನಡೆಸಿ ಈ ವರದಿ ಬರೆದಿದ್ದಾರೆ.

ಏನಿದು ಯುಪಿಐ ಎಂಡಿಆರ್?

ವರ್ತಕರಿಗೆ ಗ್ರಾಹಕರು ಮಾಡುವ 2,000 ರೂ ಮೇಲ್ಪಟ್ಟ ಮೌಲ್ಯದ ಹಣ ಪಾವತಿಗೆ ಶೇ. 0.40 ಎಂಡಿಆರ್ ಶುಲ್ಕ ವಿಧಿಸಲಾಗುವುದು ಎಂದು ಎನ್​ಪಿಸಿಐ ಪ್ರಸ್ತಾಪಿಸಿದೆ. ಅಕ್ಟೋಬರ್ 15ರಿಂದ ಇದು ಜಾರಿಗೆ ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ನವೆಂಬರ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪ್ರಸ್ತಾಪಿತ ನಿಯಮದ ಪ್ರಕಾರ, 2,000 ರೂ ಪಾವತಿಗೆ ಶೇ. 0.4 ಶುಲ್ಕ ಎಂದರೆ 8 ರೂ ಆಗುತ್ತದೆ. 10,000 ರೂ ಪಾವತಿಗೆ 40 ರೂ ಆಗುತ್ತದೆ. 75,000 ರೂ ಮೇಲ್ಪಟ್ಟ ಪಾವತಿಗೆ ಗರಿಷ್ಠ 300 ರೂ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಶ್ರೀಮಂತ ದೇಶಗಳ ಅತೀ ಬಡವರ ಬಳಿ ಇದೆ ಭಾರತದ ಅತೀ ಶ್ರೀಮಂತರಿಗಿಂತ ಹೆಚ್ಚು ಸಂಪತ್ತು: ವಿಶ್ವಬ್ಯಾಂಕ್ ವರದಿ

ಕರೆಂಟ್ ಬಿಲ್, ಲೈಟ್ ಬಿಲ್, ಇನ್ಷೂರೆನ್ಸ್, ಗ್ಯಾಸ್ ಇತ್ಯಾದಿ ಯುಟಿಲಿಟಿ ಮತ್ತು ಅಗತ್ಯ ಸೇವೆಗಳಿಗೆ ಮಾಡಲಾಗುವ ಯುಪಿಐ ಪೇಮೆಂಟ್​ಗಳಿಗೆ ಶೇ. 0.04 ಎಂಡಿಆರ್ ಶುಲ್ಕ ನಿಗದಿ ಮಾಡಲಾಗಿದೆ.

ಐಐಟಿ ಬಾಂಬೆ ಸಲಹೆ ನೀಡಿರುವ ಶುಲ್ಕ ಎಷ್ಟು?

ಐಐಟಿ ಬಾಂಬೆ ತಯಾರಿಸುವ ವರದಿಯು ಎಂಡಿಆರ್ ಶುಲ್ಕವನ್ನು ಶೇ. 0.40 ಬದಲು ಶೇ. 0.08ಕ್ಕೆ ಇಳಿಸಬೇಕು ಎಂದು ಸಲಹೆ ನೀಡಿದೆ. 2,000 ರೂಗೆ ಶೇ. 0.08 ಎಂದರೆ 1.60 ರೂ ಆಗುತ್ತದೆ. 10,000 ರೂ ಪೇಮೆಂಟ್​ಗೆ 8 ರೂ ಶುಲ್ಕವಾಗುತ್ತದೆ.

ಕಾಸಾ ಠೇವಣಿಗಳಿಂದ ಬರುವ ಆದಾಯವನ್ನು ಬ್ಯಾಂಕುಗಳು ಬಳಸಿಕೊಳ್ಳಲಿ

ಬ್ಯಾಂಕುಗಳು CASA ಠೇವಣಿಗಳಿಗೆ ಕಡಿಮೆ ಬಡ್ಡಿದರ ನೀಡುತ್ತವೆ. ಈ ರೀತಿ ಕಡಿಮೆ ಬಡ್ಡಿಯ ಠೇವಣಿಗಳಿಂದ ಬ್ಯಾಂಕುಗಳು 2025-26ರಲ್ಲಿ 4.85 ಲಕ್ಷ ಕೋಟಿ ರೂ ಲಾಭ ಮಾಡಿಕೊಂಡಿವೆ. ಯುಪಿಐ ಇಕೋಸಿಸ್ಟಂ ಅನ್ನು ನಿರ್ವಹಿಸಲು ಬ್ಯಾಂಕುಗಳು ಎಂಡಿಆರ್ ಬದಲು ಈ ಕಾಸಾ ಆದಾಯದ ಶೇ. 3 ಭಾಗವನ್ನು ಬಳಸಬಹುದು ಎಂದು ಐಐಟಿ ಬಾಂಬೆಯ ತಜ್ಞರು ಮತ್ತೊಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಜಿಯೋದ ಎಐ ಕನ್ನಡಕ..! ಯುಪಿಐ ಪಾವತಿ, ಲೈವ್ ಟ್ರಾನ್ಸ್​ಲೇಶನ್, ಲೈವ್ ಕಾಮೆಂಟರಿ ಮಾಡಬಲ್ಲುದು ಈ ಸ್ಮಾರ್ಟ್ ಗ್ಲಾಸ್

ಯುಪಿಐ ಒಂದು ಅಗತ್ಯ ಸೇವೆ ಎಂದು ಬ್ಯಾಂಕುಗಳು ಭಾವಿಸಲಿ

ಬ್ಯಾಂಕ್ ಆಪರೇಷನ್ಸ್​ಗೆ ಕೋರ್ ಬ್ಯಾಂಕಿಂಗ್ ಸಿಸ್ಟಂ (ಸಿಬಿಎಸ್) ಬಹಳ ಮುಖ್ಯ. ಬ್ಯಾಂಕುಗಳು ಸಿಬಿಎಸ್ ಅನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಅನಿವಾರ್ಯ. ಯುಪಿಐ ಟೆಕ್ನಾಲಜಿಯನ್ನೂ ಬ್ಯಾಂಕುಗಳು ಅತ್ಯಗತ್ಯ ಸೇವೆ ಎಂದು ಪರಿಗಣಿಸಲಿ ಎಂದು ಐಐಟಿ ಬಾಂಬೆ ವರದಿಯಲ್ಲಿ ಹೇಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More