ಓಲಾ ಕಂಪನಿಯು 400-500 ಮಂದಿ ಸಿಬ್ಬಂದಿಯನ್ನು ವಜಾಗೊಳಿಸಲು ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವೆಚ್ಚ ಕಡಿತ ಮಾಡಲು ಸ್ಟಾರ್ಟಪ್ಗಳು ಸಿಬ್ಬಂದಿ ವಜಾಗೊಳಿಸಿರುವುದು ಇದೇ ಮೊದಲ ಬಾರಿ ಅಲ್ಲ. ಹಣವನ್ನು ಉಳಿಸುವ ಪ್ರಯತ್ನದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ವಿವಿಧ ಕೈಗಾರಿಕೆಗಳ ಸಿಬ್ಬಂದಿಯನ್ನು ವಜಾಗೊಳಿಸಿವೆ.
ದಕ್ಷತೆಯನ್ನು ಹೆಚ್ಚಿಸಿ, ತಮ್ಮ ವೆಚ್ಚದ ರಚನೆ ಸುಧಾರಿಸಿ ಮತ್ತು ಬೆಳವಣಿಗೆ ವೇಗಗೊಳಿಸಲು ಕ್ರಮಕೈಗೊಳ್ಳುತ್ತಿದ್ದೇವೆ. ಹೆಚ್ಚು ಪರಿಣಾಮಕಾರಿ, ಗ್ರಾಹಕ ಕೇಂದ್ರಿತವಾಗಿಸುವತ್ತ ನಮ್ಮ ಪ್ರಯತ್ನ ಮುಂದುವರಿದಿದೆ ಎಂದು ಓಲಾ ತಿಳಿಸಿದೆ.
ಕೊರೊನಾ ಸೋಮಕಿನಿಂದಾಗಿ ಉಂಟಾದ ಅಡೆತಡೆಗಳಿಂದಾಗಿ ಆದಾಯವು ಶೇಕಡಾ 95 ರಷ್ಟು ಕುಸಿದಿದ್ದರಿಂದ ಓಲಾ ಸುಮಾರು 1,400 ಉದ್ಯೋಗಿಗಳನ್ನು 2020ರಲ್ಲಿ ವಜಾಗೊಳಿಸಿತ್ತು.
ಕಳೆದ ತಿಂಗಳು, ಓಲಾ ಎಲೆಕ್ಟ್ರಿಕ್ FY2022-23 ರ ಮೊದಲ ಎರಡು ತಿಂಗಳಲ್ಲಿ 500 ಕೋಟಿ ಆದಾಯವನ್ನು ದಾಟಿದೆ ಎಂದು ಉಲ್ಲೇಖಿಸಿದ್ದು, ಈ ವರ್ಷದ ಅಂತ್ಯದ ವೇಳೆಗೆ USD 1 ಶತಕೋಟಿ (ರೂ. 7,800 ಕೋಟಿಗೂ ಹೆಚ್ಚು) ಆದಾಯವನ್ನು ದಾಟುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಓಲಾ ಕಾರ್ಸ್ ಮತ್ತು ಓಲಾ ಡ್ಯಾಶ್ ಅನ್ನು ಮುಚ್ಚಲು ಕಂಪನಿಯು ನಿರ್ಧರಿಸಿದ ದಿನಗಳ ನಂತರ ಈ ಕ್ರಮಕ್ಕೆ ಮುಂದಾಗಿದ್ದಾರೆ, ಓಲಾ ಎಲೆಕ್ಟ್ರಿಕ್ ಮಾರಾಟ ಮತ್ತು ಸೇವಾ ಜಾಲವನ್ನು ವಿಸ್ತರಿಸಲು ಕಂಪನಿಯು ತನ್ನ ಮೂಲಸೌಕರ್ಯ, ತಂತ್ರಜ್ಞಾನ ಮತ್ತು ಓಲಾ ಕಾರ್‌ಗಳ ಸಾಮರ್ಥ್ಯಗಳನ್ನು ಮರುರೂಪಿಸಿದೆ.
ಇಲ್ಲಿಯವರೆಗೆ, ಓಲಾ ಓಲಾ ಕೆಫೆ, ಫುಡ್ ಪಾಂಡಾ, ಓಲಾ ಫುಡ್ಸ್ ಮತ್ತು ಓಲಾ ಡ್ಯಾಶ್ ಅನ್ನು ಮುಚ್ಚಿದೆ. ಓಲಾದಲ್ಲಿ ಪ್ರಸ್ತುತ 5 ಸಾವಿರ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Published On - 11:14 am, Wed, 6 July 22