ICICI Bank: ಐಸಿಐಸಿಐ ಬ್ಯಾಂಕ್​ಗೆ ಮೂರನೇ ತ್ರೈಮಾಸಿಕದಲ್ಲಿ ಶೇ 25ರಷ್ಟು ಲಾಭ ಹೆಚ್ಚಳ

| Updated By: Srinivas Mata

Updated on: Jan 22, 2022 | 9:45 PM

ಖಾಸಗಿ ವಲಯದ ಪ್ರಮುಖ ಬ್ಯಾಂಕ್​ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್​​ 2022ರ ಹಣಕಾಸು ವರ್ಷದ ಅಕ್ಟೋಬರ್​ನಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ 25ರಷ್ಟು ಹೆಚ್ಚಿನ ಲಾಭ ಗಳಿಸಿದೆ.

ICICI Bank: ಐಸಿಐಸಿಐ ಬ್ಯಾಂಕ್​ಗೆ ಮೂರನೇ ತ್ರೈಮಾಸಿಕದಲ್ಲಿ ಶೇ 25ರಷ್ಟು ಲಾಭ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಐಸಿಐಸಿಐ ಬ್ಯಾಂಕ್ (ICICI Bank) ಜನವರಿ 22ನೇ ತಾರೀಕಿನ ಶನಿವಾರದಂದು ಅಕ್ಟೋಬರ್​ನಿಂದ ಡಿಸೆಂಬರ್ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 25ರಷ್ಟು ಹೆಚ್ಚು ಲಾಭವನ್ನು ದಾಖಲಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಐಸಿಐಸಿಐ ಬ್ಯಾಂಕ್ 6,194 ಕೋಟಿ ರೂಪಾಯಿ ಲಾಭವನ್ನು ವರದಿ ಮಾಡಿದೆ. ಆದರೆ ನಿವ್ವಳ ಬಡ್ಡಿ ಆದಾಯವು FY21 Q3ರಲ್ಲಿ ದಾಖಲಿಸಿದ್ದ ರೂ.9,912 ಕೋಟಿಗಳಿಂದ FY22 Q3ರಲ್ಲಿ ಶೇಕಡಾ 23ರಷ್ಟು ಜಾಸ್ತಿಯಾಗಿ, 12,236 ಕೋಟಿ ರೂಪಾಯಿಗಳಿಗೆ ತಲುಪಿದೆ. ಬಡ್ಡಿಯೇತರ ಆದಾಯ ಅಥವಾ ಇತರ ಆದಾಯವು ಇದೇ ತ್ರೈಮಾಸಿಕದಲ್ಲಿ ಶೇಕಡಾ 25ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಇದ್ದ ರೂ. 3,921 ಕೋಟಿಯಿಂದ ರೂ. 4,899 ಕೋಟಿಗೆ ಏರಿಕೆಯಾಗಿದೆ.

ಡಿಸೆಂಬರ್ 31, 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಐಸಿಐಸಿಐ ಬ್ಯಾಂಕ್‌ನ ಪ್ರಮುಖ ಕಾರ್ಯನಿರ್ವಹಣಾ ಲಾಭ (ಪ್ರಾವಿಷನ್ ಮತ್ತು ತೆರಿಗೆಗೆ ಮುಂಚಿನ ಲಾಭ, ಟ್ರೆಷರಿ ಆದಾಯವನ್ನು ಹೊರತುಪಡಿಸಿ) ವರ್ಷದಿಂದ ವರ್ಷಕ್ಕೆ ಶೇ 25ರಷ್ಟು ಜಾಸ್ತಿಯಾಗಿ, ರೂ. 10,060 ಕೋಟಿಗೆ ಏರಿಕೆಯಾಗಿದೆ ಎಂದು ಬ್ಯಾಂಕ್​ನಿಂದ ನಿಯಂತ್ರಕರ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. Q3FY22ರಲ್ಲಿ ಬ್ಯಾಂಕ್​ನ ನಿವ್ವಳ ಬಡ್ಡಿ ಮಾರ್ಜಿನ್​ ಶೇ 3.96 ಇದ್ದರೆ Q3FY21ರಲ್ಲಿ ಶೇ 3.67 ಇತ್ತು ಮತ್ತು ಸೆಪ್ಟೆಂಬರ್ 30, 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡಾ 4ರಲ್ಲಿ ಇತ್ತು.

ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಐಸಿಐಸಿಐ ಬ್ಯಾಂಕ್​ನ ನಿವ್ವಳ ಎನ್​ಪಿಎ ಅನುಪಾತವು ಸೆಪ್ಟೆಂಬರ್ 30, 2021ಕ್ಕೆ ಶೇಕಡಾ 0.99ರಿಂದ ಡಿಸೆಂಬರ್ 31, 2021ಕ್ಕೆ ಶೇಕಡಾ 0.85ಕ್ಕೆ ಇಳಿಕೆಯಾಗಿದೆ. ಇದು ಮಾರ್ಚ್ 31, 2014ರಿಂದ ಈಚೆಗೆ ಕಡಿಮೆಯಾಗಿದೆ. ಡಿಸೆಂಬರ್ 31, 2021ರಂದು ಏಕೀಕೃತ ಆಧಾರದ ಮೇಲೆ ಐಸಿಐಸಿಐ ಬ್ಯಾಂಕ್​ನ ಒಟ್ಟು ಬಂಡವಾಳ ಸಮರ್ಪಕ ಅನುಪಾತವು (ಕ್ಯಾಪಿಟಲ್ ಅಡಿಕ್ವಸಿ ರೇಷಿಯೋ) ಶೇ 19.79 ಶೇಮತ್ತು ಶ್ರೇಣಿ-1 ಬಂಡವಾಳದ ಅನುಪಾತವು ಶೇ 18.81 ಆಗಿತ್ತು. ತ್ರೈಮಾಸಿಕದಲ್ಲಿ ಬ್ಯಾಂಕಿನ ಪ್ರಾವಿಷನ್​ಗಳು (ತೆರಿಗೆಗೆ ಪ್ರಾವಿಷನ್ ಹೊರತುಪಡಿಸಿ) ವರ್ಷದಿಂದ ವರ್ಷಕ್ಕೆ ಶೇ 27ರಷ್ಟು ಇಳಿಕೆಯಾಗಿದ್ದು, Q3-2021ರಲ್ಲಿ ರೂ. 2,742 ಕೋಟಿಯಿಂದ Q3-2022ರಲ್ಲಿ ರೂ. 2,007 ಕೋಟಿಗೆ ಇಳಿದಿದೆ.

ಡಿಸೆಂಬರ್ 31, 2021ರವರೆಗಿನ ಆರ್ಥಿಕ ವರ್ಷದಲ್ಲಿ ಐಸಿಐಸಿಐ ಬ್ಯಾಂಕ್‌ನ ತೆರಿಗೆಯ ನಂತರದ ಲಾಭವು (PAT) ಹಿಂದಿನ ವರ್ಷದ ಇದೇ ಅವಧಿಯಲ್ಲಿ ರೂ. 11,790 ಕೋಟಿ ಇದ್ದದ್ದು ಅಲ್ಲಿಂದ ವರ್ಷದಿಂದ ವರ್ಷಕ್ಕೆ ರೂ. 16,321 ಕೋಟಿಗೆ ಶೆಕಡಾ 38ರಷ್ಟು ಏರಿಕೆಯಾಗಿದೆ. ಏಕೀಕೃತ ಆಧಾರದ ಮೇಲೆ ಐಸಿಐಸಿಐ ಬ್ಯಾಂಕ್‌ನ ತೆರಿಗೆಯ ನಂತರದ ಲಾಭವು ವರ್ಷದಿಂದ ವರ್ಷಕ್ಕೆ ಶೇ 19ರಷ್ಟು ಏರಿಕೆಯಾಗಿದ್ದು, Q3-2021ರಲ್ಲಿ ರು. 5,498 ಕೋಟಿಗಳಿಂದ Q3-2022ರಲ್ಲಿ ರೂ. 6,536 ಕೋಟಿಗಳಿಗೆ ಏರಿಕೆಯಾಗಿದೆ.

ಇದನ್ನೂ ಓದಿ: ICICI Bank: ಕಸ್ಟಮ್ಸ್ ಸುಂಕ ಆನ್​ಲೈನ್ ಪಾವತಿ ಐಸಿಐಸಿಐ ಬ್ಯಾಂಕ್​ನಿಂದ ಇನ್ನು ಸುಲಭ