ICICI Bank: ಕಸ್ಟಮ್ಸ್ ಸುಂಕ ಆನ್‌ಲೈನ್ ಪಾವತಿ ಐಸಿಐಸಿಐ ಬ್ಯಾಂಕ್ನಿಂದ ಇನ್ನು ಸುಲಭ
ಐಸಿಐಸಿಐ ಬ್ಯಾಂಕ್ನಿಂದ ಈಗ ಆನ್‌ಲೈನ್ ಮೂಲಕ ಕಾರ್ಪೊರೇಟ್ ಮತ್ತು ರೀಟೇಲ್ ಕಸ್ಟಮ್ಸ್ ಸುಂಕವನ್ನು ಪಾವತಿ ಮಾಡಬಹುದು ಎಂದು ಘೋಷಣೆ ಮಾಡಲಾಗಿದೆ.
ರೀಟೇಲ್ ಮತ್ತು ಕಾರ್ಪೊರೇಟ್ ಗ್ರಾಹಕರಿಗೆ ಪ್ರಯೋಜನ ಆಗುವಂತೆ ಸೀಮಾ ಸುಂಕದ (Customs duty) ಆನ್‌ಲೈನ್ ಪಾವತಿಯನ್ನು ಈಗ ಬ್ಯಾಂಕ್ ಸುಗಮಗೊಳಿಸುತ್ತದೆ ಎಂದು ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್ ಶುಕ್ರವಾರ ಹೇಳಿದೆ. ಕಾರ್ಪೊರೇಟ್ ಗ್ರಾಹಕರು ಬ್ಯಾಂಕಿನ ಕಾರ್ಪೊರೇಟ್ ಇಂಟರ್ನೆಟ್ ಬ್ಯಾಂಕಿಂಗ್ (CIB) ಮತ್ತು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ InstaBIZ ಮೂಲಕ ಕಸ್ಟಮ್ಸ್ ಸುಂಕವನ್ನು ಪಾವತಿಸಬಹುದು. ಆದರೆ ರೀಟೇಲ್ ಗ್ರಾಹಕರು ಬ್ಯಾಂಕ್ನ ರೀಟೇಲ್ ಇಂಟರ್ನೆಟ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್ ಮೂಲಕ ಪಾವತಿಸಬಹುದು. ಭಾರತೀಯ ಕಸ್ಟಮ್ಸ್ ಎಲೆಕ್ಟ್ರಾನಿಕ್ ಗೇಟ್‌ವೇ (ICEGATE) ವೆಬ್‌ಸೈಟ್‌ನಲ್ಲಿನ ಬ್ಯಾಂಕ್‌ಗಳ ಪಟ್ಟಿಯಿಂದ ಐಸಿಐಸಿಐ ಬ್ಯಾಂಕ್ ಅನ್ನು ಆಯ್ಕೆ ಮಾಡುವ ಮೂಲಕ ಗ್ರಾಹಕರು ಆನ್‌ಲೈನ್ ಪಾವತಿಯನ್ನು ಮಾಡಬಹುದು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.
ತನ್ನ ಗ್ರಾಹಕರಿಗೆ ಕಸ್ಟಮ್ಸ್ ಸುಂಕದ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸಲು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿರುವ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥ (ವಹಿವಾಟು ಬ್ಯಾಂಕಿಂಗ್) ಹಿತೇಶ್ ಸೇಥಿಯಾ, “ಈ ಸೌಲಭ್ಯವು ಐಸಿಐಸಿಐ ಬ್ಯಾಂಕ್ನ ಲಕ್ಷಾಂತರ ಸಂಖ್ಯೆಯ ಗ್ರಾಹಕರಿಗೆ ICEGATE ಜಾಲತಾಣ ಮೂಲಕ ಅನುಕೂಲಕರವಾಗಿ ಕಸ್ಟಮ್ಸ್ ಸುಂಕವನ್ನು ಪಾವತಿಸಲು ಅನುವು ಮಾಡಿಕೊಡುತ್ತದೆ.”
“ನಮ್ಮ ಗ್ರಾಹಕರಿಗೆ ನಿರಂತರವಾಗಿ ನವೀನ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುವ ಮೂಲಕ ಅನುಕೂಲತೆಯನ್ನು ಹೆಚ್ಚಿಸುವ ನಮ್ಮ ಪ್ರಯತ್ನಕ್ಕೆ ಇದು ಅನುಗುಣವಾಗಿದೆ” ಎಂದು ಸೇಥಿಯಾ ಸೇರಿಸಿದ್ದಾರೆ. ಐಸಿಐಸಿಐ ಬ್ಯಾಂಕ್ ಈಗ ಒಂದು ದಶಕಕ್ಕೂ ಹೆಚ್ಚು ಕಾಲ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ಪಾವತಿಯನ್ನು ಯಶಸ್ವಿಯಾಗಿ ಸುಗಮಗೊಳಿಸುತ್ತಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ: Senior Citizens Special Fixed Deposits: ಎಸ್ಬಿಐ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ನ ಈಚಿನ ಎಫ್ಡಿ ದರ