
ಸಿಡ್ನಿ, ಮೇ 26: ಕೃತಕ ಬುದ್ಧಿಮತ್ತೆ (AI) ಜಗತ್ತನ್ನು ಆವರಿಸಿಕೊಳ್ಳುತ್ತಿದ್ದಂತೆ ಲಕ್ಷಾಂತರ ಬಿಳಿ ಕಾಲರ್ (White-collar) ಉದ್ಯೋಗಗಳು ನಾಶವಾಗಬಹುದು ಎಂಬ ಭೀತಿ ಜಗತ್ತಿನಾದ್ಯಂತ ಸೃಷ್ಟಿಯಾಗಿತ್ತು. ಆದರೆ, ಓಪನ್ಎಐನ ಸಿಇಒ ಸ್ಯಾಮ್ ಆಲ್ಟ್‌ಮನ್ (Sam Altman) ಅವರೇ ಈಗ ಸಮಾಧಾನಕರ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಮನುಷ್ಯರ ಹೆಚ್ಚಿನ ಉದ್ಯೋಗಗಳು ಎಐನಿಂದಾಗಿ ಇಲ್ಲವಾಗುತ್ತವೆ ಎಂದು ಕಳೆದ ವರ್ಷ ಹೇಳುತ್ತಿದ್ದ ಸ್ಯಾಮ್ ಆಲ್ಟ್‌ಮನ್ ಇದೀಗ ತಮ್ಮ ಅಭಿಪ್ರಾಯವನ್ನೇ ಬದಲಿಸಿದ್ದಾರೆ. AI ತಂತ್ರಜ್ಞಾನದ ತೀವ್ರ ಬೆಳವಣಿಗೆಯಿಂದಾಗಿ ಜಗತ್ತಿನಲ್ಲಿ ಉದ್ಯೋಗಗಳ ಮಹಾ ಪ್ರಳಯ ಅಥವಾ ಸರ್ವನಾಶ (Jobs Apocalypse) ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ನಡೆದ ಆರ್ಥಿಕ ಸಮ್ಮೇಳನವೊಂದರಲ್ಲಿ ಮಾತನಾಡಿದ ಸ್ಯಾಮ್ ಆಲ್ಟ್‌ಮನ್, ಉದ್ಯೋಗ ನಷ್ಟದ ಕುರಿತು ತಾವು ಈ ಹಿಂದೆ ವ್ಯಕ್ತಪಡಿಸಿದ್ದ ಕಳವಳಗಳು ಅತಿಯಾಗಿದ್ದವು ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ತನ್ನ ಅಂದಾಜು ಸುಳ್ಳಾಗಿದ್ದು ಖುಷಿ ತಂದಿದೆ ಎಂದೂ ಅವರು ಅಭಿಪ್ರಾಪಟ್ಟಿದ್ದಾರೆ.
2022ರಲ್ಲಿ ಚಾಟ್‌ಜಿಪಿಟಿ ಬಿಡುಗಡೆಯಾದಾಗ, ಆರಂಭಿಕ ಹಂತದ (Entry-level) ಕಚೇರಿ ಉದ್ಯೋಗಗಳು ಅತ್ಯಂತ ವೇಗವಾಗಿ ಇಲ್ಲದಂತಾಗಬಹುದು ಎಂದು ತಾನು ಭಾವಿಸಿದ್ದೆ. ಆದರೆ ಸದ್ಯಕ್ಕೆ ಅಂತಹ ಯಾವುದೇ ದೊಡ್ಡ ಮಟ್ಟದ ಉದ್ಯೋಗ ನಷ್ಟ ಸಂಭವಿಸಿಲ್ಲ. ಈ ವಿಷಯದಲ್ಲಿ ತನ್ನ ಅಂದಾಜು ಅಥವಾ ಅಂತಃಪ್ರಜ್ಞೆ ತಪ್ಪಾಗಿದ್ದಕ್ಕೆ ತನಗೆ ನಿಜಕ್ಕೂ ಸಂತೋಷವಿದೆ, ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆರ್ಥಿಕ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು; ದಿಟ್ಟ ಸುಧಾರಣೆ ಕ್ರಮ ಕೈಗೊಳ್ಳಬೇಕು: ನಿಲೇಶ್ ಶಾ
AI ತಂತ್ರಜ್ಞಾನದ ತಾಂತ್ರಿಕ ಪ್ರಗತಿಯ ವೇಗವನ್ನು ತಾವು ಸರಿಯಾಗಿಯೇ ಊಹಿಸಿದ್ದರೂ, ಅದರ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಕುರಿತು ತಪ್ಪು ಲೆಕ್ಕಾಚಾರ ಹಾಕಿದ್ದಾಗಿ ಅವರು ಒಪ್ಪಿಕೊಂಡಿದ್ದಾರೆ.
ಉದ್ಯೋಗಗಳು ಉಳಿದುಕೊಳ್ಳುತ್ತಿರುವುದಕ್ಕೆ ಪ್ರಮುಖ ಕಾರಣವನ್ನೂ ಆಲ್ಟ್‌ಮನ್ ವಿವರಿಸಿದ್ದಾರೆ. ಯಾವುದೇ ಕೆಲಸದಲ್ಲೂ ಮನುಷ್ಯರ ನಡುವಿನ ಪರಸ್ಪರ ಸಂವಹನ ಮತ್ತು ಬಾಂಧವ್ಯ (Human Interaction) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ, ಇದನ್ನು ಯಂತ್ರಗಳಿಂದ ಸುಲಭವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮದೇ ಆದ ಒಂದು ವೈಯಕ್ತಿಕ ಉದಾಹರಣೆಯನ್ನು ನೀಡಿದ ಅವರು, “ನಾನು ಇಮೇಲ್ ಮತ್ತು ಸ್ಲ್ಯಾಕ್ (Slack) ಸಂದೇಶಗಳಿಗೆ ಉತ್ತರಿಸಲು AI ಬಳಸಲು ಪ್ರಾರಂಭಿಸಿದ್ದೆ. ಆದರೆ ನಂತರದ ದಿನಗಳಲ್ಲಿ ನಾವೆಲ್ಲರೂ ಮನುಷ್ಯರೊಂದಿಗಿನ ನೇರ ಸಂವಹನವನ್ನೇ ಹೆಚ್ಚು ಇಷ್ಟಪಡುತ್ತೇವೆ ಎಂಬುದು ನನಗೇ ಅರಿವಾಯಿತು. ಹಾಗಾಗಿ ನಾನು ಮತ್ತೆ ಸ್ವತಃ ನಾನೇ ಸಂದೇಶಗಳಿಗೆ ಉತ್ತರಿಸಲು ಆರಂಭಿಸಿದೆ,” ಎಂದಿದ್ದಾರೆ.
ಇದನ್ನೂ ಓದಿ: ಮೈರಾ, ಕೈರಾ, ನೈನಾ… ಡಿಜಿಟಲ್ ಲೋಕದಲ್ಲಿ ‘AI ಇನ್‌ಫ್ಲುಯೆನ್ಸರ್ಸ್’ ಹವಾ; ಯಂತ್ರಿಣಿಯರ ಮಧ್ಯೆ ಮನುಷ್ಯರಿಗಿದೆಯಾ ಬೆಲೆ?
ಅಮೆಜಾನ್, ಹೆಚ್‌ಎಸ್‌ಬಿಸಿ (HSBC), ಸ್ಟ್ಯಾಂಡರ್ಡ್ ಚಾರ್ಟರ್ಡ್‌ನಂತಹ ಜಾಗತಿಕ ದೈತ್ಯ ಕಂಪನಿಗಳು ತಮ್ಮ ಕೆಲವು ವಿಭಾಗಗಳಲ್ಲಿ ಕಾರ್ಯನಿರ್ವಹಣೆಯನ್ನು ಸುಲಭಗೊಳಿಸಲು AI ಬಳಸುತ್ತಿದ್ದು, ಕೆಲವು ಉದ್ಯೋಗಗಳ ಸ್ವರೂಪ ಬದಲಾಗುತ್ತಿದೆ ಎಂದು ಇತ್ತೀಚೆಗೆ ವರದಿ ಮಾಡಿದ್ದವು. ಆದರೆ ಸ್ಯಾಮ್ ಆಲ್ಟ್‌ಮನ್ ಅವರ ಪ್ರಕಾರ, ಉದ್ಯೋಗಗಳ ಸ್ವರೂಪ ಬದಲಾಗಬಹುದೇ ವಿನಃ ಮಾರುಕಟ್ಟೆಯಿಂದ ಉದ್ಯೋಗಗಳೇ ಮಾಯವಾಗುವಂತಹ ಬಿಕ್ಕಟ್ಟು ಸೃಷ್ಟಿಯಾಗುವುದಿಲ್ಲ. ಭವಿಷ್ಯದ ಉದ್ಯೋಗ ಮಾರುಕಟ್ಟೆ ನಾವು ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿಯೂ, ಆಶಾದಾಯಕವಾಗಿಯೂ ಇರಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ