ನವದೆಹಲಿ, ಜನವರಿ 12: ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ಅವರು ತಮ್ಮ ಬಹುಕಾಲದ ಬಾಯ್ಫ್ರೆಂಡ್ ಆಗಿರುವ ಓಲಿವರ್ ಮುಲೆರಿನ್ (Oliver Mulherin) ಅವರನ್ನು ವಿವಾಹವಾಗಿದ್ದಾರೆ. ಈ ಮೂಲಕ ಎಲ್ಜಿಬಿಟಿ ಸಮುದಾಯಗಳಿಗೆ (LGBT+ community) ಹೊಸ ರೋಲ್ ಮಾಡೆಲ್ ಸಿಕ್ಕಂತಾಗಿದೆ. ಅಮೆರಿಕದ ಸಮೀಪದ ಹವಾಯಿ ದ್ವೀಪವೊಂದರಲ್ಲಿ ಸ್ಯಾಮ್ ಆಲ್ಟ್ಮ್ಯಾನ್ ಮತ್ತು ಓಲಿವರ್ ಮುಲೆರಿನ್ ಅವರ ಮದುವೆ ಕಾರ್ಯಕ್ರಮ ನಡೆದಿದೆ. ಇದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿದ್ದು, ವೈರಲ್ ಆಗುತ್ತಿವೆ. ಸ್ಯಾಮ್ ಆಲ್ಟ್ಮ್ಯಾನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ತಿಳಿಸಿದಲ್ಲ. ಮಾಧ್ಯಮಗಳಿಗೆ ಈ ಬೆಳವಣಿಗೆಯನ್ನು ಅವರು ಖಚಿಪಡಿಸಿದ್ದಾರೆ.
ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜೋ ಬೈಡನ್ ಅವರು ವೈಟ್ಹೌಸ್ನಲ್ಲಿ ಔತಣಕೂಟ ಇಟ್ಟುಕೊಂಡಿದ್ದರು. ಆಗ ವಿವಿಧ ಅಮೆರಿಕನ್ ಉದ್ಯಮಿಗಳು ಹಾಗು ಇತರ ಕೆಲ ಗಣ್ಯರಿಗೆ ಆಹ್ವಾನ ಕೊಡಲಾಗಿತ್ತು. ಆಗ ಸ್ಯಾಮ್ ಆಲ್ಟ್ಮ್ಯಾನ್ ಅವರು ಓಲಿವರ್ ಮುಲೆರಿನ್ ಅವರನ್ನೂ ಜೊತೆಗೆ ಕರೆದುಕೊಂಡು ಕಾರ್ಯಕ್ರಮಕ್ಕೆ ಹೋಗಿದ್ದರು. ಅವರಿಬ್ಬರು ಜೋಡಿಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಅದೇ ಮೊದಲು ಎನ್ನಲಾಗಿದೆ.
ಸ್ಯಾಮ್ ಆಲ್ಟ್ಮ್ಯಾನ್ ಮತ್ತು ಓಲಿವರ್ ಮುಲೆರಿನ್ ಇಬ್ಬರೂ ದೀರ್ಘಕಾಲದಿಂದ ಒಡನಾಡಿಗಳಾಗಿದ್ದಾರೆ. ಆದರೆ, ಇತ್ತೀಚೆಗಷ್ಟೇ ಅವರ ಸಂಬಂಧ ರಟ್ಟಾಗಿದ್ದು. 2023ರ ಸೆಪ್ಟೆಂಬರ್ ತಿಂಗಳಲ್ಲಿ ನ್ಯೂಯಾರ್ಕ್ ಮ್ಯಾಗಝಿನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಸ್ಯಾಮ್ ಆಲ್ಟ್ಮ್ಯಾನ್ ಅವರು ತನ್ನ ಸ್ನೇಹಿತನನ್ನು ವರಿಸುವ ಹಾಗು ಮಗು ಹೊಂದುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು.
ಆಲಿವರ್ ಮುಲೆರಿನ್ ಅವರು ಆಸ್ಟ್ರೇಲಿಯಾ ದೇಶದವರು. 2016ರಲ್ಲಿ ಮೆಲ್ಬೋರ್ನ್ ಯೂನಿವರ್ಸಿಟಿಯಲ್ಲಿ ಬಿಎಸ್ಸಿ ಮಾಡಿದ್ದಾರೆ. ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಫೇಸ್ಬುಕ್ನ ಮಾಲೀಕ ಸಂಸ್ಥೆ ಮೆಟಾದಲ್ಲಿ 2020ರಿಂದ 22ರವರೆಗೆ ಕೆಲಸ ಮಾಡಿದ್ದಾರೆ. ಬ್ರಾಡ್ವಿಂಗ್, ಸ್ಪಾರ್ಕ್ ನ್ಯೂರೋ ಸಂಸ್ಥೆಗಳಲ್ಲೂ ಆಲಿವರ್ ಮುಲೆರಿನ್ ಕೆಲಸ ಮಾಡಿದ್ದಾರೆ.
ವಿವಿಧ ರೀತಿಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಾಜೆಕ್ಟ್ಗಳಲ್ಲಿ ಅವರು ಅನುಭವ ಹೊಂದಿದ್ದಾರೆ. ಇಂಟರ್ನೆಂಟ್ ಆಫ್ ಥಿಂಗ್ಸ್ ಕ್ಷೇತ್ರದಲ್ಲಿ ನಿಷ್ಣಾತರು ಅವರು.
ಚ್ಯಾಟ್ಜಿಪಿಟಿ ಬಿಡುಗಡೆ ಮಾಡಿದ ಓಪನ್ಎಐನ ಸಿಇಒ ಆಗಿರುವ ಸ್ಯಾಮ್ ಆಲ್ಟ್ಮ್ಯಾನ್ ಮತ್ತು ಓಲಿವರ್ ಮುಲೆರಿನ್ ನಡುವಿನ ಸ್ನೇಹ ಹಲವು ವರ್ಷಗಳ ಹಿಂದಿನದ್ದು. ಇಬ್ಬರೂ ಕೂಡ ವಾರದ ದಿನಗಳಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ರಷ್ಯನ್ ಹಿಲ್ನ ಮನೆಯೊಂದರಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ. ವೀಕೆಂಡ್ ದಿನಗಳಲ್ಲಿ ಅವರು ಕ್ಯಾಲಿಫೋರ್ನಿಯಾದ ನಾಪಾಗೆ ಹೋಗುತ್ತಿರುತ್ತಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Infosys-InSemi: ಬೆಂಗಳೂರಿನ ಸೆಮಿಕಂಡಕ್ಟರ್ ಡಿಸೈನ್ ಕಂಪನಿ ಇನ್ಸೆಮಿಯನ್ನು ಖರೀದಿಸಲು ಮುಂದಾದ ಇನ್ಫೋಸಿಸ್
ಸ್ಯಾಮ್ ಆಲ್ಟ್ಮ್ಯಾನ್ ಮತ್ತು ಓಲಿವರ್ ಮುಲೆರಿನ್ ಅವರು ಶೀಘ್ರದಲ್ಲೇ ಸಂತಾನ ಪಡೆಯಲಿದ್ದೇವೆ ಎಂದು ಹೇಳಿದ್ದಾರೆ. ಈ ಸಲಿಂಗಿಗಳಿಗೆ ಮಗು ಹೇಗೆ ಆಗಬಹುದು? ಒಬ್ಬ ಸಂಗಾತಿಯು ಮೂಲತಃ ಮಹಿಳೆಯಾಗಿದ್ದು ಪುರುಷನಾಗಿ ಬದಲಾಗಿದ್ದರೆ ಸಂತಾನ ಹೊಂದಲು ಸಾಧ್ಯ. ಆದರೆ, ಇವರಿಬ್ಬರೂ ಮೂಲತಃ ಗಂಡುಗಳೇ ಎಂಬುದು ಈವರೆಗೆ ತಿಳಿದಿರುವ ಮಾಹಿತಿ.
ಈ ಪರಿಸ್ಥಿತಿಯಲ್ಲಿ, ಸಂತಾನ ಸಾಧ್ಯವಾಗಬೇಕೆಂದರೆ ಅದು ಕೃತಕವಾಗಿ ಗರ್ಭಧಾರಣೆ ಮಾಡಿ ಬಾಡಿಗೆ ತಾಯಿ ಮೂಲಕ ಮಗು ಹೆರುವುದು ಸದ್ಯಕ್ಕೆ ಇರುವ ಆಯ್ಕೆ. ಇಲ್ಲಿ ಈ ಜೋಡಿಯಲ್ಲಿ ಒಬ್ಬ ವ್ಯಕ್ತಿಯ ವೀರ್ಯವನ್ನು ಮಾತ್ರ ಬಳಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ