ನವದೆಹಲಿ, ಮೇ 21: ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಆವಿಷ್ಕಾರಗಳು, ಹೊಸ ಆಲೋಚನೆಗಳು ಹೊರಹೊಮ್ಮುತ್ತಲೇ ಇರುತ್ತವೆ. ಮೂರು ದಶಕದ ಹಿಂದೆ ಸ್ಮಾರ್ಟ್ಫೋನ್ಗಳು ಜನಸಾಗರವನ್ನೇ ಆಳುತ್ತವೆ ಎಂದು ಯಾರಾದರೂ ಊಹಿಸಿದ್ದರಾ? ಸ್ಮಾರ್ಟ್ಫೋನ್ ಬಂದಾಗಲೇ ಅದೊಂದು ಅಮೋಘ ಕಲ್ಪನೆ ಎನಿಸಿತ್ತು. ಈಗ ಅಕ್ಷರಗಳನ್ನು ಟೈಪಿಸುವ ಕೀಪ್ಯಾಡ್ ಮತ್ತು ಟಚ್ ಸ್ಕ್ರೀನ್ ಇಲ್ಲದ ಸ್ಮಾರ್ಟ್ಫೋನ್ ಅನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯವಾ? ಇಂಥದ್ದೊಂದು ಸಾಧನವನ್ನು ಹೊರತರುತ್ತಿದೆ ಓಪನ್ಎಐ ಸಂಸ್ಥೆ. ಚ್ಯಾಟ್ಜಿಪಿಟಿಯಂತಹ (ChatGPT) ಜಾಣ ವೇದಿಕೆಯನ್ನು (AI Model) ಲೋಕಾರ್ಪಣೆ ಮಾಡಿದ ಓಪನ್ಎಐ ಸಂಸ್ಥೆ (OpenAI) ಈಗ ಎಐ ಶಕ್ತ ಸಾಧನವೊಂದನ್ನು (AI powered device) ಅಭಿವೃದ್ಧಿಪಡಿಸುತ್ತಿದೆಯಂತೆ.
ಹಿಂದೆ ಹಾಸುಹೊಕ್ಕಾಗಿದ್ದ ನೊಕಿಯಾದಂತಹ ಫೀಚರ್ ಫೋನ್ಗಳ ಜಾಗವನ್ನು ಸ್ಮಾರ್ಟ್ಫೋನ್ ತುಂಬಿದಂತೆ, ಈಗ ಸ್ಮಾರ್ಟ್ಫೋನ್ ಸ್ಥಾನಕ್ಕೆ ತಮ್ಮ ಎಐ ಸಾಧನಗಳು ಬರಲಿವೆ ಎನ್ನುವುದು ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮ್ಯಾನ್ ಅನಿಸಿಕೆ.
ಇದನ್ನೂ ಓದಿ: ಇಂದಿನ ದಿನಗಳಲ್ಲಿ ಸೆಕೆಂಡ್ ಹ್ಯಾಂಡ್ ಫೋನ್ ಖರೀದಿಸುವುದು ಸುರಕ್ಷಿತವೇ?: ಇಲ್ಲಿ ತಿಳಿದುಕೊಳ್ಳಿ
ಓಪನ್ಎಐ ಅಭಿವೃದ್ಧಿಪಡಿಸುತ್ತಿರುವ ಎಐ ಶಕ್ತ ಸಾಧನ ಹೇಗಿರುತ್ತೆ ಎಂಬುದರ ಸ್ಪಷ್ಟ ಸುಳಿವಿಲ್ಲ. ಅವರೇ ಹೇಳಿದಂತೆ, ಜನರು ಯಂತ್ರದ ಜೊತೆ ಸಂವಹನ ನಡೆಸುವ ವಿಧಾನವೇ ಬದಲಾಗಲಿದೆಯಂತೆ. ಬಹುಶಃ ಧ್ವನಿ ಮತ್ತು ದೃಶ್ಯ ಆಧಾರಿತ ಸಂವಹನ ಇರಬಹುದು. ಎರಡು ವರ್ಷದ ಹಿಂದೆಯೇ ಇಂಥದ್ದೊಂದು ವರ್ತಮಾನವನ್ನು ಓಪನ್ಎಐ ಹೊರಹಾಕಿತ್ತು.
ಐಫೋನ್, ಐಮ್ಯಾಕ್, ಐಪ್ಯಾಡ್ನಂತಹ ಉತ್ಕೃಷ್ಟ ಆ್ಯಪಲ್ ಉತ್ಪನ್ನಗಳ ರೂವಾರಿ ಎನಿಸಿದ್ದ, ಆ್ಯಪಲ್ನ ಮಾಜಿ ಮುಖ್ಯ ಡಿಸೈನ್ ಆಫೀಸರ್ ಜಾನಿ ಐವೆ ಅವರ ನೆರವಿನೊಂದಿಗೆ ಓಪನ್ಎಐ ಈ ಹೊಸ ಸಾಧನವನ್ನು ಅಭಿವೃದ್ಧಿಪಡಿಸುತ್ತಿರುವುದು ತಿಳಿದು ಬಂದಿದೆ. ಸ್ಯಾಮ್ ಆಲ್ಟ್ಮ್ಯಾನ್ ಪ್ರಕಾರ, ಐಫೋನ್ ಬಳಿಕ ಅವರ ಈ ಉತ್ಪನ್ನವೇ ಅತ್ಯುತ್ತಮ ಆವಿಷ್ಕಾರ ಎನಿಸಲಿದೆಯಂತೆ. ನಿತ್ಯದ ಬಳಕೆದಾರರಿಗೆ ಬಹಳ ಒಗ್ಗಿಹೋಗುವ, ಇಷ್ಟವಾಗುವ ಮತ್ತು ಸುಲಭ ಬಳಕೆಯಾಗಿಸುವ ಸಾಧನ ಇದಾಗಿರಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಾಟ್ಸ್ಆ್ಯಪ್ನಲ್ಲಿ ಯಾರ ಮೆಸೇಜ್ ಬಂತೆಂದು ಫೋನ್ ನೋಡದೆಯೇ ತಿಳಿಯುವುದು ಹೇಗೆ?, ಇಲ್ಲಿದೆ ಟ್ರಿಕ್
ಓಪನ್ಎಐನ ಈ ಹೊಸ ಸಾಧನವು ಈಗಿರುವ ಕಂಪ್ಯೂಟರ್ ಮತ್ತು ಸ್ಮಾರ್ಟ್ಫೋನ್ಗಳಿಗಿಂತ ಬಹಳ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ. ಕೃತಕ ಬುದ್ಧಿಮತ್ತೆಯನ್ನು ಜನರ ನಿತ್ಯಜೀವನದಲ್ಲಿ ಹೆಚ್ಚು ಹೊಕ್ಕಾಗಿಸುತ್ತದೆಯಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ