ಹಿರಿಯ ನಾಗರಿಕರಿಗೆ ರೈಲ್ವೆ ರಿಯಾಯಿತಿ ದರವನ್ನು ಮರುಸ್ಥಾಪಿಸಿ: ಸಂಸದೀಯ ಸಮಿತಿ ಶಿಫಾರಸು
ರೈಲ್ವೆಗಳು ಸಹಜ ಸ್ಥಿತಿಯತ್ತ ಸಾಗುತ್ತಿರುವ ಕಾರಣ, ವಿವಿಧ ವರ್ಗದ ಪ್ರಯಾಣಿಕರಿಗೆ ನೀಡಿರುವ ರಿಯಾಯಿತಿಗಳನ್ನು ನ್ಯಾಯಯುತವಾಗಿ ಪರಿಗಣಿಸಬೇಕು ಎಂದು ಸಮಿತಿಯು ಆಗಸ್ಟ್ 4 ರಂದು ಸಂಸತ್ನಲ್ಲಿ ಸಲ್ಲಿಸಿದ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ
ಹಿರಿಯ ನಾಗರಿಕರಿಗೆ ಒಟ್ಟು ಪ್ರಯಾಣ ದರದ ಶೇಕಡಾ 40 ರಿಂದ 50 ರಷ್ಟು ರೈಲ್ವೇ ರಿಯಾಯಿತಿ ದರವನ್ನು ಕನಿಷ್ಠ ಸ್ಲೀಪರ್ ಕ್ಲಾಸ್ ಮತ್ತು ಎಸಿ 3 ವರ್ಗದಲ್ಲಿ ಮರುಸ್ಥಾಪಿಸಬೇಕು ಎಂದು ರೈಲ್ವೆಯ ಸಂಸದೀಯ ಸ್ಥಾಯಿ ಸಮಿತಿ (Parliamentary Standing Committee) ರೈಲ್ವೆ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. 20 ಮಾರ್ಚ್ 2020ರಲ್ಲಿ ಕೋವಿಡ್ ಅವಧಿಯಲ್ಲಿ ಹಿರಿಯ ನಾಗರಿಕರಿಗೆ ಈ ರೈಲ್ವೇ ದರದ ರಿಯಾಯಿತಿಗಳನ್ನು ಹಿಂಪಡೆಯಲಾಗಿತ್ತು. ರೈಲ್ವೆಗಳು ಸಹಜ ಸ್ಥಿತಿಯತ್ತ ಸಾಗುತ್ತಿರುವ ಕಾರಣ, ವಿವಿಧ ವರ್ಗದ ಪ್ರಯಾಣಿಕರಿಗೆ ನೀಡಿರುವ ರಿಯಾಯಿತಿಗಳನ್ನು ನ್ಯಾಯಯುತವಾಗಿ ಪರಿಗಣಿಸಬೇಕು ಎಂದು ಸಮಿತಿಯು ಆಗಸ್ಟ್ 4 ರಂದು ಸಂಸತ್ನಲ್ಲಿ ಸಲ್ಲಿಸಿದ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ. ಕೊವಿಡ್ ಪೂರ್ವದಲ್ಲಿ ಲಭ್ಯವಿದ್ದ ಹಿರಿಯ ನಾಗರಿಕರಿಗೆ ರಿಯಾಯಿತಿಯನ್ನು ಕನಿಷ್ಠ ಸ್ಲೀಪರ್ ಕ್ಲಾಸ್ ಮತ್ತು III ಎಸಿಯಲ್ಲಿ ತುರ್ತಾಗಿ ಪರಿಶೀಲಿಸಬಹುದು ಮತ್ತು ಪರಿಗಣಿಸಬಹುದು ಎಂದು ಸಮಿತಿಯು ಬಯಸುತ್ತದೆ, ಇದರಿಂದಾಗಿ ದುರ್ಬಲ ಮತ್ತು ನಿಜವಾದ ಅಗತ್ಯವಿರುವ ಹಿರಿಯ ನಾಗರಿಕರು ಈ ಕ್ಲಾಸ್ನಲ್ಲಿ ಸೌಲಭ್ಯವನ್ನು ಪಡೆಯಬಹುದು ಎಂದು ಸಮಿತಿ ಹೇಳಿದೆ.
ಬಿಜೆಪಿ ಲೋಕಸಭೆ ಸಂಸದ ರಾಧಾಮೋಹನ್ ಸಿಂಗ್ ಅವರು ರೈಲ್ವೆ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಶಿಫಾರಸನ್ನು “ಭಾರತೀಯ ರೈಲ್ವೆಯ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ” ಕುರಿತು ರೈಲ್ವೆಯ ಸ್ಥಾಯಿ ಸಮಿತಿಯ 8 ನೇ ವರದಿಯಲ್ಲಿರುವ ಅವಲೋಕನಗಳು/ಶಿಫಾರಸುಗಳ ಮೇಲೆ ಸರ್ಕಾರವು ತೆಗೆದುಕೊಂಡ ಕ್ರಮ” ಎಂಬ ವರದಿಯಲ್ಲಿ ಮಾಡಲಾಗಿದೆ.