ಪೇಟೆಂಟ್ ವ್ಯಾಜ್ಯ; ಆ್ಯಪಲ್​ನ ಸ್ಮಾರ್ಟ್​ವಾಚ್​ಗಳಿಗೆ ಅಮೆರಿಕದಲ್ಲಿ ನಿಷೇಧ ಸಾಧ್ಯತೆ; ಏನಿದು ಬಿಕ್ಕಟ್ಟು?

|

Updated on: Dec 19, 2023 | 3:46 PM

Apple Facing Ban on Smartwatches: ಪೇಟೆಂಟ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಆ್ಯಪಲ್ ಸಂಸ್ಥೆಯ ಎರಡು ಸ್ಮಾರ್ಟ್​ವಾಚ್ ಉತ್ಪನ್ನಕ್ಕೆ ಅಮೆರಿಕದಲ್ಲಿ ನಿಷೇಧದ ಭೀತಿ ಎದುರಾಗಿದೆ. ಮೆಡಿಕಲ್ ಡಿವೈಸ್ ತಯಾರಕ ಮ್ಯಾಕ್ಸಿಮೋ ಕಾರ್ಪ್ ಹೊಂದಿರುವ ಪೇಟೆಂಟ್ ಹಕ್ಕುಗಳನ್ನು ಆ್ಯಪಲ್​ನ ಸ್ಮಾರ್ಟ್​ವಾಚ್ ಉತ್ಪನ್ನಗಳಲ್ಲಿ ಉಲ್ಲಂಘಿಸಿರುವ ಆರೋಪ ಇದೆ. ಆ್ಯಪಲ್​ನ ಸೀರೀಸ್ 9 ಮತ್ತು ಅಲ್ಟ್ರಾ 2 ಸರಣಿಯ ಸ್ಮಾರ್ಟ್​​ವಾಚ್​ಗಳ ಮಾರಾಟವನ್ನು ಹಿಂಪಡೆದುಕೊಳ್ಳಲಾಗಿದೆ.

ಪೇಟೆಂಟ್ ವ್ಯಾಜ್ಯ; ಆ್ಯಪಲ್​ನ ಸ್ಮಾರ್ಟ್​ವಾಚ್​ಗಳಿಗೆ ಅಮೆರಿಕದಲ್ಲಿ ನಿಷೇಧ ಸಾಧ್ಯತೆ; ಏನಿದು ಬಿಕ್ಕಟ್ಟು?
ಆ್ಯಪಲ್ ಸ್ಮಾರ್ಟ್​ವಾಚ್
Follow us on

ವಾಷಿಂಗ್ಟನ್, ಡಿಸೆಂಬರ್ 19: ತನ್ನ ಸ್ಮಾರ್ಟ್​ವಾಚ್​ಗಳಿಗೆ ಅಮೆರಿಕದಲ್ಲಿ ನಿಷೇಧಗೊಳ್ಳುವ ಭೀತಿ ಆ್ಯಪಲ್ ಸಂಸ್ಥೆಗೆ ಎದುರಾಗಿದೆ. ಮೆಡಿಕಲ್ ಡಿವೈಸ್ ಸಂಸ್ಥೆಯೊಂದು ಸ್ಮಾರ್ಟ್​ವಾಚ್​ಗೆ ಸಂಬಂಧಿಸಿದ ಪೇಟೆಂಟ್ ವಿಚಾರವಾಗಿ ದಾಖಲಿಸಿದ್ದ ವ್ಯಾಜ್ಯವೊಂದರಲ್ಲಿ (patent dispute) ಆ್ಯಪಲ್​ಗೆ ವಿರುದ್ಧವಾಗಿ ಕೋರ್ಟ್ ತೀರ್ಪು ಬಂದಿತ್ತು. ಈ ಪ್ರಕರಣದಲ್ಲಿ ಆ್ಯಪಲ್ ಪರವಾಗಿ ಸರ್ಕಾರ ನಿಲ್ಲುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹೀಗಾಗಿ, ನಿಷೇಧದ ತೂಗುಗತ್ತಿ ಆ್ಯಪಲ್ ಸ್ಮಾರ್ಟ್​ವಾಚ್​ಗಳ ಮೇಲಿದೆ. ಐಫೋನ್ ಹೊರತುಪಡಿಸಿದರೆ ಆ್ಯಪಲ್​ನ ಅತಿಹೆಚ್ಚು ಮಾರಾಟದ ಉತ್ಪನ್ನವೆಂದರೆ ಅದರ ಸ್ಮಾರ್ಟ್​ವಾಚುಗಳು. ಆ್ಯಪಲ್​ನ ಸೀರೀಸ್ 9 ಮತ್ತು ಅಲ್ಟ್ರಾ 2 ಸ್ಮಾರ್ಟ್​ವಾಚ್​ಗಳ ಮಾರಾಟವನ್ನು ಅಮೆರಿಕದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಿದೆ. ಇವೆರಡು ವಾಚುಗಳಲ್ಲಿ ಪೇಟೆಂಟ್ ಉಲ್ಲಂಘನೆ ಆಗಿರುವ ಆರೋಪ ಇದೆ. ಇದು ಅಮೆರಿಕದಲ್ಲಿ ತನ್ನ ಸ್ಮಾರ್ಟ್​ವಾಚ್​ಗೆ ನಿಷೇಧವಾಗುವ ಸುಳಿವು ಆ್ಯಪಲ್​ಗೆ ಸಿಕ್ಕಿರಬಹುದು.

ಏನಿದು ಆ್ಯಪಲ್​ಗೆ ಬಾಧಿಸಿರುವ ಪೇಟೆಂಟ್ ವ್ಯಾಜ್ಯ?

ಸ್ಮಾರ್ಟ್​ವಾಚ್​ನಲ್ಲಿ ದೇಹದ ಬ್ಲಡ್ ಆಕ್ಸಿಜನ್ ಮಟ್ಟವನ್ನು ಗಣಿಸುವ ತಂತ್ರಜ್ಞಾನವೊಂದು ಇದೆ. ಅಮೆರಿಕದ ಮಾಸಿಮೋ ಕಾರ್ಪ್ (Masimo Corp.) ಎಂಬ ಸಂಸ್ಥೆ ಇದರ ಪೇಟೆಂಟ್ ಹೊಂದಿದೆ. ಆ್ಯಪಲ್ ಕೂಡ ತನ್ನ ಸ್ಮಾರ್ಟ್​ವಾಚ್​ನಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಿದೆ. ಈ ವಿಚಾರವಾಗಿ ಮಾಸಿಮೋ ಸಂಸ್ಥೆ ಅಮೆರಿಕದ ಅಂತಾರಾಷ್ಟ್ರೀಯ ಟ್ರೇಡ್ ಕಮಿಷನ್ (ಐಟಿಸಿ) ಕೋರ್ಟ್​ನಲ್ಲಿ ಮೊಕದ್ದಮೆ ದಾಖಲಿಸಿತು.

ಇದನ್ನೂ ಓದಿ: ದಿವಾಳಿ ಎದ್ದ ಗೋಫಸ್ಟ್ ಏರ್ಲೈನ್ ಸಂಸ್ಥೆಯ ಖರೀದಿಗೆ ಮುಂದಾದ ಸ್ಪೈಸ್ ಜೆಟ್; ಸ್ಕೈ ಒನ್, ಸಾಫ್ರಿಕ್​ನಿಂದಲೂ ಆಸಕ್ತಿ

ಮಾಸಿಮೋದ ಪೇಟೆಂಟ್ ಹಕ್ಕುಗಳನ್ನು ಆ್ಯಪಲ್ ಉಲ್ಲಂಘಿಸಿದೆ ಎಂದು ಕೋರ್ಟ್ ತೀರ್ಪು ನೀಡಿದೆ. ಅಕ್ಟೋಬರ್ 26ರಂದೂ ಕೂಡ ಈ ತೀರ್ಪನ್ನು ಎತ್ತಿಹಿಡಿಯಲಾಗಿದೆ. ಇನ್ನು, ಈ ತೀರ್ಪನ್ನು ಬೈಪಾಸ್ ಮಾಡುವ ಅಥವಾ ಅನೂರ್ಜಿತಗೊಳಿಸುವ ಸರ್ವೋಚ್ಚ ಅಧಿಕಾರ ಅಮೆರಿಕದ ಸರ್ಕಾರಕ್ಕೆ ಇದೆ. ಡಿಸೆಂಬರ್ 25ರವರೆಗೂ ಮಾತ್ರವೇ ಅದಕ್ಕೆ ಕಾಲಾವಕಾಶ ಇರುವುದು.

ಇಂಥ ಪ್ರಕರಣಗಳಲ್ಲಿ ಹಿಂದಿನ ವಿದ್ಯಮಾನಗಳನ್ನು ನೋಡುವುದಾದರೆ ಅಮೆರಿಕದ ಅಧ್ಯಕ್ಷರು ಈ ರೀತಿ ಐಟಿಸಿ ತೀರ್ಪುಗಳನ್ನು ತೆರವುಗೊಳಿಸಿರುವುದು ತೀರಾ ಕಡಿಮೆ. ಸ್ಯಾಮ್ಸಂಗ್ ಮತ್ತು ಆ್ಯಪಲ್ ನಡುವಿನ ವ್ಯಾಜ್ಯದಲ್ಲಿ ಆ್ಯಪಲ್ ಮೇಲಿನ ನಿಷೇಧವನ್ನು ಹಿಂದಿನ ಅಧ್ಯಕ್ಷ ಬರಾಕ್ ಒಬಾಮ ತೆರವುಗೊಳಿಸಿದ್ದರು. ಆದರೆ, ಸ್ಯಾಮ್ಸಂಗ್ ಸಂಸ್ಥೆ ದಕ್ಷಿಣ ಕೊರಿಯಾದ್ದಾಗಿತ್ತು. ಈಗ ಕೇಸ್ ಹಾಕಿರುವುದು ಅಮೆರಿಕದ್ದೇ ಆದ ಮ್ಯಾಸಿಮೋ ಕಾರ್ಪ್. ಹೀಗಾಗಿ, ನಿಷೇಧ ತೆರವುಗೊಳಿಸುವ ಕ್ರಮಕ್ಕೆ ಜೋ ಬೈಡನ್ ಮುಂದಾಗುವ ಸಾಧ್ಯತೆ ಇಲ್ಲವೆನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:45 pm, Tue, 19 December 23