ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರ್ದೇಶನದ ಪ್ರಕಾರ, ಜುಲೈ 1ರಿಂದ ಆರಂಭವಾಗುವಂತೆ ಪಾವತಿ ಅಗ್ರಿಗೇಟರ್ಗಳು ಮತ್ತು ಗೇಟ್ವೇಗಳು ಹಾಗೂ ವ್ಯಾಪಾರಿಗಳು ತಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಗ್ರಾಹಕರ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ದತ್ತಾಂಶ (Data) ಸಂಗ್ರಹ ಮಾಡುವಂತಿಲ್ಲ. ಇದೀಗ ಆ ನಿಯಮಾವಳಿ ಜಾರಿಗೆ ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಸಮಯ ಬಾಕಿ ಇರುವಾಗಲೇ ವ್ಯಾಪಾರಿಗಳು ಆತಂಕಕ್ಕೆ ಗುರಿ ಆಗಿದ್ದಾರೆ. ಏಕೆಂದರೆ ಈ ನಿಯಮಾವಳಿಗೆ ಪರ್ಯಾಯ ಸರಿಯಾದ ಸಮಯಕ್ಕೆ ಸಿದ್ಧವಾಗಿಲ್ಲ. ಪಾವತಿ ಅಗ್ರಿಗೇಟರ್ಗಳು ಮತ್ತು ಗೇಟ್ವೇಗಳು ಹಾಗೂ ವ್ಯಾಪಾರಿಗಳು ಗ್ರಾಹಕರ ಕಾರ್ಡ್ ಕ್ರೆಡೆನ್ಷಿಯಲ್ಸ್ಗಳನ್ನು ತಮ್ಮ ಡೇಟಾಬೇಸ್ನಲ್ಲಿ ಜೂನ್ 30, 2022ರ ತನಕ ಮಾತ್ರ ಸಂಗ್ರಹಿಸುವುದಕ್ಕೆ ಸಾಧ್ಯ. ಏಕೆಂದರೆ ಈಗಾಗಲೇ ಎರಡು ಸಲ ಗಡುವು ವಿಸ್ತರಣೆ ಮಾಡಲಾಗಿದೆ. ತೀರಾ ಇತ್ತೀಚಿನದು ಅಂದರೆ ಡಿಸೆಂಬರ್ 23, 2021ರಂದು ಮಾಡಿದ ವಿಸ್ತರಣೆ.
ಪರ್ಯಾಯ ವ್ಯವಸ್ಥೆ ಇಲ್ಲ ಅಂತಾದರೆ ಗ್ರಾಹಕರು ತಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಜುಲೈ 1ರಿಂದ ಬಳಸುವಾಗ ಪ್ರತಿ ವಹಿವಾಟಿಗೂ ಹೊಸದಾಗಿ ಮಾಹಿತಿಗಳನ್ನು ನಮೂದಿಸಬೇಕು. ಅಂದರೆ 16 ಅಂಕಿಯ ಕಾರ್ಡ್ ಸಂಖ್ಯೆ, ಮುಕ್ತಾಯ ದಿನಾಂಕ ಮತ್ತು ಕಾರ್ಡ್ ವೆರಿಫಿಕೇಷನ್ ವ್ಯಾಲ್ಯೂ (CVV) ಭರ್ತಿ ಮಾಡಬೇಕು. ಈಗಾಗಲೇ ಪಾವತಿ ಕಂಪೆನಿಗಳು ಹಾಗೂ ಕಾರ್ಡ್ ನೆಟ್ವರ್ಕ್ಗಳಾದ ವೀಸಾ, ಮಾಸ್ಟರ್ಕಾರ್ಡ್ ಮತ್ತು ರುಪೇ ಕಾರ್ಡ್ ಪರ್ಯಾಯವನ್ನು ಅನುಷ್ಠಾನಕ್ಕೆ ತರಲು, ಅಂದರೆ ಕಾರ್ಡ್ ಆನ್ ಫೈಲ್ ಟೋಕನೈಸೇಷನ್ (CoFT) ಕಾರ್ಯ ನಿರ್ವಹಿಸುತ್ತದೆ. ಇದು ಕಾರ್ಡ್ ಮಾಹಿತಿಯನ್ನು “ಟೋಕನ್” ಸ್ವರೂಪದಲ್ಲಿ ಬದಲಿಯಾಗಿ ಕೆಲಸ ಮಾಡುತ್ತದೆ. ಅಂದಹಾಗೆ ಇದು ಬಳಕೆ ಮಾಡುವ ಪ್ರತಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮತ್ತು ವ್ಯಾಪಾರಿಗಳ ಪ್ಲಾಟ್ಫಾರ್ಮ್ಗೆ ವಿಶಿಷ್ಟವಾಗಿರುತ್ತದೆ.
ಇದನ್ನೂ ಓದಿ: Tokenisation: ಟೋಕನೈಸೇಷನ್ ಗಡುವನ್ನು ಜೂನ್ 30, 2022ಕ್ಕೆ ಮುಂದೂಡಿದ ಆರ್ಬಿಐ
ಆದರೆ, ಮರ್ಚೆಂಟ್ ಪೇಮೆಂಟ್ಸ್ ಅಲೈಯನ್ಸ್ ಆಫ್ ಇಂಡಿಯಾ (MPAI) ಹೇಳುವ ಪ್ರಕಾರ CoFT ಅನುಷ್ಠಾನಕ್ಕೆ ಅಗತ್ಯವಾದ ಎಕೋಸಿಸ್ಟಮ್ ಇನ್ನೂ ಸಿದ್ಧವಾಗಿಲ್ಲ. ಈ ಎಂಪಿಎಐಗೆ ಡಿಜಿಟಲ್ ಪ್ಲಾಟ್ಫಾರ್ಮ್ಗಳಾದ ನೆಟ್ಫ್ಲಿಕ್ಸ್, ಡಿಸ್ನಿ+ ಹಾಟ್ಸ್ಟಾರ್, ಸ್ಪಾಟಿಫೈ, ಝೂಮ್, ಮೈಕ್ರೋಸಾಫ್ಟ್ ಮತ್ತು ಪಾಲಿಸಿಬಜಾರ್ನಂಥ ಸದಸ್ಯರಿದ್ದಾರೆ. ಈಗಾಗಲೇ ಆರ್ಬಿಐ ಅನ್ನು ಸಂಪರ್ಕಿಸಿ, ಪರ್ಯಾಯ ವ್ಯವಸ್ಥೆ ಸಿದ್ಧವಾಗಿಲ್ಲ. ಅದಕ್ಕೂ ಮುಂಚೆ ಎಲ್ಲ ಪ್ಲಾಟ್ಫಾರ್ಮ್ಗಳಿಂದ ಡೇಟಾವನ್ನು ಅಳಿಸಿ ಹಾಕಿದಲ್ಲಿ ಗ್ರಾಹಕರಿಗೆ ಸಮಸ್ಯೆ ಆಗುತ್ತದೆ. ಹಾಗೂ ವ್ಯಾಪಾರಿಗಳಿಗೆ ಆದಾಯ ನಷ್ಟವಾಗುತ್ತದೆ ಎಂದು ತಿಳಿಸಲಾಗಿದೆ.
ಎಂಪಿಎಐ ಕಾರ್ಯಾಲಯದ ಸದಸ್ಯರಾದ ಮೋಹಿತ್ ಕಲ್ವಟಿಯಾ ಹೇಳಿದಂತೆ, ಸದ್ಯಕ್ಕೆ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಿಂದ ಪ್ರತಿ ನಿಮಿಷಕ್ಕೆ 900ರಿಂದ 1000 ವಹಿವಾಟುಗಳು ಅನುಷ್ಠಾನವಾಗುತ್ತಿವೆ. ಟೋಕನ್ಸ್ ಪರೀಕ್ಷೆ ಮಾಡುವ ಸಂದರ್ಭದಲ್ಲಿ ಒಂದು ನಿಮಿಷಕ್ಕೆ ಎರಡರಿಂದ ಎಂಟು ವಹಿವಾಟು ಮಾಡಬಹುದಷ್ಟೇ. ಆ ಎರಡರಿಂದ ಎಂಟು ವಹಿವಾಟಿನ ಯಶಸ್ಸಿನ ಪ್ರಮಾಣ ಕೂಡ ಶೇ 1ಕ್ಕಿಂತ ಕಡಿಮೆ ಎಂದು ಅವರು ತಿಳಿಸಿದ್ದಾರೆ. ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಸಿದ್ಧತೆ ಹೇಗಿದೆ ಅಂತ ಹೇಳಬೇಕೆಂದರೆ, 900ರಿಂದ 1000 ವಹಿವಾಟಿನಲ್ಲಿ ಶೇ 0.05ರಷ್ಟು ಮಾತ್ರ ನೋಡಲು ಸಾಧ್ಯ ಎನ್ನುತ್ತಾರೆ.
ಮತ್ತೂ ಕಾಲಾವಧಿ ವಿಸ್ತರಣೆಗೆ ಆರ್ಬಿಐ ಬಳಿ ಮನವಿ ಮಾಡಲಾಗಿದೆ. ಆದರೆ ಈ ಬಾರಿ ಮನವಿಗೆ ಸ್ಪಂದಿಸುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಅಂದಹಾಗೆ ಸಣ್ಣ ಪ್ರಮಾಣದ ವ್ಯವಹಾರ ನಡೆಸುವವರ ಪಾಲಿಗೆ ಇದು ಎರಡನೇ ದೊಡ್ಡ ಹೊಡೆತ. ಇದಕ್ಕೂ ಮುನ್ನ ರೆಕರಿಂಗ್ ಪಾವತಿಗಳಿಗೆ ನಿಯಮಾವಳಿ ಬಂದಿತ್ತು. ಅದರಿಂದ ಸಬ್ಸ್ಕ್ರಿಪ್ಷನ್ಗಳು ವಿಫಲವಾಗಿ, ಆದಾಯ ನಷ್ಟವಾಗುತ್ತಿತ್ತು. ಆದರೆ ರೆಕರಿಂಗ್ ಪಾವತಿ ಪ್ರಮಾಣ ಶೇ 3ರಷ್ಟು ಮಾತ್ರ. ಎಂಪಿಎಐನ ಶರಣ್ ಹೇಳುವಂತೆ, ಗ್ರಾಹಕರ ಡೇಟಾವನ್ನು ಅಳಿಸುವುದಕ್ಕೆ ನಮಗೆ ಯಾವುದೇ ತಕರಾರಿಲ್ಲ. ಆದರೆ ನಮ್ಮ ಬಳಿ ಸರ್ವರ್ಗಳು ಅದಕ್ಕೆ ಸಿದ್ಧವಾಗಬೇಕು. ಎಲ್ಲವೂ ಸರಿಯಿದೆ, ಗ್ರಾಹಕರಿಗೆ ಅಥವಾ ವರ್ತಕರಿಗೆ ಏನೂ ಸಮಸ್ಯೆ ಇಲ್ಲ ಎಂದಾದಾಗ ಅನುಷ್ಠಾನ ಮಾಡುವುದು ಸಮಸ್ಯೆ ಏನಲ್ಲ ಎಂದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: RBI: ಜನವರಿ 1, 2022ರಿಂದ ನಿಮ್ಮ ಕಾರ್ಡ್ ಡೇಟಾ ಆನ್ಲೈನ್ನಲ್ಲಿ ಸೇವ್ ಆಗಲ್ಲ; ಇಲ್ಲಿದೆ ಆರ್ಬಿಐ ಹೊಸ ನಿಯಮ