Tokenisation: ಟೋಕನೈಸೇಷನ್ ಗಡುವನ್ನು ಜೂನ್ 30, 2022ಕ್ಕೆ ಮುಂದೂಡಿದ ಆರ್‌ಬಿಐ
ಕಾರ್ಡ್ಸ್ ಟೋಕನೈಸೇಷನ್ ಗಡುವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು 2022ರ ಜೂನ್ 30ನೇ ತಾರೀಕಿನ ತನಕ ವಿಸ್ತರಣೆ ಮಾಡಿದೆ. ಅದಕ್ಕೆ ಕಾರಣ ಏನು ಎಂಬುದನ್ನು ಸಹ ವಿವರಿಸಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಡಿಸೆಂಬರ್ 23ರ ಗುರುವಾರದಂದು ಕಾರ್ಡ್ ಟೋಕನೈಸೇಷನ್ ಗಡುವನ್ನು ಜೂನ್ 30, 2022ರ ವರೆಗೆ ವಿಸ್ತರಿಸಿದೆ. “COF ಡೇಟಾವನ್ನು ಸಂಗ್ರಹಿಸುವ ಟೈಮ್‌ಲೈನ್ ಅನ್ನು ಆರು ತಿಂಗಳವರೆಗೆ ವಿಸ್ತರಿಸಲಾಗಿದೆ. ಅಂದರೆ ಜೂನ್ 30, 2022ರ ವರೆಗೆ; ನಂತರ, ಅಂತಹ ಡೇಟಾವನ್ನು ಅಳಿಸಲಾಗುತ್ತದೆ,” ಎಂದು ಕೇಂದ್ರ ಬ್ಯಾಂಕ್ ತನ್ನ ಸುತ್ತೋಲೆಯಲ್ಲಿ ಎಲ್ಲ ಪಾವತಿ ಸಿಸ್ಟಮ್ ಆಪರೇಟರ್‌ಗಳಿಗೆ ನಿರ್ದೇಶಿಸಿದೆ. ಟೋಕನೈಸೇಷನ್ ಜತೆಗೆ ಉದ್ಯಮದ ಇತರ ಭಾಗೀದಾರರು ಯಾವುದೇ ಪರ್ಯಾಯ ಬಳಕೆಯ ವಿಧಾನವನ್ನು (ಸಂಚಿತ ಇ-ಆದೇಶಗಳು, ಇಎಂಐ ಆಯ್ಕೆಗಳು, ಇತ್ಯಾದಿ) ಅಥವಾ ವಹಿವಾಟಿನ ನಂತರದ ಚಟುವಟಿಕೆಯನ್ನು (ಚಾರ್ಜ್‌ಬ್ಯಾಕ್ ನಿರ್ವಹಣೆ, ವಿವಾದ ಪರಿಹಾರ, ರಿವಾರ್ಡ್ / ಲಾಯಲ್ಟಿ ಕಾರ್ಯಕ್ರಮ ಇತ್ಯಾದಿಗಳನ್ನು ಒಳಗೊಂಡಂತೆ) ನಿರ್ವಹಿಸಲು ಪರ್ಯಾಯ ಕಾರ್ಯವಿಧಾನಗಳನ್ನು ರೂಪಿಸಬಹುದು.) ” ಪ್ರಸ್ತುತ ಕಾರ್ಡ್ ವಿತರಕರು ಮತ್ತು ಕಾರ್ಡ್ ನೆಟ್‌ವರ್ಕ್‌ಗಳನ್ನು ಹೊರತುಪಡಿಸಿ ಇತರ ಘಟಕಗಳಿಂದ ಕಾರ್ಡ್ ಡೇಟಾವನ್ನು (ಸಿಒಎಫ್) ಸಂಗ್ರಹಿಸುವ ಅಗತ್ಯವಿದೆ ಎಂದು ಆರ್‌ಬಿಐ ತಿಳಿಸಿದೆ.
ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಗದಿಪಡಿಸಿದ ಗಡುವು ಡಿಸೆಂಬರ್ 31, 2021ರಂದು ಮುಕ್ತಾಯಗೊಳ್ಳಲಿದೆ ಎಂದು ವಿವಿಧ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಭಾಗೀದಾರರ ಆತಂಕದ ನಡುವೆ ಬ್ಯಾಂಕಿಂಗ್ ವಲಯದ ನಿಯಂತ್ರಕವು ಗಡುವನ್ನು ಮುಂದಕ್ಕೆ ಹಾಕುವ ಸಾಧ್ಯತೆಯಿದೆ ಎನ್ನಲಾಗಿತ್ತು.
ಬ್ಯಾಂಕ್‌ಗಳ ಉದ್ಯಮ ಲಾಬಿ, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA), ಟೋಕನೈಸೇಷನ್ ಗಡುವಿನ ವಿಸ್ತರಣೆಗಾಗಿ ಆರ್ಬಿಐಗೆ ಮನವಿಯನ್ನು ನೀಡಿತ್ತು. ಅಲ್ಲದೆ, ಕೆಲವು ಬ್ಯಾಂಕ್‌ಗಳು ಸಹ ವಿಸ್ತರಣೆಯನ್ನು ಕೋರಿ ನಿಯಂತ್ರಕರನ್ನು ಸಂಪರ್ಕಿಸಿದ್ದವು.
“ಬ್ಯಾಂಕ್‌ಗಳು ಸಿದ್ಧವಾಗಿವೆ. ಆದರೆ ಸಮಸ್ಯೆಯು ಇತರ ಭಾಗೀದಾರರೊಂದಿಗೆ ಇದೆ. ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಿಗಳಲ್ಲಿದೆ,” ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮೂಲಗಳು ತಿಳಿಸಿರುವುದಾಗಿ ಪ್ರಮುಖ ವಾಣಿಜ್ಯ ವೆಬ್ಸೈಟ್ವೊಂದು ವರದಿ ಮಾಡಿದೆ.
ಇದನ್ನೂ ಓದಿ: Card Tokenisation: ಇನ್ನೇನು 2022ರ ಜನವರಿಯಿಂದ ಬರಲಿದೆ ಕಾರ್ಡ್ ಟೋಕನೈಸೇಷನ್; ಏನಿದು, ಉಪಯೋಗ ಏನು?