RBI: ಜನವರಿ 1, 2022ರಿಂದ ನಿಮ್ಮ ಕಾರ್ಡ್ ಡೇಟಾ ಆನ್​ಲೈನ್​ನಲ್ಲಿ ಸೇವ್​ ಆಗಲ್ಲ; ಇಲ್ಲಿದೆ ಆರ್​ಬಿಐ ಹೊಸ ನಿಯಮ

ಜನವರಿ 1, 2022ರಿಂದ ಅನ್ವಯ ಆಗುವಂತೆ ಒಂದು ಕ್ಲಿಕ್​ನಲ್ಲಿ ಆನ್​ಲೈನ್ ಖರೀದಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಏಕೆಂದರೆ ಅದಕ್ಕಾಗಿ ಆರ್​ಬಿಐ ಹೊಸ ನಿಯಮ ತಂದಿದೆ.

RBI: ಜನವರಿ 1, 2022ರಿಂದ ನಿಮ್ಮ ಕಾರ್ಡ್ ಡೇಟಾ ಆನ್​ಲೈನ್​ನಲ್ಲಿ ಸೇವ್​ ಆಗಲ್ಲ; ಇಲ್ಲಿದೆ ಆರ್​ಬಿಐ ಹೊಸ ನಿಯಮ
ಆರ್​ಬಿಐ
TV9kannada Web Team

| Edited By: Srinivas Mata

Sep 08, 2021 | 12:04 AM

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಂಗಳವಾರ ತಿಳಿಸಿರುವಂತೆ, ಜನವರಿ 1ರಿಂದ ಅನ್ವಯ ಆಗುವ ರೀತಿಯಲ್ಲಿ ವ್ಯಾಪಾರಿ ತಾಣಗಳಲ್ಲಿ ಒಂದು ಕ್ಲಿಕ್ ಖರೀದಿ ಸಾಧ್ಯವಿಲ್ಲ. ಏಕೆಂದರೆ ಕಾರ್ಡ್ ಟೋಕನೈಸೇಷನ್ ಗಡುವನ್ನು ಈಗಾಗಲೇ ಒಪ್ಪಿರುವ ಜನವರಿ 1, 2022ರ ಆಚೆಗೆ ವಿಸ್ತರಿಸುವುಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರೀಯ ಬ್ಯಾಂಕ್ ಹೇಳಿದೆ. ಆನ್‌ಲೈನ್ ವಹಿವಾಟಿನಲ್ಲಿ ಟೋಕನೈಸೇಷನ್ ಅನ್ನು ಬಳಸಲಾಗುತ್ತದೆ. ಅಲ್ಲಿ ಅದಾಗಲೇ ಟೈಪ್ ಮಾಡಿದ ಕಾರ್ಡ್ ವಿವರಗಳನ್ನು Randim ಅಂಕಿಗಳ ಮೂಲಕ ಬದಲಾಯಿಸಲಾಗುತ್ತದೆ. ಈ ರೀತಿಯಾಗಿ ಸೂಕ್ಷ್ಮ ಕಾರ್ಡ್ ವಿವರಗಳ ಸೋರಿಕೆಯನ್ನು ತಡೆಗಟ್ಟುವ ಮೂಲಕ ಗ್ರಾಹಕರನ್ನು ರಕ್ಷಿಸಲಾಗುವುದು. “ಜನವರಿ 1, 2022ರಿಂದ ಜಾರಿಗೆ ಬರುವಂತೆ, ಕಾರ್ಡ್ ನೀಡುವವರು ಮತ್ತು/ಅಥವಾ ಕಾರ್ಡ್ ನೆಟ್‌ವರ್ಕ್‌ಗಳನ್ನು ಹೊರತುಪಡಿಸಿ, ಕಾರ್ಡ್ ವಹಿವಾಟು/ಪಾವತಿ ಚೈನ್​ನಲ್ಲಿ ಯಾವುದೇ ಘಟಕವು ನಿಜವಾದ ಕಾರ್ಡ್ ಡೇಟಾವನ್ನು ಸಂಗ್ರಹಿಸುವುದಿಲ್ಲ,” ಎಂದು ಆರ್​ಬಿಐ ಹೇಳಿಕೆಯಲ್ಲಿ ತಿಳಿಸಿದೆ. “ಯಾವುದಾದರೂ ಈ ಹಿಂದೆ ಸಂಗ್ರಹಿಸಿದ ಡೇಟಾ ಇದ್ದಲ್ಲಿ ಅವುಗಳನ್ನು ಇಲ್ಲದಂತೆ ಮಾಡಲಾಗುತ್ತದೆ.”

ಇದರೊಂದಿಗೆ, ಮೊಬೈಲ್ ಫೋನ್, ಟ್ಯಾಬ್​ಲೆಟ್, ಲ್ಯಾಪ್​ಟಾಪ್, ಡೆಸ್ಕ್​ಟಾಪ್, ವೇರಬಲ್ (ರಿಸ್ಟ್ ವಾಚ್, ಬ್ಯಾಂಡ್ ಇತ್ಯಾದಿ) ಇಂಟರ್​ನೆಟ್ ಆಫ್ ಥಿಂಗ್ಸ್​ (ಐಒಟಿ) ಸಾಧನಗಳು ಮುಂತಾದವು ಎಲ್ಲಕ್ಕೂ ಟೋಕನೈಸೇಷನ್ ಕಡ್ಡಾಯ ಮಾಡಲಾಗಿದೆ. ಇದು ಪೇಮೆಂಟ್ ಅಗ್ರಿಗೇಟರ್​ಗಳಿಗೂ ಹಾಗೂ ಅವರ ಮೂಲಕ ತೆರಳುವ ವರ್ತಕರಿಗೂ ಅನ್ವಯ ಆಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕಾರ್ಡ್ ವಿವರಗಳನ್ನು ಎಲ್ಲಿಯೂ ಉಳಿಸಲಾಗುವುದಿಲ್ಲ. ಮತ್ತು ಪ್ರತಿ ಬಾರಿ ಗ್ರಾಹಕರು ಆನ್‌ಲೈನ್ ವಹಿವಾಟು ನಡೆಸಬೇಕಾದರೆ 16 ಅಂಕಿಗಳನ್ನು ಮತ್ತು ಎಲ್ಲ ವಿವರಗಳನ್ನು ಹೊಸದಾಗಿ ನಮೂದಿಸಬೇಕು, ಸಂಖ್ಯೆಗಳನ್ನು ಟೈಪ್ ಮಾಡಬೇಕು. ಕಾರ್ಡ್ ವಿವರಗಳನ್ನು ತಮ್ಮೊಂದಿಗೆ ಉಳಿಸಲು ಅಥವಾ ಅವರು ಸೇವೆ ಸಲ್ಲಿಸುವ ವ್ಯಾಪಾರಿ ತಾಣಗಳಲ್ಲಿ ಇರಿಸಿಕೊಳ್ಳಲು ಲಾಬಿ ಮಾಡುತ್ತಿದ್ದ ಪೇಮೆಂಟ್​ ಅಗ್ರಿಗೇಟರ್​ಗಳಿಗೆ ಇದು ಹೊಡೆತ ನೀಡುತ್ತದೆ. ಈ ಆದೇಶದ ನಂತರ ಒಂದು ಕ್ಲಿಕ್ ಖರೀದಿ ಇನ್ನು ಮುಂದೆ ಸಾಧ್ಯವಾಗುವುದಿಲ್ಲ.

ಆದರೆ, ವಹಿವಾಟು ಟ್ರ್ಯಾಕಿಂಗ್ ಅಥವಾ ಸಮನ್ವಯದ ಉದ್ದೇಶಗಳಿಗಾಗಿ ಸಂಸ್ಥೆಗಳು ಕಾರ್ಡ್​ನ ಕೊನೆಯ ನಾಲ್ಕು ಅಂಕಿಗಳನ್ನು ಮತ್ತು ಕಾರ್ಡ್ ನೀಡುವವರ ಹೆಸರನ್ನು ಸಂಗ್ರಹಿಸಬಹುದು- ಅದು ಕೂಡ “ಅನ್ವಯವಾಗುವ ಮಾನದಂಡಗಳಿಗೆ ಅನುಸಾರವಾಗಿ.” “ಒಳಗೊಂಡಿರುವ ಎಲ್ಲ ಸಂಸ್ಥೆಗಳಿಂದ ಸಂಪೂರ್ಣ ಮತ್ತು ನಿರಂತರ ನಿಯಮಾವಳಿಗಳ ಅನುಸರಣೆಗೆ ತಕ್ಕಂತೆ” ಆರ್‌ಬಿಐನಿಂದ ಕಾರ್ಡ್ ಜಾಲಗಳನ್ನು ಜವಾಬ್ದಾರರನ್ನಾಗಿ ಮಾಡಿದೆ. ಆರ್​ಬಿಐ ಹೇಳಿರುವಂತೆ, ಕಾರ್ಡ್ ನೀಡುವವರು ಕಾರ್ಡ್ ಟೋಕನೈಸೇಷನ್ ಸೇವೆಗಳನ್ನು ಟೋಕನ್ ಸೇವಾ ಪೂರೈಕೆದಾರರಂತೆ (TSPs) ನೀಡಬಹುದು. ಮತ್ತು ಈ ಸೇವೆಯನ್ನು ಅವರಿಗೆ ನೀಡಲಾದ ಅಥವಾ ಅಂಗೀಕೃತಗೊಂಡ ಕಾರ್ಡ್‌ಗಳಿಗೆ ಮಾತ್ರ ಒದಗಿಸಬಹುದು. ಅದೇ TSPಗಳು ಕಾರ್ಡ್ ಡೇಟಾವನ್ನು ಟೋಕನೈಸ್ ಮಾಡಲು ಮತ್ತು ಡಿ-ಟೋಕನೈಸ್ ಮಾಡಲು ಸಾಧ್ಯವಾಗುತ್ತದೆ.

ಟೋಕನೈಸೇಷನ್ ಅನ್ನು ಗ್ರಾಹಕರ ಒಪ್ಪಿಗೆಯ ಆಧಾರದ ಮೇಲೆ ಮಾಡಬೇಕು, ಹೆಚ್ಚುವರಿ ಅಂಶ ದೃಢೀಕರಣದ ಮೂಲಕ ಮೌಲ್ಯಮಾಪನ ಮಾಡಬೇಕು ಎಂದು ಆರ್‌ಬಿಐ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಪೇಮೆಂಟ್​ ಅಗ್ರಿಗೇಟರ್​ಗಳು ಮತ್ತು ಗೇಟ್‌ವೇಗಳು ಉದ್ಯಮವು ಅತ್ಯುತ್ತಮ ಪದ್ಧತಿಯನ್ನೇ ಅನುಸರಿಸುತ್ತವೆ ಮತ್ತು ಆರ್‌ಬಿಐ ಯಾವಾಗಲೂ ಕಠಿಣ ನಿಯಮಗಳನ್ನು ಮತ್ತು ಅತ್ಯುನ್ನತ ಮಾನದಂಡಗಳನ್ನು ಬಯಸುತ್ತದೆ ಎಂದು ವಾದಿಸಿದ್ದವು. ಪಿಸಿಐ ಡಿಎಸ್‌ಎಸ್‌ ಲೆವೆಲ್‌ 1 ಪ್ರಮಾಣೀಕೃತ ವ್ಯಾಪಾರಿಗಳಿಗೆ ಕಾರ್ಡ್ ವಿವರಗಳನ್ನು ಸಂಗ್ರಹಿಸಲು ಆರ್‌ಬಿಐ ಅವಕಾಶ ನೀಡಬೇಕು ಎಂದು ಅವರು ಕೋರಿದ್ದರು. ಪಿಸಿಐ ಡಿಎಸ್ಎಸ್ ಅಥವಾ ಪಾವತಿ ಕಾರ್ಡ್ ಇಂಡಸ್ಟ್ರಿ ಡೇಟಾ ಸೆಕ್ಯೂರಿಟಿ ಸ್ಟ್ಯಾಂಡರ್ಡ್ ಅಡಿಯಲ್ಲಿ ಲಭ್ಯವಿರುವ ಅತ್ಯುನ್ನತ ಮಟ್ಟ 1 ಆಗಿದೆ.

ಇದನ್ನೂ ಓದಿ: RBI Guidelines For Lockers: ಬ್ಯಾಂಕ್​ ಲಾಕರ್​ಗಳಿಗೆ ಸಂಬಂಧಿಸಿದಂತೆ ಆರ್​ಬಿಐನಿಂದ ಮಹತ್ವದ ಮಾರ್ಗಸೂಚಿ

(RBI Scraps One Click Purchase From January 1 2022)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada