PayTM Cancel Protect: ಬುಕಿಂಗ್ ರದ್ದು ಮಾಡಿದರೆ ಕ್ಯಾನ್ಸಲೇಶನ್ ಫೀ ಇಲ್ಲ: ಪೇಟಿಎಂ ಹೊಸ ಆಫರ್
No Cancellation Charges: ಪೇಟಿಎಂ ಮೂಲಕ ವಿಮಾನ ಮತ್ತು ಬಸ್ಸುಗಳ ಟಿಕೆಟ್ ಅನ್ನು ನಿಶ್ಚಂತೆಯಾಗಿ ಬುಕ್ ಮಾಡಬಹುದು. ಒಂದು ವೇಳೆ ಅಕಸ್ಮಾತ್ತಾಗಿ ಬುಕಿಂಗ್ ರದ್ದು ಮಾಡಿದರೂ ಪೂರ್ತಿ ಹಣ ವಾಪಸ್ ಬರುತ್ತದೆ. ಈ ಬಗ್ಗೆ ಇನ್ನಷ್ಟು ವಿವರ ಇಲ್ಲಿದೆ.
ನಾವು ಹಲವು ಬಾರಿ ಫ್ಲೈಟ್, ಬಸ್ಸು, ರೈಲು ಇತ್ಯಾದಿಯಲ್ಲಿ ಮುಂಗಡವಾಗಿ ಸೀಟು ಕಾಯ್ದಿರಿಸುತ್ತೇವೆ (Seat Booking). ಕೆಲವೊಮ್ಮೆ ಕಾರಣಾಂತರಗಳಿಂದ ಬುಕಿಂಗ್ ರದ್ದು ಮಾಡಬೇಕಾಗುತ್ತದೆ. ಆದರೆ, ರದ್ದು ಮಾಡಲು ಶುಲ್ಕ ಪಾವತಿಸಬೇಕಾಗುತ್ತದೆ. ಅಂದರೆ ಕ್ಯಾನ್ಸಲೇಶನ್ ಚಾರ್ಜಸ್ (Cancellation Charges) ತೆರಬೇಕಾಗುತ್ತದೆ. ಅಪರೂಪಕ್ಕೊಮ್ಮೆ ಇಂಥದ್ದು ಆದರೆ ಪರವಾಗಿಲ್ಲ, ಆಗಾಗ್ಗೆ ಈ ರೀತಿ ಬುಕಿಂಗ್ ಮಾಡಿ, ರದ್ದು ಮಾಡುವುದು ಆದರೆ ಸಾಕಷ್ಟು ನಷ್ಟ ಆಗುತ್ತದೆ. ನಾವು ಪ್ರಯಾಣಿಸುವ ದಿನ ಸಮೀಪವಾದಷ್ಟೂ ರದ್ದತಿ ಶುಲ್ಕ ಹೆಚ್ಚು ಇರುತ್ತದೆ. ಇಂಥ ಫಜೀತಿ ತಪ್ಪಿಸಲು ಪೇಟಿಎಂ ಕ್ಯಾನ್ಸಲ್ ಪ್ರೊಟೆಕ್ಟ್ (Cancel Protect) ಎಂದು ಹೊಸ ಆಫರ್ ಮುಂದಿಟ್ಟಿದೆ.
ಈ ಯೋಜನೆ ಪ್ರಕಾರ, ಪೇಟಿಎಂ ಮೂಲಕ ನೀವು ವಿಮಾನ ಮತ್ತು ಬಸ್ಸುಗಳ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಆದರೆ ನಿಮ್ಮ ಹಣ ಸಂಪೂರ್ಣ ರೀಫಂಡ್ ಆಗುತ್ತದೆ. ಯಾವುದೇ ಕ್ಯಾನ್ಸಲೇಶನ್ ಶುಲ್ಕ ಬೀಳುವುದಿಲ್ಲ. ಆದರೆ, ಫ್ಲೈಟ್ ಹೊರಡುವ ಕನಿಷ್ಠ 24 ಗಂಟೆ ಮೊದಲು ಬುಕಿಂಗ್ ಕ್ಯಾನ್ಸಲ್ ಆಗಿರಬೇಕು. ಬಸ್ ಆದರೆ ಹೊರಡುವ ಸಮಯಕ್ಕೆ ಕನಿಷ್ಠ 4 ಗಂಟೆ ಮೊದಲು ರದ್ದಾಗಿರಬೇಕು. ಎಷ್ಟೇ ಮೊತ್ತದ ಟಿಕೆಟ್ ಆದರೂ ಸಂಪೂರ್ಣ ಹಣ ವಾಪಸ್ ಬರುತ್ತದೆ.
ರದ್ದತಿ ರಕ್ಷಣೆಗೆ ಶುಲ್ಕ
ಈ ರೀತಿ ಪೇಟಿಎಂ ಸುಖಾಸುಮ್ಮನೆ ಕ್ಯಾನ್ಸಲ್ ಪ್ರೊಟೆಕ್ಟ್ ಆಫರ್ ಕೊಡುತ್ತಿಲ್ಲ. ಅದಕ್ಕೂ ಬೆಲೆ ನಿಗದಿ ಮಾಡಿದೆ. ಒಂದು ರೀತಿಯಲ್ಲಿ ಇದು ಆಕ್ಸಿಡೆಂಟ್ ಇನ್ಷೂರೆನ್ಸ್ ಸ್ಕೀಮ್ನಂತೆ. ವಿಮಾನ ಟಿಕೆಟ್ ಬುಕಿಂಗ್ ರದ್ದತಿಯಿಂದ ರಕ್ಷಣೆ ಪಡೆಯಬಯಸುವವರು ಕನಿಷ್ಠ 149 ರೂನಿಂದ ಪ್ರೀಮಿಯಂ ಕಟ್ಟಬೇಕು. ಬಸ್ ಟಿಕೆಟ್ಗಳಿಗಾದರೆ 25 ರೂನಿಂದ ದರ ಶುರುವಾಗುತ್ತದೆ.
ಇದನ್ನೂ ಓದಿ: PAN Updates: ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆಯಾ? ತಿಳಿದುಕೊಳ್ಳುವುದು ಹೇಗೆ?
ಪೇಟಿಎಂ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ. ಪೇಟಿಎಂ ಕಂಪನಿಯ ವಕ್ತಾರರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ, ನಮ್ಮ ಅಪ್ಲಿಕೇಶನ್ನಲ್ಲಿ ಹಲವು ಗ್ರಾಹಕಸ್ನೇಹಿ ಫೀಚರ್ಗಳನ್ನು ಪರಿಚಯಿಸಿದ್ದೇವೆ. ಪ್ರಯಾಣಕ್ಕಾಗಿ ಬುಕಿಂಗ್ ಮಾಡುವ ಕಾರ್ಯವನ್ನು ಸರಳಗೊಳಿಸಿದ್ದೇವೆ. ಭಾರತೀಯ ಪ್ರಯಾಣಿಕರ ಅಗತ್ಯಗಳಿಗೆ ತಕ್ಕಂತೆ ಸೇವೆ ನೀಡಿದ್ದೇವೆ. ಕ್ಯಾನ್ಸಲ್ ಪ್ರೊಟೆಕ್ಟ್ ಇಂಥದ್ದೊಂದು ಫೀಚರ್ ಆಗಿದೆ. ಟಿಕೆಟ್ ಕಾಯ್ದಿರಿಸುವ ಕೆಲಸವನ್ನು ಸುಲಭ ಮಾಡಿಕೊಡುವುದರ ಜೊತೆಗೆ ಟ್ರಾವಲ್ ಬುಕಿಂಗ್ ಮೇಲೆ ವಿವಿಧ ರೀತಿಯ ಆಫರ್, ಡಿಸ್ಕೌಂಟ್ಗಳನ್ನು ಒದಗಿಸುತ್ತಿರುತ್ತೇವೆ ಎಂದು ಹೇಳಿದ್ದಾರೆ.